Advertisement

ಖಂಡೇರಾಯನಪಲ್ಲಿ: ಭತ್ತ ಖರೀದಿ ಕೇಂದ್ರ ಉದ್ಘಾಟನೆ

11:43 AM Mar 13, 2022 | Team Udayavani |

ಕಲಬುರಗಿ: ರೈತನಿಗೆ ದಿನದ 24 ಗಂಟೆ ಕಾಲ ವಿದ್ಯುತ್‌ ಒದಗಿಸಲು ರಾಜ್ಯ ಸರ್ಕಾರ ಸೋಲಾರ್‌ ನೀರಾವರಿ ಪಂಪ್‌ ಸೆಟ್‌ ಯೋಜನೆ ಜಾರಿಗೆ ತರುತ್ತಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಹಾಗೂ ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಹೇಳಿದರು.

Advertisement

ಶನಿವಾರ ಸೇಡಂ ತಾಲೂಕಿನ ಖಂಡೆರಾಯನಪಲ್ಲಿಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ನಾಡೆಪಲ್ಲಿ ಭತ್ತ ಖರೀದಿ ಕೇಂದ್ರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರತಿ ನೀರಾವರಿ ಸೋಲಾರ್‌ ಪಂಪ್‌ ಸೆಟ್‌ಗೆ 3.5 ಲಕ್ಷ ರೂ. ತಗಲುತ್ತದೆ. 1.5 ಲಕ್ಷ ರೂ. ನಬಾರ್ಡ್‌ನಿಂದ ಸಬ್ಸಿಡಿ ನೀಡುವುದಲ್ಲದೇ ಶೇ.3ರ ಬಡ್ಡಿ ದರದಲ್ಲಿ 2 ಲಕ್ಷ ರೂ. ಸಾಲ ನೀಡುವ ಯೋಜನೆ ಇದಾಗಿದೆ. ಯೋಜನೆ ಜಾರಿಯಾದಲ್ಲಿ ವಿದ್ಯುತ್‌ ಸಮಸ್ಯೆ ಎಂದು ತಲೆ ಮೇಲೆ ಕೈಹೊತ್ತು ಕೂಡುವ ಅವಶ್ಯತೆ ಬೀಳ್ಳೋದಿಲ್ಲ. ವರ್ಷದ 12 ತಿಂಗಳು ರೈತರು ಯಾವುದೇ ತೊಂದರೆ ಇಲ್ಲದೆ ಬೆಳೆ ಬೆಳೆಯಬಹುದು ಎಂದರು.

ಮಾರುಕಟ್ಟೆಯಲ್ಲಿ 1200-1300ರೂ. ಗಳಿಗೆ ಭತ್ತ ಮಾರುವ ದುಸ್ಥಿತಿ ಕರ್ನಾಟಕದ ಕೊನೆ ಹಳ್ಳಿ ಖಂಡೆರಾಯನಪಲ್ಲಿ ಮತ್ತು ಸುತ್ತಮುತ್ತಲಿನ ರೈತರದ್ದಾಗಿತ್ತು. ಹೀಗಾಗಿ ಇಲ್ಲಿ ಭತ್ತ ಖರೀದಿ ಕೇಂದ್ರ ಸ್ಥಾಪನೆಯ ಬೇಡಿಕೆಗೆ ಸರ್ಕಾರ ಮಂಜೂರಾತಿ ನೀಡಿ, ಈಗ ಖರೀದಿ ಕೇಂದ್ರ ಆರಂಭಿಸಿದ್ದು ರೈತರಲ್ಲಿ ಮಂದಹಾಸ ಮೂಡಿಸಿದೆ. ಪ್ರಸಕ್ತ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ ಸೇಡಂ ತಾಲೂಕಿನಲ್ಲಿ ನಾಲ್ಕು, ಚಿತ್ತಾಪುರ ಮತ್ತು ಜೇವರ್ಗಿ ತಾಲೂಕಿನ ತಲಾ ಎರಡರಂತೆ ಎಂಟು ಭತ್ತ ಖರೀದಿ ಕೇಂದ್ರ ತೆರೆಯಲಾಗಿದೆ. ಪ್ರತಿ ರೈತರಿಂದ ಕ್ವಿಂಟಲ್‌ಗೆ 1940 ರೂ. ಗಳಂತೆ ಗರಿಷ್ಠ 40 ಕ್ವಿಂಟಲ್‌ ಭತ್ತ ಖರೀದಿಸಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಸಂಸದ ಡಾ| ಉಮೇಶ ಜಾಧವ ಮಾತನಾಡಿ, ತಿಂಗಳ ಹಿಂದೆ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಇಲ್ಲಿಗೆ ಬಂದಾಗ ಸ್ಥಳೀಯ ಮುಖಂಡರು ಭತ್ತ ಖರೀದಿ ಕೇಂದ್ರಕ್ಕೆ ಬೇಡಿಕೆ ಇಟ್ಟಿದ್ದರು. ಕೇಂದ್ರ ತೆರೆಯುವ ಕುರಿತು ಅಂದು ನಾನು ಮತ್ತು ಶಾಸಕ ರಾಜಕುಮಾರ ತೇಲ್ಕೂರ ಭರವಸೆ ನೀಡಿದ್ದೆವು. ಅದರಂತೆ ಖರೀದಿ ಕೇಂದ್ರ ಆರಂಭಿಸಲಾಗಿದೆ ಎಂದರು.

