Advertisement
ಮಂಗಳೂರಿನ ದೇರೆಬೈಲ್ ನಿವಾಸಿ ಎಸ್. ರಾಧಾಕೃಷ್ಣ ರಾವ್ ಮತ್ತು ಸುಮಿತ್ರಾ ರಾವ್ ದಂಪತಿ ಪುತ್ರಿ ರಚನಾ ಪುಣೆಯಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಈಜು ಸ್ಪರ್ಧೆಯ ಬಾಲಕಿಯರ ಅಂಡರ್-17 ವಿಭಾಗದ 50 ಮೀ. ಬ್ರೆಸ್ಟ್‌ಸ್ಟ್ರೋಕ್ ಈಜು ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದು ಕರಾವಳಿಯ ಕೀರ್ತಿ ಹೆಚ್ಚಿಸಿದ್ದಾರೆ. 4/100 ಮೀ. ಮೆಡ್ಲೆ ರಿಲೆಯಲ್ಲಿ 100 ಮೀ. ಬ್ರೆಸ್ಟ್ ಸ್ಟ್ರೋಕ್‌ನಲ್ಲಿ ಈಜಿ ಕರ್ನಾಟಕ ತಂಡಕ್ಕೆ ಚಿನ್ನದ ಪದಕ ಸಿಗುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಜತೆಗೆ 100 ಮೀ. ಬ್ರೆಸ್ಟ್ ಸ್ಟ್ರೋಕ್ ವೈಯಕ್ತಿಕ ವಿಭಾಗದಲ್ಲಿ ಕಂಚಿನ ಪದಕ ಗಳಿಸಿದ್ದಾರೆ.
ಮಂಗಳೂರಿನ ರಾಮಕೃಷ್ಣ ಶಾಲೆಯಲ್ಲಿ 9ನೇ ತರಗತಿಯಲ್ಲಿದ್ದಾರೆ ರಚನಾ. ಮಂಗಳಾ ಈಜು ಕ್ಲಬ್‌ನ ಮುಖ್ಯ ತರಬೇತುದಾರ ಲೋಕರಾಜ್ ವಿಟ್ಲ ಮತ್ತು ಸಹಾಯಕ ತರಬೇತುದಾರರಾದ ಎಂ. ಶಿವಾನಂದ ಗಟ್ಟಿ, ಪುಂಡಲೀಕ್ ಖಾರ್ವಿ, ಶಿಶಿರ್ ಎಸ್. ಗಟ್ಟಿ, ರವೀಶ್ ಮತ್ತು ಶುಭಂ ಅಲ್ಲದೆ, ಬೆಂಗಳೂರಿನ ಜಯರಾಜ್, ಜಗನ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.
Related Articles
ರಾಧಾಕೃಷ್ಣ ರಾವ್ ಪ್ರವಾಸಿ ಟ್ಯಾಕ್ಸಿ ಚಾಲಕ. ನಿತ್ಯದ ಗಳಿಕೆಯಲ್ಲಿ ಮಗಳ ಕ್ರೀಡೆಗೆ ಹಣ ನೀಡಲು ಕಷ್ಟವಾಗುತ್ತಿತ್ತು. ಮಗಳು ಹಳೆಯ ಸ್ವಿಮ್ಮಿಂಗ್ ದಿರಿಸಿನಲ್ಲಿಯೇ ಅನೇಕ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಬಹುಮಾನ ಗಳಿಸಿದ್ದಳು. ಕೂಟಕ್ಕೆ ಹಣ ಹೊಂದಿಸಿ ಹೊಸ ದಿರಿಸು ಖರೀದಿಸಿದ್ದಳು ಎಂದು ನೆನಪಿಸಿಕೊಳ್ಳುತ್ತಾರೆ ರಾಧಾಕೃಷ್ಣ ರಾವ್.
Advertisement
ಪ್ರೋತ್ಸಾಹ ಅಗತ್ಯಮಗಳನ್ನು ರಾಷ್ಟ್ರಮಟ್ಟದ ಸ್ವಿಮ್ಮಿಂಗ್ ಸ್ಪರ್ಧೆಗೆ ಕಳುಹಿಸಬೇಕಾದರೆ 50,000 ರೂ.ಗೂ ಹೆಚ್ಚಿನ ಹಣ ಬೇಕಾಗುತ್ತದೆ. ಆದರೆ ಸರಕಾರ ಪ್ರೋತ್ಸಾಹಕ ಧನ ನೀಡುವುದು 10 ಸಾವಿರ ರೂ. ಮಾತ್ರ. ಈ ಹಣದಲ್ಲಿ ಸ್ಪರ್ಧೆ ತಯಾರಿ ಕಷ್ಟ. ಸರಕಾರ ಹೆಚ್ಚಿನ ಪ್ರೋತ್ಸಾಹ ನೀಡಿದರೆ ಮಗಳು ಮತ್ತಷ್ಟು ಸಾಧನೆ ಮಾಡಲು ಸಾಧ್ಯ.
ಸುಮಿತ್ರಾ ರಾವ್, ರಚನಾ ತಾಯಿ ಚಿನ್ನದ ಪದಕದ ಗುರಿ
ಖೇಲೋ ಇಂಡಿಯಾ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ಖುಷಿಯಿದೆ. ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಸ್ಪರ್ಧೆಯಲ್ಲಿ ಪಾಲ್ಗೊಂಡು ಚಿನ್ನದ ಪದಕ ಪಡೆಯುತ್ತೇನೆ.
ಎಸ್.ಆರ್. ರಚನಾ ರಾವ್, ಈಜು ಪಟು ನವೀನ್ ಭಟ್ ಇಳಂತಿಲ