Advertisement

ನವೆಂಬರ್ 18ರಂದು ಬಿಡುಗಡೆಯಾಗಲಿದೆ ‘ಖಾಸಗಿ ಪುಟಗಳು’

05:03 PM Nov 04, 2022 | Team Udayavani |

ತನ್ನ ಟೈಟಲ್‌ ಮತ್ತು ಟೀಸರ್‌ ಮೂಲಕ ಸಿನಿಪ್ರಿಯರ ಗಮನ ಸೆಳೆದಿದ್ದ “ಖಾಸಗಿ ಪುಟಗಳು’ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. “ಖಾಸಗಿ ಪುಟಗಳು’ ಇದೇ ನವೆಂಬರ್‌ 18ಕ್ಕೆ ತೆರೆಗೆ ಬರಲಿದ್ದು, ಸದ್ಯ ಭರದಿಂದ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಇತ್ತೀಚೆಗೆ ಸಿನಿಮಾದ ಟ್ರೇಲರ್‌ ಅನ್ನು ಬಿಡುಗಡೆ ಮಾಡಿದೆ.

Advertisement

“ಎಲ್ಲರ ಜೀವನದ ಡೈರಿಯಲ್ಲೂ ಯಾರಿಗೂ ಹೇಳಲಾಗದಂತಹ ಒಂದಷ್ಟು ಖಾಸಗಿ ವಿಷಯಗಳು, ಖಾಸಗಿ ಪುಟಗಳು ಇದ್ದೇ ಇರುತ್ತವೆ. ಅಂಥದ್ದೇ ಒಂದಷ್ಟು ವಿಷಯಗಳನ್ನು ಈ ಸಿನಿಮಾದಲ್ಲೂ ಹೇಳುತ್ತಿದ್ದೇವೆ. ಸಿನಿಮಾ ನೋಡುವ ಪ್ರತಿಯೊಬ್ಬರಿಗೂ, ಇದು ನನ್ನ ಜೀವನದಲ್ಲೂ ನಡೆದಿದೆ ಎನ್ನುವಷ್ಟರ ಮಟ್ಟಿಗೆ ನೈಜವಾಗಿ ಸಿನಿಮಾ ಮೂಡಿಬಂದಿದೆ. ಆರಂಭದಲ್ಲಿ ಈ ಸಿನಿಮಾಕ್ಕೆ ಏನು ಹೆಸರಿಡಬೇಕು ಎಂಬ ಯೋಚನೆಯಲ್ಲಿದ್ದಾಗ ಸಂಗೀತ ನಿರ್ದೇಶಕ ಮತ್ತು ಚಿತ್ರ ಸಾಹಿತಿ ಕೆ. ಕಲ್ಯಾಣ್‌ ಈ ಟೈಟಲ್‌ ತಿಳಿಸಿದರು. ಸಿನಿಮಾದ ಟೈಟಲ್‌ ಹೇಳುವಂತೆ ಎಲ್ಲರಿಗೂ ತಲುಪುವಂಥ ಖಾಸಗಿ ವಿಷಯಗಳೇ ಸಿನಿಮಾದ ಕಥೆ’ ಎನ್ನುವುದು “ಖಾಸಗಿ ಪುಟಗಳು’ ಸಿನಿಮಾದ ಕಥಾಹಂದರದ ಬಗ್ಗೆ ನಿರ್ದೇಶಕ ಸಂತೋಷ್‌ ಶ್ರೀಕಂಠಪ್ಪ ಮಾತು.

ಈಗಾಗಲೇ ಹಲವು ಕಿರುಚಿತ್ರದಲ್ಲಿ ನಟಿಸಿ ಅನುಭವವಿರುವ ವಿಶ್ವ “ಖಾಸಗಿ ಪುಟಗಳು’ ಚಿತ್ರದಲ್ಲಿ ನಾಯಕನಾಗಿ, ಶ್ವೇತಾ ಡಿಸೋಜ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಚೇತನ್‌ ದುರ್ಗಾ, ನಂದಕುಮಾರ್‌, ಶ್ರೀಧರ್‌, ನಿರೀಕ್ಷಾ ಶೆಟ್ಟಿ, ದಿನೇಶ್‌ ಮಂಗಳೂರು, ಪ್ರಶಾಂತ್‌ ನಟನ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

“ಈಗಾಗಲೇ ಒಂದಷ್ಟು ಶಾರ್ಟ್‌ ಫಿಲಂಗಳಲ್ಲಿ ಅಭಿನಯಿಸಿದ್ದೆ. ಸಿನಿಮಾದಲ್ಲಿ ಅಭಿನಯಿಸಬೇಕು ಎಂಬ ಕನಸು ಈ ಸಿನಿಮಾದ ಮೂಲಕ ನನಸಾಗುತ್ತಿದೆ. ಸಂಪೂರ್ಣ ಹೊಸಬರೇ ಸೇರಿಕೊಂಡು ಒಂದು ಒಳ್ಳೆಯ ಸಿನಿಮಾ ಮಾಡಿದ್ದೇವೆ. ಇತ್ತೀಚಿನ ದಿನಗಳಲ್ಲಿ ಕನ್ನಡದಲ್ಲಿ ಇಂಥದ್ದೊಂದು ಲವ್‌ಸ್ಟೋರಿ ಸಿನಿಮಾ ಬಂದಿಲ್ಲ. ಸಿನಿಮಾ ಎಲ್ಲರಿಗೂ ಇಷ್ಟವಾಗುತ್ತದೆ’ ಎಂಬುದು ನಾಯಕ ವಿಶ್ವ ಮಾತು.

“ಈಗಾಗಲೇ ಹಿಂದಿಯಲ್ಲಿ “ವೈ’ ಎಂಬ ಸಿನಿಮಾದಲ್ಲಿ ನಟಿಸಿದ್ದೇನೆ. ಇದು ನನ್ನ ಮೊದಲ ಕನ್ನಡ ಸಿನಿಮಾ. ಭೂಮಿ ಎಂಬ ಮಧ್ಯಮ ವರ್ಗದ ಹುಡುಗಿಯ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಇನೋಸೆಂಟ್‌ ಹಾಗೂ ಮೆಚೋರ್ಡ್‌ 2 ಶೇಡ್‌ ಇರುವಂಥ ಪಾತ್ರ ಇದಾಗಿದೆ’ ಎಂಬುದು ತಮ್ಮ ಪಾತ್ರದ ಬಗ್ಗೆ ನಾಯಕಿ ಶ್ವೇತ ಡಿಸೋಜ ವಿವರಣೆ. “ಖಾಸಗಿ ಪುಟಗಳು’ ಸಿನಿಮಾದ ಹಾಡುಗಳಿಗೆ ವಾಸುಕಿ ವೈಭವ್‌ ಸಂಗೀತವಿದೆ.

Advertisement

ಜಿ.ಎಸ್‌.ಕಾರ್ತಿಕ ಸುಧನ್‌

Advertisement

Udayavani is now on Telegram. Click here to join our channel and stay updated with the latest news.

Next