Advertisement

ಖಾಕಿಗೆ ಭೀಮಾ ತೀರದ ಹತ್ಯೆ ನಂಟು: ಅಖಾಡಕ್ಕಿಳಿದ ಹಿರಿಯ ಅಧಿಕಾರಿಗಳು!

06:20 AM Jun 19, 2018 | Team Udayavani |

ವಿಜಯಪುರ: ಭೀಮಾ ತೀರದ ಗಂಗಾಧರ ಚಡಚಣ ಹತ್ಯೆಯಲ್ಲಿ ಪೊಲೀಸರ ಪಾತ್ರ ಬಹಿರಂಗವಾಗುತ್ತಲೇ ಪ್ರಕರಣ
ಗಂಭೀರ ಸ್ವರೂಪ ಪಡೆಯತೊಡಗಿದೆ. ತನಿಖೆ ನಡೆಸುತ್ತಿರುವ ಡಿಎಸ್‌ಪಿ ನೇತೃತ್ವದ ಸಿಐಡಿ ಅಧಿಕಾರಿಗಳ ಪ್ರಗತಿ ಪರಿಶೀಲಿಸಿ ಹೆಚ್ಚಿನ ಮಾರ್ಗದರ್ಶನ ನೀಡಲು ಹಿರಿಯ ಅಧಿಕಾರಿಗಳು ವಿಜಯಪುರ ಜಿಲ್ಲೆಯತ್ತ ದೌಡಾಯಿಸಿದ್ದಾರೆ.

Advertisement

ಗಂಗಾಧರ ಚಡಚಣನ್ನು ವಶಕ್ಕೆ ಪಡೆದಿದ್ದ ಪೊಲೀಸರು ಅವರನ್ನು ಚಡಚಣ ಕುಟುಂಬದ ಬದಟಛಿ ವೈರಿ ಮಹದೇವ
ಭೈರಗೊಂಡ ತಂಡಕ್ಕೆ ಹಸ್ತಾಂತರಿಸಿ ಹತ್ಯೆ ಮಾಡಲು ಪೂರಕ ಪರಿಸ್ಥಿತಿ ನಿರ್ಮಿಸಿದ್ದರು ಎಂಬ ಆರೋಪದಲ್ಲಿ ಈಗಾಗಲೇ ಪಿಎಸ್‌ಐ ಗೋಪಾಲ ಹಳ್ಳೂರ ಹಾಗೂ ಮೂವರು ಪೇದೆಗಳು ಜೈಲು ಸೇರಿದ್ದಾರೆ. ಸಿಐಡಿ ಡಿಎಸ್ಪಿ ಜನಾರ್ದನ ನೇತೃತ್ವದ ಅಧಿಕಾರಿಗಳ ತಂಡ ಕಳೆದ ಮೂರು ದಿನಗಳಿಂದ ಪ್ರಕರಣದಲ್ಲಿ ಮಹತ್ವದ ದಾಖಲೆಗಳನ್ನು ಸಂಗ್ರಹಿಸಿದೆ. ನ್ಯಾಯಾಂಗ ಬಂಧನದಲ್ಲಿರುವ ಹಂತಕರು ಹಾಗೂ ಆರೋಪಿ ಪೊಲೀಸ್‌ ಅಧಿಕಾರಿಗಳನ್ನು ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲು ಸಿಐಡಿ ಅಧಿಕಾರಿಗಳು ಮುಂದಾಗಿದ್ದಾರೆ.

ಈ ಮಧ್ಯೆ, ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿರುವ ಕಾರಣ ಸಿಐಡಿ ಎಸ್ಪಿ ಆನಂದಕುಮಾರ ಸೋಮವಾರ
ವಿಜಯಪುರಕ್ಕೆ ಆಗಮಿಸಿದ್ದು, ತನಿಖಾ ಅಧಿಕಾರಿಗಳ ತಂಡದೊಂದಿಗೆ ಚರ್ಚೆ ನಡೆಸಿದ್ದಾರೆ.ಮತ್ತೂಂದೆಡೆ
ಪ್ರಕರಣದಲ್ಲಿ ಪೊಲೀಸ್‌ ಅಧಿಕಾರಿಗಳ ಪಾತ್ರ ಇರುವ ಕಾರಣ ಸಿಐಡಿ ಉನ್ನತ ಮಟ್ಟದ ಅ ಧಿಕಾರಿಗಳೇ ತನಿಖೆಯ
ಉಸ್ತುವಾರಿಗಾಗಿ ಖುದ್ದು ಜಿಲ್ಲೆಗೆ ಆಗಮಿಸುತ್ತಿದ್ದಾರೆ.

ಜೂ.19ರಂದು ಸಿಐಡಿ ಎಡಿಜಿಪಿ ಚರಣರೆಡ್ಡಿ ಅವರೇ ವಿಜಯಪುರಕ್ಕೆ ಬರುತ್ತಿರುವುದು ಗಂಗಾಧರ ಹತ್ಯೆ ಪ್ರಕರಣ
ಗಂಭೀರ ಸ್ವರೂಪ ಪಡೆಯುತಿರುವುದಕ್ಕೆ ಸಾಕ್ಷಿ.

