Advertisement

ಖಾಲಿಯಾ ರಫೀಕ್‌ ಕೊಲೆ: ಮೂವರ ಬಂಧನ

12:07 PM Mar 01, 2017 | Team Udayavani |

ಮಂಗಳೂರು: ರೌಡಿಶೀಟರ್‌, ಉಪ್ಪಳ ನಿವಾಸಿ  ಖಾಲಿಯಾ ರಫೀಕ್‌  ಹತ್ಯೆ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಮಂಗಳೂರಿನ ಸಿಸಿಬಿ ಪೊಲೀಸರು ಹಾಗೂ ಉಳ್ಳಾಲ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. 

Advertisement

ಉಪ್ಪಳ ಕೊಂಡೆಕೂರು ನಿವಾಸಿ  ಟಿಪ್ಪರ್‌ ಚಾಲಕ ವೃತ್ತಿಯ  ನೂರ್‌ ಆಲಿ (36), ಹೊಸ ದುರ್ಗ ತಾಲೂಕು ಪನಂತ್ತೂರ್‌ ರಾಜಪುರಂ ನಿವಾಸಿ ಚಾಲಕ ವೃತ್ತಿಯ ರಶೀದ್‌ ಟಿ.ಎಸ್‌. (30) ಹಾಗೂ  ಬಂಟ್ವಾಳ ತಾಲೂಕು  ಸಂಗಬೆಟ್ಟು ನಿವಾಸಿ  ಕೂಲಿ ಕೆಲಸದ ಹುಸೈನಬ್ಬ ಅಲಿಯಾಸ್‌ ಹುಸೈನ್‌ ಅಲಿಯಾಸ್‌ ಸುಹೈಲ್‌ ಬಂಧಿತರು. ಇನ್ನೂ  ಐವರು  ಆರೋಪಿಗಳ ಬಂಧನವಾಗಬೇಕಾಗಿದೆ. 

ಕೇರಳ ಮತ್ತು ಕರ್ನಾಟಕದಲ್ಲಿ ಕೊಲೆಯತ್ನ, ಕೊಲೆ ಹಾಗೂ ದರೋಡೆ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಕುಖ್ಯಾತ ಗೂಂಡಾ ಖಾಲಿಯಾ ರಫೀಕ್‌ನನ್ನು (38)  ಫೆ. 14 ರಂದು  ತಡರಾತ್ರಿ ದುಷ್ಕರ್ಮಿಗಳ  ತಂಡ  ನಗರದ  ಕೋಟೆಕಾರು ಪೆಟ್ರೋಲ್‌ ಬಂಕ್‌ ಬಳಿ ಗುಂಡಿಕ್ಕಿ, ತಲವಾರಿನಿಂದ ಕಡಿದು  ಹತ್ಯೆ  ಮಾಡಿತ್ತು. 
ಆರೋಪಿಗಳ ಬಂಧನದ ಬಗ್ಗೆ ಮಂಗಳೂರಿನ ತಮ್ಮ ಕಚೇರಿಯಲ್ಲಿ ಪೊಲೀಸ್‌ ಆಯುಕ್ತ  ಎಸ್‌. ಚಂದ್ರಶೇಖರ್‌ ಮಂಗಳವಾರ ಪತ್ರಿಕಾ ಗೋಷ್ಠಿಯಲ್ಲಿ   ಮಾಹಿತಿ ನೀಡಿದರು.  

ತಲೆ ಮರೆಸಿಕೊಂಡಿರುವ ಆರೋಪಿಗಳ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮಂಜನಾಡಿ  ನೆತ್ತಿಲಪದವು ರಸ್ತೆಯ ಕಲ್ಲರಕೋಡಿ ಬಳಿ ಕಾರಿನಲ್ಲಿದ್ದ   ಮೂವರು ಆರೋಪಿಗಳನ್ನು ಬಂಧಿಸಿದರು.  

ಬಂಧಿತರಿಂದ  ಕೃತ್ಯಕ್ಕೆ  ಉಪಯೋಗಿಸಿದ  ನಾಡ ಪಿಸ್ತೂಲ್‌,  ತಲವಾರು ಹಾಗೂ ಮಾರುತಿ ಎರ್ಟಿಗಾ  ಕಾರನ್ನು ವಶಕ್ಕೆ  ಪಡೆದುಕೊಂಡಿದ್ದಾರೆ.

