Advertisement

ಖರ್ಗೆ ಸಾಮ್ರಾಜ್ಯ ಉರುಳಿಸೋದೇ ಗುರಿ: ಗುತ್ತೇದಾರ

11:39 AM May 05, 2018 | Team Udayavani |

ವಾಡಿ: ಕಲಬುರಗಿಯಲ್ಲಿ ಕಟ್ಟಲಾಗಿರುವ ಖರ್ಗೆ ಸಾಮ್ರಾಜ್ಯವನ್ನು ಬುಡಸಮೇತ ಉರುಳಿಸೋದೇ ನನ್ನ ಗುರಿಯಾಗಿದೆ ಎಂದು ಮಾಲಿಕಯ್ಯ ಗುತ್ತೇದಾರ ಹೇಳಿದರು. ಪಟ್ಟಣದ ಶ್ರೀನಿವಾಸಗುಡಿ ವೃತ್ತದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಬಿಜೆಪಿ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ನಾನು ದಲಿತ ವಿರೋಧಿಯಲ್ಲ. ನನ್ನ ಮತ್ತು ಖರ್ಗೆ ಮಧ್ಯೆ ಸಂಘರ್ಷವಿದೆ.

Advertisement

ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ತಕ್ಷಣ ಖರ್ಗೆ ಅವರ ಆಪ್ತ ಸಚಿವ ಡಾ| ಶರಣಪ್ರಕಾಶ ಪಾಟೀಲ ಮಾಡಿರುವ ಹಗರಣ ಬಯಲಿಗೆಳೆಯುತ್ತೇನೆ. ಕಲಬುರಗಿ ಬುದ್ಧ ವಿಹಾರಕ್ಕೆ ಸಮಾಜ ಕಲ್ಯಾಣ ಇಲಾಖೆಯಿಂದ ಬಿಡುಗಡೆಯಾದ ಒಟ್ಟು ಅನುದಾನದಲ್ಲಿ 850 ಕೋಟಿ ರೂ. ಲೂಟಿಯಾಗಿದೆ. ಈಗಾಗಲೇ ನಾನು ಇದರ ತನಿಖೆಗೆ ಒತ್ತಾಯಿಸಿದ್ದೇನೆ. ತನಿಖೆ ಮಾಡುವವರೂ ಖರ್ಗೆ ಅವರೊಂದಿಗೆ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.

ಚಿತ್ತಾಪುರದ ಶಾಸಕನಾಗಿ ಮತ್ತು ಸಚಿವನಾಗಿ ಐದು ವರ್ಷ ಅಧಿಕಾರದಲ್ಲಿದ್ದರೂ ವಾಡಿ ಪಟ್ಟಣದಲ್ಲಿ ಒಂದು ಸರಕಾರಿ ಪದವಿ ಪೂರ್ವ ಕಾಲೇಜು ಮತ್ತು ಬಸ್‌ ನಿಲ್ದಾಣ ನಿರ್ಮಿಸಲು ಪ್ರಿಯಾಂಕ್‌ಗೆ ಸಾಧ್ಯವಾಗಿಲ್ಲ ಎಂದರೆ ನಾಚಿಕೆಯಾಗಬೇಕು ಎಂದು ವಾಗ್ಧಾಳಿ ನಡೆಸಿದ ಮಾಲಿಕಯ್ಯ, ವಾಲ್ಮೀಕಿ ನಾಯಕ ಗೆದ್ದ ತಕ್ಷಣ ಈ ಬೇಡಿಕೆ ಈಡೇರಿಸಲಾಗುವುದು ಎಂದು ಹೇಳಿದರು. 

ಪ್ರಧಾನಿ ನರೇಂದ್ರ ಮೋದಿ ಹವಾದಿಂದ ಕಾಂಗ್ರೆಸ್‌ ದೋಣಿ ಮುಳುಗುತ್ತಿದೆ. ಕರೆ ನೀರಂತಾಗಿರುವ ಕಾಂಗ್ರೆಸ್‌ಗೆ ಹರಿಯುವ ನದಿಯಾಗಲು ಯೋಚಿಸದಿರುವುದೇ ಅದರ ಅವನತಿಗೆ ಕಾರಣ. ಅಪ್ಪ ಮತ್ತು ಮಗನನ್ನು ಕೇವಲ ಸೋಲಿಸುವುದಲ್ಲ. 

ಠೇವಣಿ ಜಪ್ತಿಯಾಗುವಂತೆ ಮಾಡುತ್ತೇವೆ. ಬಿಜೆಪಿ ಅಭ್ಯರ್ಥಿ ವಾಲ್ಮೀಕಿ ನಾಯಕ ಗೆದ್ದರೆ ವಾಡಿಯನ್ನು ಮಾದರಿ ನಗರವನ್ನಾಗಿ ಮಾಡಲಾಗುವುದು ಎಂದು ಹೇಳಿದರು. ಮಾಜಿ ಶಾಸಕ ವಾಲ್ಮೀಕಿ ನಾಯಕ, ವಿಶ್ವನಾಥ ಪಾಟೀಲ ಹೆಬ್ಟಾಳ, ಉತ್ತರ ಪ್ರದೇಶದ ಶಾಸಕ ಆನಂದ ಶುಕ್ಲಾ, ಶರಣಪ್ಪ ಹದನೂರ ಮಾತನಾಡಿದರು.

Advertisement

ಮುಖಂಡರಾದ ಶ್ರೀನಿವಾಸ ಸಗರ, ಲಿಂಗಾರೆಡ್ಡಿಗೌಡ ಬಾಸರೆಡ್ಡಿ, ಶಶಿಕಲಾ ಟೆಂಗಳಿ, ಬಸವರಾಜ ಪಂಚಾಳ, ನಿವೇದಿತಾ ದಹಿಹಂಡೆ, ಅರವಿಂದ ಚವ್ಹಾಣ, ಡಾ| ವೀರೇಶ ಎಣ್ಣಿ, ಸಿದ್ದಣ್ಣ ಕಲಶೆಟ್ಟಿ, ರಾಜು ಮುಕ್ಕಣ್ಣ, ಮಲ್ಲಣ್ಣಗೌಡ ಬಳವಡಗಿ, ಶರಣು ಜ್ಯೋತಿ, ವೀರಣ್ಣ ಯಾರಿ, ರವಿ ಕಾರಬಾರಿ ಪಾಲ್ಗೊಂಡಿದ್ದರು. 

ವಾಡಿ ಪುರಸಭೆ ಪಕ್ಷೇತರ ಸದಸ್ಯ ಮಹ್ಮದ್‌ ಗೌಸ್‌, ಗುತ್ತೇದಾರ ಸಮಾಜದ ಅಧ್ಯಕ್ಷ ಸಂತೋಷ ಗುತ್ತೇದಾರ, ಮುಖಂಡರಾದ ಫಿರೋಜ್‌ ಖಾನ್‌, ಹಾಫಿಜ್‌ ಇಸ್ಮಾಯಿಲ್‌, ಝಹೂರ್‌ ಖಾನ್‌, ಶೇಖ್‌ ಹುಸೇನ್‌, ಉಮೇರ್‌ ಜುನೈದಿ ಸೇರಿದಂತೆ ನೂರಾರು ಜನ ಮುಸ್ಲಿಂ ಯುವಕರು ಬಿಜೆಪಿಗೆ ಸೇರ್ಪಡೆಯಾದರು.

Advertisement

Udayavani is now on Telegram. Click here to join our channel and stay updated with the latest news.

Next