Advertisement

ಖಲಿಸ್ತಾನ- ಕೆನಡಾ ನಂಟಿನ ಕಗ್ಗಂಟು

03:02 PM Feb 24, 2018 | Team Udayavani |

ಭಾರತ ಮತ್ತು ಕೆನಡಾ ಸಂಬಂಧ ಆಗಾಗ್ಗೆ ಬೇರೆ ಬೇರೆ ಕಾರಣಗಳಿಗೆ ಹಳಸುತ್ತಲೇ ಇದೆ. ಹೆಚ್ಚಿನ ಸಂಖ್ಯೆಯಲ್ಲಿ ಕೆನಡಾದಲ್ಲಿ ಭಾರತೀಯ ರಿದ್ದಾರಾದರೂ, ಅಲ್ಲಿನ ಸರ್ಕಾರ ಮತ್ತು ಭಾರತ ಸರ್ಕಾರದ ಮಧ್ಯದ ಸಂಬಂಧ ಊರ್ಧ್ವಗತಿ ಕಾಣಲೇ ಇಲ್ಲ. ಎರಡೂ ದೇಶಗಳ ಸಂಬಂಧದಲ್ಲಿ ಮೊದಲು ಹುಳಿ ಹಿಂಡಿದ್ದು ಭಾರತದ ಅಣ್ವಸ್ತ್ರ ಪರೀಕ್ಷೆ. 2010ರಲ್ಲಿ ಈ ಸಂಬಂಧ ಒಪ್ಪಂದಕ್ಕೆ ಉಭಯ ದೇಶಗಳು ಸಹಿ ಹಾಕಿದ ನಂತರದಲ್ಲಿ ಖಲಿಸ್ತಾನ ವಿಷಯದಲ್ಲಿ ದೇಶಗಳು ದೂರಾಗಿವೆ. ಇದೀಗ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರಾಡ್ನೂ ಭಾರತಕ್ಕೆ ಆಗಮಿಸಿ ಸಂಬಂಧ ಸುಧಾರಣೆ ಯತ್ನ ನಡೆಸುತ್ತಿರುವ ಮಧ್ಯೆಯೇ, ಖಲಿಸ್ತಾನಿ ಪ್ರತ್ಯೇಕತಾವಾದಿಗೆ ಔತಣಕೂಟಕ್ಕೆ ಆಹ್ವಾನ ನೀಡಲಾಗಿತ್ತು ಎಂಬುದು ವಿವಾದಕ್ಕೆ ಕಾರಣವಾಗಿದೆ.

Advertisement

ಖಲಿಸ್ತಾನ ವಿವಾದದ ಸುತ್ತ
ಕೆನಡಾದ 12 ಲಕ್ಷ ಜನಸಂಖ್ಯೆಯಲ್ಲಿ 4.70 ಲಕ್ಷ ಜನರು ಸಿಖ್ಖರೇ ಇರುವುದರಿಂದ, ಅಲ್ಲಿ ಸಿಖ್ಖರು ರಾಜಕೀಯವಾಗಿ ಮಹತ್ವ ಪಡೆದಿದ್ದಾರೆ. 1984ರಲ್ಲಿ ಸಿಖ್‌ ದಂಗೆ ನಡೆದಾಗ ಖಲಿಸ್ತಾನ ಹೋರಾಟದ ನೆಲೆಯೇ ಕೆನಡಾಗೆ ಸ್ಥಳಾಂತರಗೊಂಡಿತು. ಅದಾಗಲೇ ಕೆನಡಾ ಗುಪ್ತಚರ ವಿಭಾಗದಲ್ಲಿ ಸಿಖ್ಖರ ಪ್ರಾಬಲ್ಯವಿತ್ತು. ಹೀಗಾಗಿ ಸಿಖ್ಖರು ಕೆನಡಾದಲ್ಲಿ ಸುಲಭವಾಗಿ ನೆಲೆ ಕಂಡುಕೊಂಡರು. ಆ ನಂತರದಲ್ಲಿ ತೆರೆಮರೆಯಲ್ಲೇ ಇದ್ದ ಖಲಿಸ್ತಾನ ಹೋರಾಟ, ಕೆನಡಾದಲ್ಲಿ ರಾಜಕೀಯವಾಗಿಯೂ ಸಿಖ್ಖರು ಪ್ರಾಮುಖ್ಯತೆ ಪಡೆದುಕೊಂಡ ಇತ್ತೀಚೆಗಿನ ಕೆಲವು ವರ್ಷಗಳಿಂದ ತೀವ್ರಗೊಳ್ಳುತ್ತಿದೆ. ಕಳೆದ ವರ್ಷ ಕೆನಡಾ ಸಂಸತ್ತಿನಲ್ಲಿ 1984ರಲ್ಲಿನ ಸಿಖ್‌ ದಂಗೆಯನ್ನು ನರಮೇಧ ಎಂದು ನಿಲುವಳಿ ಮಂಡಿಸಿದ್ದರಿಂದ ಸಂಬಂಧ ಹಳಸಿತ್ತು. 