Advertisement

ತಲೆಮರೆಸಿಕೊಂಡಿರುವ  ಉಳಿದ ಆರೋಪಿಗಳ ಶೋಧ ಮುಂದುವರಿದಿದೆ ಎಂದು ಆಯುಧಿಕ್ತರು ವಿವರಿಸಿದರು. 
ಖಾಲಿಯಾ ಮತ್ತು ಇನ್ನೋರ್ವ ಜಿಯಾ  ನಡುವೆ ಸಂಘರ್ಷವಿತ್ತು.  ಖಾಲಿಯಾ 2013 ರಲ್ಲಿ  ಮುತ್ತಲಿಬ್‌ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದ. ಬಳಿಕ ಆತನನ್ನು ಬಂಧನವಾಗಿತ್ತು.   ಮುತ್ತಲಿಬ್‌ ತಮ್ಮ  ನೂರ್‌ ಆಲಿ  ಜಿಯಾ ಜತೆ ಸೇರಿ ಖಾಲಿಯಾ ಕೊಲೆ ಸಂಚು ರೂಪಿಸಿದ್ದು  ಖಾಲಿಯಾ ಚಲನವಲನಗಳ ಬಗ್ಗೆ ತಂಡ ಗಮನಿಸುತ್ತಿತ್ತು.   ಮೂರು ತಿಂಗಳಿನಿಂದ ಐದು  ಬಾರಿ ಸತತ  ಆತನ ಕೊಲೆಗೆ  ಪ್ರಯತ್ನಗಳು ನಡೆದಿತ್ತು.

ಫೆ. 14ರಂದು ರಾತ್ರಿ ಖಾಲಿಯಾ ಕಾಸರಗೋಡಿನಿಂದ ಮಂಗಳೂರಿಗೆ ಬರುವ ಬಗ್ಗೆ ಮಾಹಿತಿ ಪಡೆದ ತಂಡ ಆತನನ್ನು ಹಿಂಬಾಲಿಸಿಕೊಂಡು ಬಂದಿತ್ತು. ಕೋಟೆಕಾರು ಬಳಿ ರಾಂಗ್‌ಸೈಡ್‌ನ‌ಲ್ಲಿ ನಿಲ್ಲಿಸಿದ್ದ ಟಿಪ್ಪರ್‌ನಿಂದ  ಆತನ ಕಾರಿಗೆ ಢಿಕ್ಕಿ ಹೊಡೆಸಿ ಬಳಿಕ ಎರಡು ಗುಂಡು ಹಾರಿಸಿ ತಲವಾರಿನಿಂದ ಕಡಿದು ಕೊಲೆ ಮಾಡಲಾಗಿತ್ತು  ಎಂದವರು ತಿಳಿಸಿದರು. 
ಖಾಲಿಯಾ ಕಲಿ ಯೋಗೀಶ  ಪರವಾಗಿ ಕೆಲಸ ಮಾಡಿದ್ದು  ಜುವೆಲರಿ  ಮಳಿಗೆ  ಶೂಟೌಟ್‌ನಲ್ಲಿ  ಭಾಗಿಯಾಗಿದ್ದ ಎಂದರು.

ಎಸಿಸಿ ಶ್ರುತಿ ಅವರ ನೇತೃತ್ವದಲ್ಲಿ ಸಿಸಿಬಿ ಘಟಕದ ಇನ್ಸ್‌ಪೆಕ್ಟರ್‌  ಸುನೀಲ್‌ ವೈ. ನಾಯ್ಕ ಅವರ ತಂಡ ಹಾಗೂ ಉಳ್ಳಾಲ ಪಿಐ ಗೋಪಿಕೃಷ್ಣ ಅವರ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು. 

ಕಾಸರಗೋಡು ಪೊಲೀಸರು ಹಾಗೂ ಮಂಗಳೂರು ಪೊಲೀಸರು  ಅಪರಾಧ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಿದೆ.

ಇತ್ತೀಚೆಗೆ ದರೋಡೆಗೆ ತಂತ್ರ ರೂಪಿಸುತ್ತಿದ್ದ ಆರು ಮಂದಿಯನ್ನು ಬಂಧಿಸಲಾಗಿತ್ತು ಎಂದರು. ಡಿಸಿಪಿಗಳಾದ ಶಾಂತರಾಜು ಹಾಗೂ ಡಾ| ಸಂಜೀವ ಪಾಟೀಲ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next