ಮುಂಬಯಿ: ವಿಶ್ವದ 8ನೇ ಅತಿದೊಡ್ಡ ಕಾರು ಉತ್ಪಾದನಾ ಸಂಸ್ಥೆ ಎಂದು ಗುರುತಿಸಿಕೊಂಡಿರುವ ಕಿಯಾ ಮೋಟಾರ್ ಕಳೆದ ಎರಡು ತಿಂಗಳಲ್ಲಿ ದಾಖಲೆ ಮಟ್ಟದ ವಹಿವಾಟು ನಡೆಸುವ ಮೂಲಕ ಭಾರತದ ಐದನೇ ಅತಿದೊಡ್ಡ ವಾಹನ ತಯಾರಕ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕಿಯಾ ಆಗಸ್ಟ್ ತಿಂಗಳಿನಲ್ಲಿ ಮಧ್ಯಮ ಶ್ರೇಣಿಯ ಕಿಯಾ ಸೆಲ್ಟೋಸ್ ಎಸ್‌ಯುವಿ ಕಾರನ್ನು ಮಾರುಕಟ್ಟೆಗೆ ಪರಿಚಯ ಮಾಡಿತ್ತು. ಬಿಡುಗಡೆಯಾದ ದಿನದಿಂದಲೂ ವಾಹನದ ಕುರಿತು ಉತ್ತಮ ಪ್ರತಿಕ್ರಿಯೆ ಕೇಳಿಬಂದಿದ್ದು, ಕಳೆದ ಎರಡು ತಿಂಗಳಿನಲ್ಲಿ ಅಧಿಕ ಸಂಖ್ಯೆಯ ವಾಹನ ಮಾರಾಟವಾಗಿದೆ ಎಂದು ಕಂಪನಿ ತಿಳಿಸಿದೆ.
ಅಕ್ಟೋಬರ್ ತಿಂಗಳಿನಲ್ಲಿ ಕಂಪನಿಯು ಒಟ್ಟು 26,840 ಸೆಲ್ಟೋಸ್ ಕಾರುಗಳನ್ನು ಮಾರಾಟ ಮಾಡಿದ್ದು, ಹಬ್ಬದ ಹಿನ್ನಲೆ ಆಫರ್‌ಗಳನ್ನು ನೀಡಿದ್ದರ ಪರಿಣಾಮ 12,859 ಕಾರುಗಳ ಮಾರಾಟವಾಗಿದೆ ಎಂದು ಕಂಪೆನಿ ಹೇಳಿದೆ.
ದೇಶದ ಮಾರುಕಟ್ಟೆಯಲ್ಲಿ ಈಗಾಗಲೇ 60 ಸಾವಿರಕ್ಕೂ ಹೆಚ್ಚು ಕಿಯಾ ಮೋಟಾರ್ಸ್‌ನ ಸೆಲ್ಟೋಸ್ ಕಾರುಗಳು ಬುಕ್ ಆಗಿದ್ದು, ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಶಾಖೆಗಳನ್ನು ವಿಸ್ತರಣೆ ಮಾಡುತ್ತೇವೆ ಎಂದು ಅದು ಹೇಳಿದೆ.
ಹೆಸರಾಂತ ಕಂಪನಿಗಳಾದ ಫೋರ್ಡ್, ವೋಕ್ಸ್‌ವ್ಯಾಗನ್, ನಿಸ್ಸಾನ್ ಮತ್ತು ರೆನೋಗೆ ಹೋಲಿಸಿದರೆ, ಕಿಯಾ ಕಾರುಗಳು ಎರಡು ತಿಂಗಳಲ್ಲಿ ಉತ್ತಮ ಮಾರಾಟ ಕಂಡಿವೆ.