ಕಲಬುರಗಿ: ನಗರ ಹೊರವಲಯದ ಶ್ರೀನಿವಾಸ ಸರಡಗಿ ಬಳಿಯ ವಿಮಾನ ನಿಲ್ದಾಣದಿಂದ ಬುಧವಾರ ಬೆಳಗ್ಗೆ ಕಾಂಗ್ರೆಸ್ ಸಂಸದೀಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ತಮ್ಮ ಪತ್ನಿ ರಾಧಾಬಾಯಿ ಅವರೊಂದಿಗೆ ಮಹಾರಾಷ್ಟ್ರದ ಲಾತೂರಿನ ಹೌಸ್‌ದಲ್ಲಿ ನಡೆಯುವ ಕಾಂಗ್ರೆಸ್ ಪಕ್ಷದ 3ನೇ ಜನಸಂಘರ್ಷ ಯಾತ್ರೆಯಲ್ಲಿ ಭಾಗವಹಿಸಲು ಪ್ರಥಮ ಬಾರಿ ವಿಮಾನದಲ್ಲಿ ತೆರಳಿದರು.
ಬೆಳಗ್ಗೆ ಮುಂಬೈ ಮೂಲದ ಖಾಸಗಿ ಕಂಪನಿಯ ವಿಶೇಷ ವಿಮಾನದಲ್ಲಿ ಪತ್ನಿ ರಾಧಾಬಾಯಿ ಅವರೊಂದಿಗೆ, ಸಂಸದ ಖರ್ಗೆ ವಿಮಾನ ಹತ್ತಿದಾಗ ಪಕ್ಷದ ಕಾರ್ಯಕರ್ತರ ದಂಡು ಸಂಭ್ರಮಿಸಿತು. ಕಾರ್ಯಕರ್ತರ ಉತ್ಸಾಹ ಕಂಡು ಖರ್ಗೆ ಅವರು ಕಾರ್ಯಕರ್ತರತ್ತ ಕೈಬೀಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ಮುಖಂಡರಾದ ವಿಜಯಕುಮಾರ ಜಿ. ರಾಮಕೃಷ್ಣ, ಸಂತೋಷ ಪಾಟೀಲ ದಣ್ಣೂರ ಈ ಸಂದರ್ಭದಲ್ಲಿದ್ದರು. ವಿಮಾನ ಯಾನ ಪ್ರಾಯೋಗಿಕ ಹಾರಾಟ ಆರಂಭವಾದ ಮೇಲೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರಥಮ ಬಾರಿಗೆ ವಿಮಾನ ನಿಲ್ದಾಣದಲ್ಲಿ ಹೆಲಿಕ್ಯಾಪ್ಟರ್ ಮೂಲಕ ಬಂದು ಹೈ.ಕ. ವಿಮೋಚನಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕೇಂದ್ರ ಮಾಜಿ ಸಚಿವ ಹಾಗೂ ಹಿರಿಯ ನ್ಯಾಯವಾದಿ ಪಿ.ಚಿದಂಬರಂ ಕಲಬುರಗಿಯ ಹೈಕೋರ್ಟ್‌ನ ಪ್ರಕರಣವೊಂದರಲ್ಲಿ ವಾದಿಸಲು ವಿಮಾನ ನಿಲ್ದಾಣದಲ್ಲಿ ವಿಶೇಷ ಹೆಲಿಕ್ಯಾಪ್ಟರ್ ಮೂಲಕ ಬಂದು ಹೋಗಿದ್ದರು. ಈಗ ಸಂಸದ ಮಲ್ಲಿಕಾರ್ಜುನ ಖರ್ಗೆ ಖಾಸಗಿ ವಿಮಾನದ ಮೂಲಕ ತೆರಳಿದ್ದಾರೆ.
ಉಡಾನ್ ಯೋಜನೆಯಡಿ ಕಲಬುರಗಿ ವಿಮಾನ ನಿಲ್ದಾಣ ಸೇರ್ಪಡೆಯಾದರೆ ಇಲ್ಲಿನ ಸಾರ್ವಜನಿಕರು ವಿಮಾನಯಾನ ಕೈಗೊಳ್ಳುವ ದಿನ ಸಮೀಪಿಸಿದಂತಾಗಿದೆ.