ಪ್ರಮುಖ ಆರೋಪಿ ಪರಾರಿ: ಮತ್ತೂಂದೆಡೆ ಗಂಗಾಧರ ಹತ್ಯೆಯಲ್ಲಿ ಪ್ರಮುಖ ಆರೋಪಿ ಎಂದು ದೂರಲಾಗಿರುವ
ಮಹದೇವ ಭೈರಗೊಂಡ, ದೂರು ದಾಖಲಾಗುತ್ತಲೇ ನಾಪತ್ತೆಯಾಗಿದ್ದು, ಅವರ ಪತ್ತೆಗೆ ಪೊಲೀಸರು ಜಾಲ
ಬೀಸಿದ್ದಾರೆ. ಜತೆಗೆ ಮಹದೇವ ಭೈರಗೊಂಡ ಕ್ರೈಂ ಇತಿಹಾಸ ಜಾಲಾಡಲು ಮುಂದಾಗಿದ್ದಾರೆ.

Advertisement

ಹತ್ಯೆಗೂ ಮುನ್ನ ಬಂದೂಕು
ಲೈಸೆನ್ಸ್‌ ಕೋರಿದ್ದ ಧರ್ಮ?

ಚಡಚಣ ಪಿಎಸ್‌ಐ ಗೋಪಾಲ ಹಳ್ಳೂರ ತನ್ನನ್ನು ಎನ್‌ಕೌಂಟರ್‌ ಮಾಡುವ ಒಂದು ತಿಂಗಳ ಮೊದಲು ಧರ್ಮರಾಜ್‌ ಚಡಚಣ, ತನಗೆ ಜೀವಭಯ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದ. ಇದಕ್ಕಾಗಿಯೇ ಧರ್ಮರಾಜ್‌ ಬಂದೂಕು ಲೈಸೆನ್ಸ್‌ಗೆ ಅರ್ಜಿ ಸಲ್ಲಿಸಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ.

ಮಹಾದೇವ ಭೈರಗೊಂಡ ಕುಟುಂಬದೊಂದಿಗೆ ವೈಷಮ್ಯ ಇರುವ ಕಾರಣ ಅವರಿಂದ ತನಗೆ ಜೀವ ಭಯವಿದ್ದು, ಬಂದೂಕು ಲೈಸೆನ್ಸ್‌ ನೀಡುವಂತೆ ಜಿಲ್ಲಾ ಧಿಕಾರಿ ಕಚೇರಿಗೆ ಧರ್ಮರಾಜ್‌ ಚಡಚಣ 2017, ಸೆ.6ರಂದು ಅರ್ಜಿ ಸಲ್ಲಿಸಿದ್ದ. ತನ್ನ ಹತ್ಯೆಯಾಗುವ ಅನುಮಾನ ವ್ಯಕ್ತಪಡಿಸಿದ ಕೇವಲ 27 ದಿನಕ್ಕೆ ಎನ್‌ಕೌಂಟರ್‌ನಲ್ಲಿ ಹತ್ಯೆಯಾಗಿದ್ದ. 2017, ಅ.3ರಂದು ಎಸ್‌ಐ ಗೋಪಾಲ ಹಳ್ಳೂರ ಹಾರಿಸಿದ ಗುಂಡಿನಿಂದ ಧರ್ಮರಾಜ್‌ ಎನ್‌ಕೌಂಟರ್‌ ಆಗಿದ್ದ. ಅದೇ ದಿನ, ಆತನ ತಮ್ಮ ಗಂಗಾಧರ ಪೊಲೀಸರ ವಶದಲ್ಲಿದ್ದರೂ ಕುಮ್ಮಕ್ಕು ನಡೆಸಿ ಆತನನ್ನು ತನ್ನ ಸುಪರ್ದಿಗೆ ಪಡೆದಿದ್ದ ಭೈರಗೊಂಡ ಹತ್ಯೆ ಮಾಡಿದ್ದ ಎಂದು ದೂರಲಾಗಿದೆ.ಇದೀಗ ಈ ಪ್ರಕರಣವನ್ನೇ ಸಿಐಡಿ ತನಿಖೆ ನಡೆಸುತ್ತಿದೆ.

ಧರ್ಮರಾಜ್‌ ಪ್ರಕರಣವೂ ಸಿಐಡಿ ತನಿಖೆ? 
ಧರ್ಮರಾಜ್‌ ಎನ್‌ಕೌಂಟರ್‌ ಕೂಡ ನಕಲಿ ಎಂಬ ಅನುಮಾನ ಮೂಡುತ್ತಿದೆ. ಗಂಗಾಧರ ಹತ್ಯೆ ಹಾಗೂ ಧರ್ಮರಾಜ್‌ ಎನ್‌ಕೌಂಟರ್‌ಗೂ ನಂಟಿರುವ ಕಾರಣ ಎನ್‌ಕೌಂಟರ್‌ ಸಾಚಾತನದ ಕುರಿತೂ ತನಿಖೆ ನಡೆಯುವ ಸಾಧ್ಯತೆ ಇದೆ. ಈ ತನಿಖೆಯನ್ನೂ ಸಿಐಡಿ ಅಧಿಕಾರಿಗಳೇ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next