ಅದರ ನಂತರದಲ್ಲಿ, ಪಂಜಾಬ್‌ ಚುನಾವಣೆಯ ವೇಳೆ ಕೆನಡಾದಲ್ಲಿ ಪ್ರಚಾರ ಮಾಡಲು ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಅವಕಾಶ ಕೇಳಿದಾಗ ನಿರಾಕರಿಸಲಾಗಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ, ಕೆನಡಾ ರಕ್ಷಣಾ ಸಚಿವ ಸಜ್ಜನ್‌ ಭಾರತಕ್ಕೆ ಆಗಮಿಸಿದಾಗ ಅಮರಿಂದರ್‌ ಸಿಂಗ್‌ ಭೇಟಿ ಮಾಡಿರಲಿಲ್ಲ. ಇದೀಗ ಭಾರತದ ಏಕತೆಯನ್ನು ನಾವು ಬೆಂಬಲಿಸುತ್ತೇವೆ ಎಂದು ಪ್ರಧಾನಿ ಜಸ್ಟಿನ್‌ ಹೇಳಿದ ಮರುದಿನವೇ ಔತಣಕೂಟಕ್ಕೆ ಖಲಿಸ್ತಾನಿ ಹೋರಾಟಗಾರನಿಗೆ ಆಹ್ವಾನ ಕಳುಹಿಸಲಾಗಿತ್ತು ಎಂಬ ಸುದ್ದಿ ಹೊರಬಿದ್ದಿದ್ದು, ಸಂಬಂಧ ಸುಧಾರಣೆಯ ಬಗ್ಗೆ ಜಸ್ಟಿನ್‌ ಮಾಡಿದ ಎಲ್ಲ ಪ್ರಯತ್ನಕ್ಕೂ ಹುಳಿ ಹಿಂಡಿದಂತಾಗಿದೆ.

ಅಣ್ವಸ್ತ್ರ ಪರೀಕ್ಷೆಯ ಬಿಕ್ಕಟ್ಟು
1974ರಲ್ಲಿ ಭಾರತವು ಕೆನಡಾ ಒದಗಿಸಿದ ರಿಯಾಕ್ಟರ್‌ ಬಳಸಿ ಅಣ್ವಸ್ತ್ರ ಪರೀಕ್ಷೆ ನಡೆಸಿದ್ದು ಕೆನಡಾವನ್ನು ಸಿಟ್ಟಿಗೆಬ್ಬಿಸಿತ್ತು. ಶಾಂತಿಯುತ ಉದ್ದೇಶಕ್ಕೆಂದು ಖರೀದಿಸಿದ ರಿಯಾಕ್ಟರ್‌ಅನ್ನು ಅಣ್ವಸ್ತ್ರ ಪರೀಕ್ಷೆಗೆ ಬಳಸಿದ್ದರಿಂದ ಭಾರತದ ಮೇಲೆ ಕೆನಡಾ ನಿಷೇಧ ಹೇರಿ, ಯುರೇನಿಯಂ ಪೂರೈಕೆಯನ್ನು ನಿಲ್ಲಿಸಿತ್ತು. ಆದರೆ 2010ರಲ್ಲಿ ಪ್ರಧಾನಿಯಾಗಿದ್ದ ಮನಮೋಹನ ಸಿಂಗ್‌ ಕೆನಡಾಗೆ ತೆರಳಿ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಕೆನಡಾ ಭಾರತಕ್ಕೆ ಯುರೇ  ನಿಯಂ ಕಳುಹಿಸಲು ಆರಂಭಿಸಿತ್ತು. ಅಲ್ಲಿಗೆ ಈ ವಿವಾದ ಬಗೆಹರಿದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next