ಬೆಂಗಳೂರು: ಬಾದ್ ಷಾ ಕಿಚ್ಚ ಸುದೀಪ್ ಮುಂಬರುವ ಸಿನಿಮಾದ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. #ಕಿಚ್ಚ46 ಸಿನಿಮಾದ ಟೀಸರ್ ಈಗಾಗಲೇ ಹವಾ ಸೃಷ್ಟಿಸಿದ್ದು, ಸುದೀಪ್ ಹುಟ್ಟುಹಬ್ಬ(ಸೆ.2 ರಂದು) ಸಿನಿಮಾದ ಟೈಟಲ್ ರಿವೀಲ್ ಆಗುವ ಸಾಧ್ಯತೆಯಿದೆ.
ಕಿಚ್ಚ ಸುದೀಪ್ ಶನಿವಾರ (ಆ.26 ರಂದು) ರಾತ್ರಿ ಸಂಸದೆ ಸುಮಲತಾ ಅಂಬರೀಶ್ ಅವರ ಬರ್ತ್ ಡೇ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಇದರಲ್ಲಿ ನಟ ದರ್ಶನ್ ಸೇರಿದಂತೆ ಅನೇಕ ಕಲಾವಿದರು ಭಾಗಿಯಾಗಿದ್ದರು. ನಟ ದರ್ಶನ್ ಹಾಗೂ ಕಿಚ್ಚ ಸುದೀಪ್ ಪರಸ್ಪರ ಮುಖಾಮುಖಿಯಾಗಿ ಮಾತನಾಡದೆ 6 ವರ್ಷಗಳು ಕಳೆದಿವೆ. 6 ವರ್ಷದ ಬಳಿಕ ಮೊದಲ ಬಾರಿ ಒಂದೇ ವೇದಿಕೆಯಲ್ಲಿ ಕಿಚ್ಚ – ದಚ್ಚು ಕಾಣಿಸಿಕೊಂಡಿದ್ದಾರೆ. ಇದು ಇಬ್ಬರ ಅಭಿಮಾನಿಗಳು ಖುಷ್ ಆಗುವಂತೆ ಮಾಡಿದೆ.
ಇಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಪರಸ್ಪರ ಮಾತನಾಡಿಲ್ಲ. ದರ್ಶನ್ ಹಾಗೂ ಸುದೀಪ್ ಜೊತೆಯಾಗಿ ಕಾಣಿಸಿಕೊಂಡಿದ್ದು, ಒಟ್ಟಿಗೆ ಸಿನಿಮಾ ಮಾಡಲಿದ್ದಾರೆ, ಕೋಪ ಮರೆತು ಮಾತನಾಡಲಿದ್ದಾರೆ ಎನ್ನುವ ಬಗ್ಗೆ ಗುಸು ಗುಸು ಚರ್ಚೆಗಳು ಗಾಂಧಿನಗರ ಹಾಗೂ ಅಭಿಮಾನಿಗಳ ವಲಯದಲ್ಲಿ ಕೇಳಿ ಬರುತ್ತಿದೆ.
ಇತ್ತ ರಾತ್ರಿ ಪಾರ್ಟಿಯಲ್ಲಿ ಭಾಗಿಯಾಗಿ ಭಾನುವಾರ ಮುಂಜಾನೆ(ಆ.27 ರಂದು) ಸುದೀಪ್ ಜಿಮ್ ವರ್ಕೌಟ್ ಮಾಡುವ ಸಿಕ್ಸ್ ಪ್ಯಾಕ್ಸ್ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ವಿವಿಧ ಭಂಗಿಯಲ್ಲಿ ತಮ್ಮ ಸಿಕ್ಸ್‌ಪ್ಯಾಕ್ಸ್ ದೇಹದ ಫೋಟೋವನ್ನು ಹಂಚಿಕೊಂಡಿದ್ದಾರೆ.
“ವರ್ಕೌಟ್ ನನ್ನ ಹೊಸ ಹ್ಯಾಪಿ ಸ್ಪೇಸ್ ಆಗಿದೆ. ಈ ದಿನಚರಿ ನನ್ನನ್ನು ಕೂಲ್ ಹಾಗೂ ಫೋಕಸ್ಡ್ ಆಗಿಡುತ್ತದೆ. ಕಿಚ್ಚ46 ಸಿನಿಮಾದ ಕ್ಲೈಮ್ಯಾಕ್ಸ್ ಶೂಟ್ ಗೆ ಇನ್ನೊಂದು ತಿಂಗಳು ಬಾಕಿಯಿದೆ. ನನ್ನ ವರ್ಕೌಟ್ ಸ್ಟೇಷನ್ ನಲ್ಲಿ ತುಂಬಾ ಸಾಧಿಸುವುದಿದ” ಎಂದು ಕಿಚ್ಚ ಬರೆದುಕೊಂಡಿದ್ದಾರೆ.
ಕಿಚ್ಚ46 ಸಿನಿಮಾದ ಮೊದಲ ಶೆಡ್ಯೂಲ್ ಮುಗಿದಿದೆ. ತಮಿಳಿನ ಕಲೈಪುಲಿ ಎಸ್. ತನು ಹಾಗೂ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ವಿಜಯ್ ಕಾರ್ತಿಕೇಯನ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.