Advertisement

ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳಲ್ಲಿ  ಎರಡು ದಿನ ಖಾದಿ ದಿರಿಸು

10:29 AM Oct 08, 2018 | |

ಬೆಳ್ತಂಗಡಿ: ಗಾಂಧೀಜಿಯವರ 150ನೇ ಜಯಂತಿಯನ್ನು ಸದಾ ನೆನಪಿನಲ್ಲಿರುವಂತೆ ಮಾಡುವುದು ಹೇಗೆ ಎಂಬ ಪ್ರಶ್ನೆಗೆ ಎಸ್‌ಡಿಎಂ ಎಜುಕೇಶನ್‌ ಸೊಸೈಟಿಯ ಒಂದು ಉತ್ತರ “ದೇಸಿ ಉಡುಪು ಧರಿಸಿ’.

Advertisement

ಅ. 2ರಿಂದ ಸೊಸೈಟಿ ಮಹತ್ವದ ಒಂದು ತೀರ್ಮಾನ ಜಾರಿಗೊಳಿಸಿದೆ.ಅದರಂತೆ ಎಲ್ಲ ಸಿಬಂದಿ ತಿಂಗಳಲ್ಲಿ ಎರಡು ದಿನ ಖಾದಿ ಉಡುಪು ಹೊರತುಪಡಿಸಿ ಬೇರೇನೋ ತೊಡುವುದಿಲ್ಲ. ಸಂಸ್ಥೆಯ ಅಧ್ಯಕ್ಷ, ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಆಶಯದಂತೆ ಸಿಬಂದಿ ಶುಭ್ರ ಬಿಳಿ ಬಣ್ಣದ ಖಾದಿ ವಸ್ತ್ರ ಧರಿಸುತ್ತಾರೆ.

ಇತ್ತೀಚಿನ ಗಾಂಧಿ ಜಯಂತಿಯಂದು, ಸಂಸ್ಥೆಗಳ ಹೆಚ್ಚಿನ ಸಿಬಂದಿ ಖಾದಿ ದಿರಿಸಿನಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದರು. ಮುಂದೆ ತಿಂಗಳಲ್ಲಿ ಎರಡು ಬಾರಿ ಎಲ್ಲರೂ ಖಾದಿ ಧರಿಸುವರು. ಶ್ರೀ ಕ್ಷೇತ್ರದ ಅಧೀನದಲ್ಲೇ ಇರುವ “ಸಿರಿ’ ಸಂಸ್ಥೆಯ ಮೂಲಕ ಖಾದಿ ವಸ್ತ್ರ ಒದಗಿಸುತ್ತಿದ್ದು, ಪುರುಷರು ಶರ್ಟ್‌, ಮಹಿಳೆಯರು ಖಾದಿ ಸೀರೆ ಉಡುವರು. 

ಎಲ್ಲರೂ ಸಮಾನರು
ಇಲ್ಲಿನ ಸಂಸ್ಥೆಗಳಲ್ಲಿ ಉನ್ನತ ಹುದ್ದೆ ಯಿಂದ ಹಿಡಿದು ಕೆಳಹಂತದವರೆಗೆ ಸಾವಿರಾರು ಸಿಬಂದಿ ಇದ್ದು, ಅವರೆಲ್ಲರೂ ಖಾದಿ ತೊಟ್ಟು ಸಮಾನತೆಯ ಪಾಠದ ಜತೆಗೆ ವಿದ್ಯಾರ್ಥಿಗಳಿಗೆ ಪ್ರೇರಣೆ ತುಂಬುವ ಉದ್ದೇಶ ಎನ್ನುತ್ತಾರೆ ಸಿಬಂದಿ.

ಒಂದು-ಹದಿನೈದಕ್ಕೆ ಖಾದಿ!
ಸಂಸ್ಥೆಗಳ ಸಿಬಂದಿ ಪಾಲಿಗೆ ಪ್ರತಿ ತಿಂಗಳ 1ನೇ ಹಾಗೂ 15ನೇ ತಾರೀಕು ಖಾದಿ ದಿನ. ಈ ದಿನಗಳು ರಜಾ ಆಗಿದ್ದರೆ ಮರುದಿನ ಖಾದಿ ಧರಿಸ ಬೇಕು. ಈ ತೀರ್ಮಾನ ಒತ್ತಾಯದ್ದಲ್ಲ, ಸ್ವಯಂ ಪ್ರೇರಣೆಯಿಂದ ಕೈಗೊಂಡಿದ್ದು ಎನ್ನುತ್ತಾರೆ ಸಂಸ್ಥೆಯ ಕಾರ್ಯದರ್ಶಿಗಳು. ಎಲ್ಲ ಖಾದಿ ವಸ್ತ್ರಗಳಲ್ಲಿ “ಎಸ್‌ಡಿಎಂ’ ಎಂದು ಬರೆಯಲಾಗಿದೆ. ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳು ರಾಜ್ಯದ ವಿವಿಧೆಡೆಗಳಲ್ಲಿ ಕಾರ್ಯಾಚರಿಸುತ್ತಿವೆ. ಖಾದಿ ಅಭಿಯಾನ ಉಜಿರೆಯಲ್ಲಿ ಆರಂಭಗೊಂಡಿದ್ದು, ಹಂತ ಹಂತವಾಗಿ ಇತರೆಡೆಗಳಿಗೂ ವಿಸ್ತರಣೆಗೊಳ್ಳಲಿದೆ ಎನ್ನುತ್ತವೆ ಸಂಸ್ಥೆಯ ಮೂಲಗಳು.

Advertisement

ಎಲ್ಲರೂ ಸಮನಾಗಿ ಕಾಣುವಂತೆ ತಿಂಗಳಲ್ಲಿ ಎರಡು ಬಾರಿ ಖಾದಿ ಉಡಲಾಗುವುದು. ಗಾಂಧೀಜಿಯವರ 150ನೇ ಜಯಂತಿ ಸಂದರ್ಭ ಇದು ಅವರ ಸ್ಮರಣೆಯ ಉಪಕ್ರಮವೂ ಹೌದು. ಹಂತ ಹಂತವಾಗಿ ನಮ್ಮ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಅನುಷ್ಠಾನಗೊಳಿಸಲಾಗುತ್ತದೆ.
ಡಾ| ಬಿ. ಯಶೋವರ್ಮ, ಕಾರ್ಯದರ್ಶಿ, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳು, ಉಜಿರೆ

ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next