Advertisement

ದಾಖಲೆಗಳಿಗಾಗಿ ಬಿಎಸ್‌ವೈ ಆಪ್ತನಿಂದಲೇ ಕಿಡ್ನಾಪ್‌ ಸುಪಾರಿ

11:20 AM Aug 13, 2017 | Team Udayavani |

ಬೆಂಗಳೂರು: ವಿಧಾನಪರಿಷತ್‌ ವಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ಆಪ್ತ ವಿನಯ್‌ ಅಪಹರಣ ಮಾಡಲು ಸುಪಾರಿ ಕೊಟ್ಟಿದ್ದೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಆಪ್ತ ಸಂತೋಷ್‌ ಕುಮಾರ್‌ ಎಂದು ಪ್ರಕರಣದ ಪ್ರಮುಖ ಆರೋಪಿಗಳಾದ ಬಿಜೆಪಿ ಮೋರ್ಚಾದ ಕಾರ್ಯದರ್ಶಿ ರಾಜೇಂದ್ರ ಹಾಗೂ ರೌಡಿಶೀಟರ್‌ ಪ್ರಶಾಂತ್‌ ಪೊಲೀಸರ ವಿಚಾರಣೆ ವೇಳೆ ತಪ್ಪೊಪ್ಪಿಗೆ ನೀಡಿದ್ದಾರೆ.

Advertisement

“ಈಶ್ವರಪ್ಪ ಅವರಿಗೆ ಸೇರಿದ ದಾಖಲೆಗಳು ವಿನಯ್‌ ಬಳಿಯಿದ್ದು, ಆತನನ್ನು ಅಪಹರಿಸಿ ಅಥವಾ ಹಲ್ಲೆ ನಡೆಸಿಯಾದರೂ ಆತನ ಬಳಿಯಿರುವ ಪೆನ್‌ಡ್ರೈವ್‌, ಲ್ಯಾಪ್‌ಟಾಪ್‌ ಮತ್ತು ಮೊಬೈಲ್‌ ಅನ್ನು ಕಸಿದುಕೊಳ್ಳುವಂತೆ ಸಂತೋಷ್‌ ಹೇಳಿದ್ದರು. ಅದರಂತೆ ನಾನು ರೌಡಿಶೀಟರ್‌ ಪ್ರಶಾಂತ್‌ ಹಾಗೂ ಸಹಚರರಿಗೆ ಸುಪಾರಿ ಕೊಟ್ಟಿದ್ದೆ, ವಿನಯ್‌ ಅಪಹರಣ ಮಾಡುವ ಸಂದರ್ಭದಲ್ಲಿ ನಾನು ಸ್ಥಳದಲ್ಲೇ ಇದ್ದೆ. ಏಕೆಂದರೆ, ವಿನಯ್‌ ಹಿಂಬಾಲಿಸುತ್ತಿದ್ದ ಪ್ರಶಾಂತ್‌ ತಂಡವನ್ನು ನಾನು ಬೈಕ್‌ನಲ್ಲಿ ಫಾಲೋ ಮಾಡುತ್ತಿದ್ದೆ.

ಈ ರೀತಿ ಮಾಡಲು ಯಾವುದೇ ಹಣ ಪಡೆದುಕೊಂಡಿಲ್ಲ. ಆದರೆ, ಭವಿಷ್ಯದಲ್ಲಿ ರಾಜಕೀಯದಲ್ಲಿ ಅವಕಾಶ ಕೊಡಿಸುವುದಾಗಿ ಸಂತೋಷ್‌ ಆಶ್ವಾಸನೆ ಕೊಟ್ಟಿದ್ದರು. ಜತೆಗೆ ಕೆಲ ಸಮಸ್ಯೆಗಳಿದ್ದು, ಅವುಗಳನ್ನು ಪರಿಹರಿಸಿಕೊಡುವಂತೆ ಮನವಿ ಮಾಡಿದ್ದೇ. ಈ ವಿಚಾರ ದೊಡ್ಡವರಿಗೆ(ಬಿಎಸ್‌ವೈ) ಗೊತ್ತಿಲ್ಲ’ ಎಂದು ರಾಜೇಂದ್ರ ಎಸಿಪಿ ಬಡಿಗೇರ್‌ ನೇತೃತ್ವದ ತಂಡದ ಮುಂದೆ ಹೇಳಿಕೆ ನೀಡಿದ್ದಾನೆ.

