ಮೂಡುಬಿದಿರೆ: ಲಕ್ನೋದಲ್ಲಿ ನಡೆದ 3ನೇ ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್‌ನ ಆ್ಯತ್ಲೆಟಿಕ್ಸ್, ವಾಲಿಬಾಲ್, ವೇಟ್‌ಲಿಫ್ಟಿಂಗ್ ಹಾಗೂ ಮಲ್ಲ ಕಂಬದಲ್ಲಿ ಮಂಗಳೂರು ವಿ.ವಿ. ಅತ್ಯುತ್ತಮ ಸಾಧನೆ ತೋರಿದೆ. ವಿ.ವಿ.ಯನ್ನು ಪ್ರತಿನಿಧಿಸಿದ 60 ಕ್ರೀಡಾಪಟುಗಳ ಪೈಕಿ 49 ಮಂದಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು 3 ಚಿನ್ನ, 8 ಬೆಳ್ಳಿ, 5 ಕಂಚು ಸಹಿತ ಒಟ್ಟು 16 ಪದಕ ಗೆದ್ದಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾ ನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಆ್ಯತ್ಲೆಟಿಕ್ಸ್‌ನ ಮಹಿಳಾ ವಿಭಾಗದಲ್ಲಿ 54 ಅಂಕ ಪಡೆದ ಮಂಗಳೂರು ವಿ.ವಿ. ಸತತ ಮೂರನೇ ಬಾರಿ ಚಾಂಪಿಯನ್ ಆಗಿದೆ. ವಿ.ವಿ.ಯನ್ನು ಪ್ರತಿನಿ ಧಿಸಿದ 15 ಕ್ರೀಡಾಪಟುಗಳಲ್ಲಿ 12 ಮಂದಿ ಆಳ್ವಾಸ್‌ನವರು. ಪುರುಷರು 5ನೇ ಸ್ಥಾನ ಪಡೆದಿದ್ದು, ವಿ.ವಿ.ಯ 14 ಕ್ರೀಡಾಪಟುಗಳಲ್ಲಿ 13 ಮಂದಿ ಆಳ್ವಾಸ್‌ನವರು ಆಗಿದ್ದಾರೆ.
ವಾಲಿಬಾಲ್‌ನಲ್ಲಿ ಬೆಳ್ಳಿ, ವೇಟ್ ಲಿಫ್ಟಿಂಗ್‌ನಲ್ಲಿ ವಿ.ವಿ.ಯನ್ನು ಆಳ್ವಾಸ್‌ನ 7 ಕ್ರೀಡಾಪಟುಗಳು ಪ್ರತಿನಿ ಧಿಸಿದ್ದು, ಮಹಿಳಾ ವಿಭಾಗದಲ್ಲಿ ಬೆಳ್ಳಿ, ಪುರುಷರ ವಿಭಾಗದಲ್ಲಿ ಕಂಚು ಪಡೆದಿದೆ.
ಆಳ್ವಾಸ್‌ನ ಬಸಂತಿ ಕುಮಾರಿ (10,000 ಮೀ. -ಚಿನ್ನ, 5,000 ಮೀ.- ಬೆಳ್ಳಿ, 4ಗಿ400 ರಿಲೇ-ಬೆಳ್ಳಿ); ಪೂನಂ ಸೋನುನೆ (10,000 ಮೀ. -ಕಂಚು, 5,000 ಮೀ.- ಚಿನ್ನ); ಪಲ್ಲವಿ ಪಾಟೀಲ್ (ಹೈಜಂಪ್-ಚಿನ್ನ); ಸ್ನೇಹಲತಾ ಯಾದವ್ (1,500 ಮೀ. – ಬೆಳ್ಳಿ, 4ಗಿ400 ರಿಲೇ- ಬೆಳ್ಳಿ); ಅಂಜಲಿ ಸಿ. (100 ಮೀ ಹರ್ಡಲ್ಸ್- ಬೆಳ್ಳಿ, ಟ್ರಿಪಲ್ ಜಂಪ್- ಬೆಳ್ಳಿ); ದೀಪಶ್ರೀ (4ಗಿ400 ಮೀ. ರಿಲೇ – ಬೆಳ್ಳಿ); ಉಜ್ವಲ್ (ಡಿಸ್ಕಸ್-ಕಂಚು), ವಿಶೇಷ್ ಮೆಹ್ತಾ (1,500 ಮೀ. ಕಂಚು); ಉಪೇಂದ್ರ ಬಲಿಯಾನ್ (10,000 ಮೀ. – ಕಂಚು); ಪ್ರಶಾಂತ್ ಸಿನ್ಹಾ (ವೇಟ್‌ಲಿಫ್ಟಿಂಗ್ -ಕಂಚು); ಲಕ್ಷ್ಮೀ (ಲಿಫ್ಟಿಂಗ್- ಬೆಳ್ಳಿ).
ನಗದು ಬಹುಮಾನ
ಚಿನ್ನ, ಬೆಳ್ಳಿ ಹಾಗೂ ಕಂಚು ಗೆದ್ದ ಆಳ್ವಾಸ್‌ನ ಕ್ರೀಡಾಪಟುಗಳಿಗೆ ಕ್ರಮವಾಗಿ ತಲಾ ಹತ್ತು ಸಾವಿರ, ಏಳೂವರೆ ಸಾವಿರ ಮತ್ತು ಐದು ಸಾವಿರ ರೂ. ನೀಡುವುದಾಗಿ ಮೋಹನ ಆಳ್ವ ಘೋಷಿಸಿದರು.