Advertisement

ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್‌ ಮಾತನಾಡಿ, ಭತ್ತ ಖರೀದಿ ಕೇಂದ್ರದಲ್ಲಿ ಇದುವರೆಗೂ 95 ಜನ ನೋಂದಾಯಿಸಿಕೊಂಡಿದ್ದಾರೆ. 3000 ನೋಂದಣಿ ಗುರಿ ಹೊಂದಲಾಗಿದೆ. ಗರಿಷ್ಠ 40 ಕ್ವಿಂಟಲ್‌ ಭತ್ತ ಮಾರಾಟ ಮಾಡಬಹುದು ಎಂದರು.

ಹಾಲು ಕರೆಯುವ ಯಂತ್ರ ವಿತರಣೆ

ಪಶುಸಂಗೋಪನಾ ಇಲಾಖೆಯಿಂದ ಶೇ.90 ಸಹಾಯಧನದೊಂದಿಗೆ ರೈತ ಮಹಿಳೆ ಸುಮಿತ್ರಮ್ಮ ಅಂಜಲಪ್ಪ ಮದಕಲ್‌ ಅವರಿಗೆ ಹಸು ಹಾಲು ಕರೆಯುವ ಯಂತ್ರವನ್ನು ಶಾಸಕ- ಸಂಸದರು ವಿತರಿಸಿದರು.

ಕಾರ್ಯಾದೇಶ ವಿತರಣೆ

ಸರ್ಕಾರದ ಸಹಾಯಧನ 18632 ರೂ. ಜೊತೆಗೆ ಫಲಾನುಭವಿಯ ವೆಚ್ಚ 2070 ರೂ. ಸೇರಿ ಪ್ರತಿಹೆಕ್ಟೇರ್‌ಗೆ 20702 ರೂ. ಗಳಂತೆ ಕೃಷಿ ಬೆಳೆಗಳಿಗೆ ಉಪಯೋಗಿಸುವ ತುಂತುರು ನೀರಾವರಿ ಘಟಕ ಅಳವಡಿಕೆಗೆ ಐದು ಜನ ರೈತರಿಗೆ ಸಾಂಕೇತಿಕವಾಗಿ ಕಾರ್ಯಾದೇಶವನ್ನು ವಿತರಿಸಲಾಯಿತು.