ರೌಡಿಶೀಟರ್‌ ಪ್ರಶಾಂತ್‌ ತಪ್ಪೊಪ್ಪಿಗೆ
ಇತ್ತೀಚೆಗೆ ಯಡಿಯೂರಪ್ಪ ಅವರ ಮನೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ನಾನು(ಪ್ರಶಾಂತ್‌), ಸ್ನೇಹಿತರಾದ ಇಂದ್ರ, ಕಿಶೋರ್‌, ಅಯೂಬ್‌, ಉಮಾಶಂಕರ್‌ ಮತ್ತು ಸೆಲ್ವಾ ಹೋಗಿದ್ದೆವು. ಆಗ ಇಂದ್ರ, ರಾಜೇಂದ್ರ  ಅವರ ಕೆಲಸ ಮಾಡಿಕೊಡಬೇಕು ಎಂದು ಪ್ರತ್ಯೇಕವಾಗಿ ಕರೆದೊಯ್ದು ಕೇಳಿಕೊಂಡಿದ್ದ. ನಂತರ ರಾಜೇಂದ್ರ ಮತ್ತೂಮ್ಮೆ ಪ್ರತ್ಯೇಕವಾಗಿ ಕರೆದೊಯ್ದು ಈಶ್ವರಪ್ಪ ಅವರ ಜತೆಯಲ್ಲಿರುವ ವ್ಯಕ್ತಿ(ವಿನಯ್‌) ಬಳಿ ಲ್ಯಾಪ್‌ಟಾಪ್‌, ಪೆನ್‌ಡ್ರೈವ್‌ ಮತ್ತು ಮೊಬೈಲ್‌ ಕಸಿದುಕೊಂಡು ಬರಬೇಕು ಎಂದಿದ್ದರು.

ಇದಕ್ಕೆ  ಪ್ರತಿಯಾಗಿ ನನ್ನ ಮೇಲಿರುವ ಎಲ್ಲ ರೌಡಿಶೀಟರ್‌ ಪ್ರಕರಣಗಳನ್ನು ತೆಗೆಸುತ್ತೇನೆ ಎಂದಿದ್ದರು. ನಂತರ ಸಂತೋಷ್‌ನನ್ನು ರಾಜೇಂದ್ರ ಪರಿಚಯಿಸಿಕೊಟ್ಟ. ಅದರಂತೆ ಮೇ 10ರಂದು ಬೆಳಗ್ಗೆಯೇ ವಿನಯ್‌ ಮನೆಗೆ ಹೋಗಿದ್ದೆವು. ಸುಮಾರು 10 ಗಂಟೆ ಸುಮಾರಿಗೆ ಮನೆಯಿಂದ ಹೊರಟ ವಿನಯ್‌ನನ್ನು ನಾವುಗಳು ಕಾರಿನಲ್ಲಿ ಫಾಲೋ ಮಾಡಿಕೊಂಡು ಹೊರಟೆವು. ನಂತರ ರಾಜೇಂದ್ರ ಬೈಕ್‌ನಲ್ಲಿ ನಮ್ಮನ್ನು ಹಿಂಬಾಲಿಸುತ್ತಿದ್ದ.

