ಬೆಂಗಳೂರು: ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿರುವ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ಸಹನೆ, ಮಾತಿನ ಮೇಲಿನ ಹಿಡಿತ ಹಾಗೂ ವಿರೋಧ ಪಕ್ಷದವರನ್ನು ಗೌರವದಿಂದಲೇ ಟೀಕಿಸುವ ವಿಶಿಷ್ಟ ಗುಣದಿಂದ ನಮ್ಮ ನಡುವಿನ ಶ್ರೇಷ್ಠ ಸಂಸದೀಯ ಪಟು ಎನಿಸಿಕೊಂಡಿದ್ದಾರೆ ಎಂದು ವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅಭಿಪ್ರಾಯಪಟ್ಟಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರ 75ನೇ ಹುಟ್ಟು ಹಬ್ಬದ ನಿಮಿತ್ತ ಸಪ್ನ ಬುಕ್‌ಹೌಸ್ ಶುಕ್ರವಾರ ನಗರದ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ ಗುಲ್ಬರ್ಗ ವಿಶ್ವವಿದ್ಯಾಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್.ಟಿ.ಪೋತೆ ಅವರು ಸಂಪಾದಿಸಿರುವ ಮಲ್ಲಿಕಾರ್ಜುನ ಖರ್ಗೆಯವರ ಕುರಿತ ಲೇಖನ ಸಂಗ್ರಹ “ಬಯಲ ಹೊನ್ನು’ ಪುಸಕ್ತ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಖರ್ಗೆಯವರು ಐದು ದಶಕದ ಸಕ್ರಿಯ ರಾಜಕಾರಣದಲ್ಲಿ ದೇಶದ ಸಾಂಸ್ಕೃತಿಕ, ರಾಜಕೀಯ ಹಾಗೂ ಸಾಮಾಜಿಕ ಬದಲಾವಣೆಗೆ ಸ್ಪಂದಿಸುತ್ತಾ, ಅದರಲ್ಲಿ ಪಾಲ್ಗೊಳ್ಳುತ್ತಾ ಬಂದಿದ್ದಾರೆ. ರಾಜಕೀಯ ಕ್ಷೇತ್ರ ತನ್ನ ಘನತೆ ಕಳೆದುಕೊಂಡಿದೆಯೇನೋ ಎಂಬ ಅನುಮಾನ ಹುಟ್ಟಿರುವ ಇಂದಿನ ದಿನದಲ್ಲಿ ಖರ್ಗೆಯವರು ಆ ಘನತೆಯನ್ನು ಎತ್ತಿ ಹಿಡಿದಿದ್ದಾರೆ. ಅವರು ಎಂದಿಗೂ ಯಾರ ಬಗ್ಗೆಯೂ ಲಘುವಾಗಿ ಮಾತನಾಡಿದವರಲ್ಲ,’ ಎಂದು ವಿಶ್ಲೇಷಿಸಿದರು.
“ಇಂದು ರಾಜಕಾರಣ ಎಂಬ ಪದದ ಅರ್ಥ ಬದಲಾಗುತ್ತಿದೆ. ರಾಜ್ಯದ ಪ್ರಮುಖ ಸಜ್ಜನ ರಾಜಕಾರಣಿಗಳ ಮಾಹಿತಿ ಸಿಗುತ್ತಿಲ್ಲ ಮತ್ತು ಅವರ ಕೊಡುಗೆ ಏನು ಎಂಬುದು ತಿಳಿಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಜ್ಜನ ರಾಜಕಾರಣಿಗಳ ಕುರಿತಾದ ಪುಸ್ತಕಗಳು ಬರುತ್ತಿರಬೇಕು. ಖರ್ಗೆಯವರು ಅಭಿಮಾನದಿಂದಲ್ಲ, ಅವಮಾನಗಳಿಂದ ವ್ಯಕ್ತಿತ್ವ ಕಟ್ಟಿಕೊಂಡವರು. 5 ದಶಕದಲ್ಲಿ ಸೇಡಿನ, ಸಂಚಿನ, ಹುನ್ನಾರದ ರಾಜಕಾರಣ ಮಾಡಿದವರಲ್ಲ. ಎಚ್ಚರದಿಂದ ಪ್ರಜ್ಞಾಪೂರ್ವಕರವಾಗಿ ನಡೆದುಕೊಂಡಿದ್ದಾರೆ,’ ಎಂದು ಹೇಳಿದರು.
ಕರ್ನಾಟಕ ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಡಾ. ಮಲ್ಲೇಪುರಂ ಜಿ.ವೆಂಕಟೇಶ್ ಮಾತನಾಡಿ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕವಾಗಿ ಖರ್ಗೆ ಅವರ ಕೊಡುಗೆ ಅಪಾರ ಎಂದು ಹೇಳಿದರು. ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ, ಶಿಕ್ಷಣ ತಜ್ಞ ಡಾ.ಕೆ.ಇ.ರಾಧಾಕೃಷ್ಣ, ಸಪ್ನ ಬುಕ್ ಹೌಸ್ ನಿರ್ದೇಶಕ ನಿತಿನ್ ಷಾ ಮೊದಲಾದವರು ಹಾಜರಿದ್ದರು.