ಬೆಂಗಳೂರು: ಹುತಾತ್ಮರ ದಿನಾಚರಣೆ ಸಂದರ್ಭದಲ್ಲಿ ಉತ್ತರ ಪ್ರದೇಶದ ಅಲಿಘಡ್‌ನಲ್ಲಿ ಮಹಾತ್ಮಾ ಗಾಂಧಿ ಪ್ರತಿಕೃತಿಗೆ ಗುಂಡು ಹಾರಿಸಿರುವ ಹಿಂದೂ ಮಹಾಸಭೆ ಕಾರ್ಯಕರ್ತರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆಗ್ರಹಿಸಿದ್ದಾರೆ.
ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಲೋಕಸಭೆ ಚುನಾವಣೆ ಹತ್ತಿರವಾದಂತೆಲ್ಲ. ಬಿಜೆಪಿಯವರ ಹೊಸ ಆಟಗಳು ಶುರುವಾಗಿದೆ. ಹುತಾತ್ಮರ ದಿನ ಗಾಂಧೀಜಿ ಪ್ರತಿಕೃತಿಗೆ ನಕಲಿ ಪಿಸ್ತೂಲಿನಿಂದ ಗುಂಡು ಹಾರಿಸಿ ವಿಕೃತಿ ಮೆರೆದಿದ್ದಾರೆ. ಬಿಜೆಪಿ ಹಾಗೂ ಬಿಜೆಪಿ ಬೆಂಬಲಿತ ಸಂಘಟನೆಗಳು ಪ್ರಜಾಪ್ರಭುತ್ವಕ್ಕೆ ಮಾರಕವಾದ ಕೃತ್ಯಗಳಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.
ನಾಥೂರಾಮ್ ಗೋಡ್ಸೆಯನ್ನು ಹುತಾತ್ಮ, ಮಹಾತ್ಮರೆನ್ನುವ ಇವರು ದೇಶಭಕ್ತರಾ ? ಒಂದೆಡೆ ಪ್ರಧಾನಿ ಮಹಾತ್ಮರ ಸಮಾಧಿಗೆ ತೆರಳಿ ಗೌರವ ಸಲ್ಲಿಸುತ್ತಾರೆ. ಇನ್ನೊಂದೆಡೆ ಅವರ ಸಂಘಟನೆಗಳು ಮಹಾತ್ಮರಿಗೆ ಅವಮಾನ ಮಾಡುತ್ತಿವೆ. ಬಿಜೆಪಿಯವರದ್ದು ಡೋಂಗಿ ದೇಶಭಕ್ತಿ. ಬಿಜೆಪಿಯವರು ದೇಶಕ್ಕಾಗಿ ಯಾವತ್ತೂ ಹೋರಾಟ ಮಾಡಿಲ್ಲ. ದೇಶದ ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್ ಹೋರಾಟ ಮಾಡಿದೆ.
ಬಿಜೆಪಿ ದ್ವಂದ್ವ ನಿಲುವು ಬಿಟ್ಟು ಈ ಕೃತ್ಯ ಎಸಗಿದವರ ವಿರುದ್ಧ ದೇಶ ದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ. ಪಾಟೀಲ್ ಮಾತನಾಡಿ, ಗಾಂಧೀಜಿ ಪ್ರತಿಕೃತಿಗೆ ಗುಂಡು ಹಾರಿಸಿರುವ ಶಕುನ್ ಪಾಂಡೆ ವಿರುದ್ಧ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ದುಷ್ಟ ಶಕ್ತಿಗಳನ್ನು ಹತ್ತಿಕ್ಕಲು ಸಾಧ್ಯವಾಗದಿರುವ ಮೋದಿಯವರಿಗೆ ಪ್ರಧಾನಿ ಸ್ಥಾನದಲ್ಲಿರಲು ನೈತಿಕತೆ ಇಲ್ಲ ಎಂದು ಹೇಳಿದರು.
ಡಿಎನ್‌ಎ ಪರೀಕ್ಷೆ ಮಾಡಿಕೊಳ್ಳಲಿ: ಮಹಿಳೆಯರ ಬಗ್ಗೆ ಬೇಜವಾಬ್ದಾರಿ ಹೇಳಿಕೆ ನೀಡುತ್ತಿರುವ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗಡೆ ಅವರ ಡಿಎನ್‌ಎ ಪರೀಕ್ಷೆ ಮಾಡಿಸಬೇಕು ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.
ಬಿಜೆಪಿ ವಿರುದ್ಧ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅನಂತಕುಮಾರ್ ಹೆಗಡೆ ಹಿಂದುತ್ವವನ್ನು ಗುತ್ತಿಗೆ ಪಡೆದುಕೊಂಡಿದ್ದಾರಾ ? ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡಿರುವ ಅವರ ಪಕ್ಷದ ಶಾಸಕರ ಕೈ ಕಡಿದಿದ್ದಾರಾ? ಅಧಿವೇಶನದಲ್ಲಿ ನೀಲಿ ಚಿತ್ರ ವೀಕ್ಷಿಸಿದವರ ಕೈ ಕಡೆದಿದ್ದಾರಾ ? ಎಂದು ಪ್ರಶ್ನಿಸಿದರು.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಪತ್ನಿಯ ಬಗ್ಗೆ ಮಾತನಾಡಲು ಅನಂತಕುಮಾರ್ ಹೆಗಡೆಗೆ ಯಾವುದೇ ನೈತಿಕತೆಯಿಲ್ಲ. ಅನಂತಕುಮಾರ್ ಹೆಗಡೆ ಅವರ ಪತ್ನಿ ಯಾವ ಧರ್ಮಕ್ಕೆ ಸೇರಿದವರು ಎನ್ನುವುದರ ಬಗ್ಗೆ ಅವರು ಡಿಎನ್‌ಎ ಪರೀಕ್ಷೆ ಮಾಡಿಸಲಿ ಎಂದು ಹೇಳಿದ್ದಾರೆ.