Advertisement

ಮಲ್ಲೇಶ್ವರಂ ಸೇರಿದಂತೆ ಹತ್ತಾರು ಕಡೆ ವಿನಯ್‌ ಹಿಂದೆ ಓಡಾಡಿದೆವು. ಇಸ್ಕಾನ್‌ ದೇವಾಲಯದ ಬಳಿಯ ಮನೆಯೊಂದಕ್ಕೆ ವಿನಯ್‌ ಹೋಗಿದ್ದರು. 3 ಗಂಟೆಗಳಾದರೂ ಹೊರಗಡೆ ಬರಲಿಲ್ಲ. ಈ ವೇಳೆ ರಾಜೇಂದ್ರ ಬಂದು ನಮ್ಮ ಕಾರಿನ ಚಾಲಕನಿಗೆ ಈಗಲೇ ಅಪಹರಣ ಮಾಡಬೇಕು ಎಂದು ಸೂಚಿಸಿ ಹೊರಟ. ಬಳಿಕ ಆ ಮನೆಯಿಂದ ಹೊರಬಂದ ವಿನಯ್‌ನನ್ನು ಹಿಂಬಾಲಿಸಿ ಇಸ್ಕಾನ್‌ ದೇವಾಲಯದ ವಿನಯ್‌ ಕಾರಿಗೆ ಡಿಕ್ಕಿಹೊಡೆಸಲಾಯಿತು.

ಬಳಿಕ ಚಾಲಕನೊಂದಿಗೆ ಜಗಳ ತೆಗೆದಾಗ ವಿನಯ್‌ ಕಾರಿನಿಂದ ಕೆಳಗಿಳಿದು ಮಾತನಾಡಲು ಬಂದರು. ಆಗ, ವಿನಯ್‌ನನ್ನು ಉಮಕಾಂತ್‌ ಸೇರಿದಂತೆ ನಾವೆಲ್ಲ ಬಲವಂತವಾಗಿ ಕಾರಿನೊಳಗೆ ಕೂರಿಸಿಕೊಳ್ಳಲು ಯತ್ನಿಸಿದೆವು. ಆದರೆ, ಆತ ಜೋರಾಗಿ ಕೂಗಿಕೊಂಡದ್ದರಿಂದ ಸಾಧ್ಯವಾಗಲಿಲ್ಲ. ಈ ವೇಳೆ ರಾಜೇಂದ್ರ ಕೊಟ್ಟಿದ್ದ ಪೆಪ್ಪರ್‌ ಸ್ಪ್ರೆ„ ಹಾಗೂ ಹಾಕಿ ಬ್ಯಾಟ್‌ನ್ನು ಬಳಸಲಿಲ್ಲ. ಕೂಡಲೇ ಅಲ್ಲಿಂದ ಎಲ್ಲರೂ ಪರಾರಿಯಾದೆವು. ದೇವನಹಳ್ಳಿಯಲ್ಲಿ ಎಲ್ಲರನ್ನು ಡ್ರಾಪ್‌ ಮಾಡಿ ನಾನು ಮನೆಗೆ ಹೋದೆ.

ಒಂದೆರಡು ದಿನಗಳ ಬಳಿಕ ಕಿಶೋರ್‌ ಸಹೋದರ ಕರೆ ಮಾಡಿ ಕಿಶೋರ್‌ನನ್ನು ಬಂಧಿಸಲಾಗಿದೆ. ನಿನ್ನ ಹೆಸರು ಕೇಳಿ ಬರುತ್ತಿದೆ. ತಲೆಮರೆಸಿಕೊಳ್ಳುವಂತೆ ಸಲಹೆ ನೀಡಿದ. ಅದರಂತೆ ನಾನು ತಿರುಪತಿ, ಧರ್ಮಪುರಿ ಸೇರಿದಂತೆ ತಮಿಳುನಾಡಿನ ನಾನಾ ಕಡೆ ತಲೆಮರೆಸಿಕೊಂಡಿದ್ದೆ. ಈ ವೇಳೆ ಅನಾರೋಗ್ಯ ಉಂಟಾಗಿ ಕೋಲಾರಕ್ಕೆ ಬಂದೆ, ಸ್ನೇಹಿತನ ಬಳಿ 300 ರೂ. ಪಡೆದುಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚಿತ್ರಮಂದಿರದಲ್ಲಿ ಡಿಜೆ ಸಿನಿಮಾ ನೋಡುವಾಗ ಪೊಲೀಸರು ಬಂದು ಬಂಧಿಸಿದರು ಎಂದು ಹೇಳಿಕೆ ದಾಖಲಿಸಿದ್ದಾನೆ. 

Advertisement

Udayavani is now on Telegram. Click here to join our channel and stay updated with the latest news.

Next