ರೈತರಿಂದ ಡಿಸಿಗೆ ಸನ್ಮಾನ

ಸ್ವಾತಂತ್ರ ಪಡೆದ 75 ವರ್ಷವಾದರೂ ಖಂಡೆರಾಯನಪಲ್ಲಿಗೆ ಜಿಲ್ಲಾಧಿಕಾರಿಗಳು ಬಂದಿರಲಿಲ್ಲ. ಶನಿವಾರ ಮನೆ ಬಾಗಿಲಿಗೆ ಬಂದು ಕಂದಾಯ ದಾಖಲೆಗಳನ್ನು ನೀಡಿದ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್‌ ಅವರಿಗೆ ಗ್ರಾಮದ ರೈತರು ಅದ್ಧೂರಿಯಾಗಿ ಸನ್ಮಾನಿಸಿದರು.

ಪ್ರಭಾರಿ ಸಹಾಯಕ ಆಯುಕ್ತೆ ಸುರೇಖಾ, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕ ಶಾಂತಗೌಡ ಗುಣಕಿ, ತಹಶೀಲ್ದಾರ್‌ ಬಸವರಾಜ ಬೆಣ್ಣೆಶಿರೂರ, ಕೃಷಿ ಇಲಾಖೆ ಉಪನಿರ್ದೇಶಕ ಸಮದ್‌ ಪಟೇಲ್‌, ಸಹಾಯಕ ನಿರ್ದೇಶಕ ಹಂಪಣ್ಣ ಚವ್ಹಾಣ, ಸಹಕಾರ ಇಲಾಖೆ ಸಹಾಯಕ ನಿಬಂಧಕ ರವಿಂದ್ರ, ಸೇಡಂ ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಡಾ| ಮಾರುತಿ ನಾಯಕ್‌, ಮುಖಂಡರಾದ ಪರ್ವತರೆಡ್ಡಿ ಪಾಟೀಲ, ನಾಗರೆಡ್ಡಿ ದೇಶಮುಖ, ಸಿದ್ಧಯ್ಯ ಸ್ವಾಮಿ ನಾಡೆಪಲ್ಲಿ, ನಾಗೇಂದ್ರಪ್ಪ ಸಾಹುಕಾರ, ಓಂಪ್ರಕಾಶ ಪಾಟೀಲ ಹಾಗೂ ಅಧಿಕಾರಿಗಳು ಇದ್ದರು.

ಕಲಬುರಗಿ ಕಲ್ಯಾಣಕ್ಕೆ ಡಿಸಿ ಕಟಿಬದ್ದ ಕಲಬುರಗಿ ಕಲ್ಯಾಣಕ್ಕೆ ದಕ್ಷ ಅಧಿಕಾರಿ ಡಿ.ಸಿ. ಯಶವಂತ ವಿ. ಗುರುಕರ್‌ ಕಟಿಬದ್ಧರಾಗಿದ್ದಾರೆ. ಅಧಿಕಾರ ವಹಿಸಿದ ಎರಡೇ ದಿನದಲ್ಲಿ ಎರಡು ವರ್ಷದಿಂದ ಅನುಕಂಪದ ನೌಕರಿಗೆ ಅಲೆಡಾಡುತ್ತಿದ್ದ ಮಹಿಳೆಗೆ ನೌಕರಿ ನೀಡಿ ಮಾನವೀಯತೆ ಮೆರೆದಿದ್ದಾರೆ. ಹಲವಾರು ವರ್ಷಗಳಿಂದ ಧೂಳು ಹಿಡಿದಿದ್ದ ಭೂವ್ಯಾಜ್ಯ ಕಡತಗಳಿಗೆ ಒಂದೇ ತಿಂಗಳಿನಲ್ಲಿ ಮುಕ್ತಿ ನೀಡಿದ್ದಾರೆ. ಭ್ರಷ್ಟರಿಗೆ ಸಿಂಹಸ್ವಪ್ನವಾಗಿರುವ ಡಿಸಿ ಕಚೇರಿಯಲ್ಲಿ ಕಡಿಮೆ, ಜನರ ಬಳಿಯೆ ಹೆಚ್ಚು ಇರುತ್ತಾರೆ ಎಂದು ಜಿಲ್ಲಾಧಿಕಾರಿಗಳ ಕಾರ್ಯಶೈಲಿಯನ್ನು ಸಂಸದರು, ಶಾಸಕರು ಕೊಂಡಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next