Advertisement

ಬಾಲಕನ ಅಪಹರಿಸಿ 15 ಲಕ್ಷ  ರೂ. ಸುಲಿಗೆ

02:29 PM Sep 28, 2022 | Team Udayavani |

ಬೆಂಗಳೂರು: ಸಾಫ್ಟ್ವೇರ್‌ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರ ಪುತ್ರನನ್ನು ಅಪಹರಿಸಿ 15 ಲಕ್ಷ ರೂ. ಸುಲಿಗೆ ಮಾಡಿದ್ದ ಇಬ್ಬರು ಅಪಹರಣಕಾರರನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.

Advertisement

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಸುನೀಲ್‌ ಕುಮಾರ್‌ ಅಲಿಯಾಸ್‌ ಸುನೀಲ್‌ ರಾಜ್‌ (23) ಹಾಗೂ ಮಂಡಿಕಲ್‌ ಹೋಬಳಿಯ ನಾಗೇಶ್‌ (22) ಬಂಧಿತರು. ಆರೋಪಿಗಳು ವಸೂಲಿ ಮಾಡಿದ್ದ 9.69 ಲಕ್ಷ ರೂ. ನಗದು ಸುಲಿಗೆ ಹಣದಲ್ಲಿ ಖರೀದಿಸಿದ್ದ 1.5 ಲಕ್ಷ ರೂ. ಮೌಲ್ಯದ ಕೆಟಿಎಂ ಬೈಕ್‌, 39 ಸಾವಿರ ರೂ. ಮೌಲ್ಯದ ಕ್ಯಾಮೆರಾ, ಒಂದು ಬೈಕ್‌, ಒಂದು ಕಾರು ವಶಕ್ಕೆ ಪಡೆಯಲಾಗಿದೆ.  ಆರೋಪಿಗಳು ಸೆ.2ರಂದು ಸಂಪಿಗೆಹಳ್ಳಿಯ ಮಾನ್ಯತಾ ಟೆಕ್‌ ಪಾರ್ಕ್‌ನ ಮಾನ್ಯತಾ ರೆಸಿಡೆನ್ಸಿ ಯಲ್ಲಿ 14 ವರ್ಷದ ಬಾಲಕನನ್ನು ಅಪಹರಿಸಿದ್ದರು ಎಂದು ಪೊಲೀಸರು ಹೇಳಿದರು.

ಬಾಲಕನ ತಂದೆ ಸಾಪ್ಟ್ವೇರ್‌ ಕಂಪನಿಯಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದು, ತಾಯಿ ಕೂಡ ಟೆಕ್ಕಿಯಾಗಿದ್ದಾರೆ. ಮಾನ್ಯತಾ ರೆಸಿಡೆನ್ಸಿಯ ಮೊದಲ ಮಹಡಿಯಲ್ಲಿ ಪುತ್ರನ ಜತೆ ವಾಸವಾಗಿದ್ದರು. ಸೆ.2ರಂದು ಮನೆಗೆ ಬಂದ ಆರೋಪಿಗಳು, ಮೊದಲ ಮಹಡಿಯಲ್ಲಿರುವ ಮನೆಯ ಬಾಗಿಲು ತೆರೆದಿರುವುದನ್ನು ಕಂಡು ಒಳ ನುಗ್ಗಿದ್ದಾರೆ. ಬಳಿಕ ಕೋಣೆಯಲ್ಲಿ ಮಲಗಿದ್ದ ಬಾಲಕನ ಬಾಯಿಗೆ ಪ್ಲಾಸ್ಟರ್‌ ಹಾಕಿ, ಮಾರಕಾಸ್ತ್ರ ತೋರಿಸಿ ಬೆದರಿಸಿದ್ದಾರೆ. ಬಳಿಕ ತಂದೆಯ ಕಾರಿನ ಕೀಯನ್ನು ಆತನಿಂದಲೇ ಪಡೆದುಕೊಂಡು ಅಪಹರಿಸಿದ್ದಾರೆ. ಈ ವೇಳೆ ಆತನ ಪೋಷಕರು ಎರಡನೇ ಮಹಡಿಯಲ್ಲಿರುವ ಕೋಣೆಯಲ್ಲಿ ಮಲಗಿದ್ದರು. ಮರು ದಿನ ಬೆಳಗ್ಗೆ ಪುತ್ರ ಕಾಣೆಯಾಗಿದ್ದರಿಂದ ಗಾಬರಿಗೊಂಡ ಪೋಷಕರು ಎಲ್ಲೆಡೆ ಹುಡುಕಾಟ ನಡೆಸಿದ್ದಾರೆ ಎಲ್ಲಿಯೂ ಪತ್ತೆಯಾಗಿಲ್ಲ. ಈ ಮಧ್ಯೆ ಆರೋಪಿಗಳು ದಾಬಸ್‌ಪೇಟೆ ಬಳಿಯಿಂದ ಬಾಲಕನ ತಂದೆಗೆ ಕರೆ ಮಾಡಿ, “15 ಲಕ್ಷ ರೂ. ಕೊಡಬೇಕು. ಇಲ್ಲವಾದರೆ ಪುತ್ರನನ್ನು ಹತ್ಯೆ ಮಾಡುತ್ತೇವೆ’ ಎಂದು ಬೆದರಿಕೆ ಹಾಕಿದ್ದಾರೆ. ಇದರಿಂದ ಹೆದರಿದ ಪೋಷಕರು ಕೂಡಲೇ 15 ಲಕ್ಷ ರೂ. ಅನ್ನು ಆರೋಪಿಗಳು ಹೇಳಿದ ಸ್ಥಳಕ್ಕೆ ಹೋಗಿ, ಕೊಟ್ಟು ಮಗನನ್ನು ಕರೆತಂದಿದ್ದಾರೆ.

ಬಳಿಕ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಕಾರ್ಯಾಚರಣೆ ನಡೆಸಿದ ಪೊಲೀಸರು, 20 ದಿನಗಳ ಕಾಲ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಈಶಾನ್ಯವಿಭಾಗ ಡಿಸಿಪಿ ಅನೂಪ್‌ ಶೆಟ್ಟಿ, ಎಸಿಪಿ ರಂಗಪ್ಪ ಮತ್ತು ಇನ್‌ಸ್ಪೆಕ್ಟರ್‌ ಕೆ.ಟಿ.ನಾಗರಾಜು ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

Advertisement

ಗಾರ್ಡನ್‌ ಕೆಲಸಕ್ಕೆ ಬಂದಾಗ ಸಂಚು: ಆರೋಪಿಗಳ ಪೈಕಿ ಸುನೀಲ್‌ ಕುಮಾರ್‌ 8 ತಿಂಗಳ ಹಿಂದೆ ಬಾಲಕನ ಮನೆಯ ಬಳಿಯ ಗಾರ್ಡನ್‌ ಕೆಲಸಕ್ಕೆ ಬಂದಿದ್ದ. ಈ ವೇಳೆ ಬಾಲಕನ ಪೋಷಕರ ಬಳಿ ಸಾಕಷ್ಟು ಹಣ ಇರುವ ಮಾಹಿತಿ ಸಿಕ್ಕಿತ್ತು. ಬಳಿಕ ತನ್ನ ಸ್ನೇಹಿತ ನಾಗೇಶ್‌ಗೆ ವಿಚಾರ ತಿಳಿಸಿ, ಸಂಚು ರೂಪಿಸಿ ಬಾಲಕನನ್ನು ಅಪಹರಣ ಮಾಡಿದ್ದರು ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next