Advertisement

ಕಾಲಕ್ಕೆ ತಕ್ಕಂತೆ ಬದಲಾದ ಖಾದಿ

12:42 PM Oct 02, 2018 | |

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ನಗರದ ಯುವ ಸಮೂಹ ಖಾದಿಯತ್ತ ಹೆಚ್ಚು ಆಕರ್ಷಿತವಾಗುತ್ತಿದ್ದು, ಖಾದಿ ಸಹ ಆಧುನಿಕತೆಗೆ ತಕ್ಕಂತೆ ತನ್ನ ಸ್ವರೂಪ ಬದಲಿಸಿಕೊಂಡು ಹೆಚ್ಚು ಫ್ಯಾಷನಬಲ್‌ ಆಗುತ್ತಿದೆ.

Advertisement

ಖಾದಿಯತ್ತ ಯುವ ಸಮೂಹವನ್ನು ಸೆಳೆಯಲು ಮುಂದಾಗಿರುವ ಖಾದಿ ಗ್ರಾಮೋದ್ಯೋಗ ಮಂಡಳಿ, ಗಾಂಧಿ ಜಯಂತಿ ಅಂಗವಾಗಿ ಖಾದಿ ಉಡುಪುಗಳ ಮೇಲೆ ರಿಯಾಯಿತಿ ಘೋಷಿಸಿದೆ. ಖಾದಿ ಎಂಪೋರಿಯಂನಲ್ಲಿ ಅ.2ರಿಂದ ಡಿ.7ರವರೆಗೆ ಖಾದಿ ವಸ್ತ್ರಗಳ ಮೇಲೆ ಶೇ.35ರಷ್ಟು ರಿಯಾಯಿತಿ ದೊರೆಯಲಿದೆ. ಅಲ್ಲದೆ ಖಾದಿ ಎಂಪೋರಿಯಂ ಅಕ್ಟೋಬರ್‌ನಲ್ಲಿ ನಾಲ್ಕು ಭಾನುವಾರಗಳೂ ತೆರೆದಿರಲಿದೆ.

ನಗರದ ಎಲ್ಲ ಖಾದಿ ನೇಷನ್‌ ಮಳಿಗೆಗಳಲ್ಲಿ ಅ.1ರಿಂದ 7ವರೆಗೆ ಖಾದಿ ವಸ್ತ್ರಗಳ ಮೇಲೆ ಶೇ.35ರಷ್ಟು, ರೇಷ್ಮೆ ವಸ್ತ್ರಗಳ ಮೇಲೆ ಶೇ.30ರಷ್ಟು ಹಾಗೂ ಚರ್ಮದಿಂದ ತಯಾರಿಸಲ್ಪಟ ವಸ್ತುಗಳ ಮೇಲೆ ಶೇ.20ರಷ್ಟು ರಿಯಾಯಿತಿ ನಿಗದಿಪಡಿಸಲಾಗಿದೆ.

ಖಾದಿ ಗ್ರಾಮೋದ್ಯೋಗ ಮಂಡಳಿಯ ಖಾದಿ ಎಂಪೋರಿಯಂನಲ್ಲಿ ಗಾಂಧಿ ಜಯಂತಿ ಸಮಯದಲ್ಲಿ ಖಾದಿ ಖರೀದಿಯ ಸಡಗರದ ಹಬ್ಬ ನಡೆಯಲಿದ್ದು ರಿಯಾಯಿತಿ ದರ ಹಾಗೂ ಹೊಸ ವಿನ್ಯಾಸ ಮತ್ತು ವಿವಿಧ ಬಣ್ಣದ ಉಡುಪುಗಳು ಹೆಚ್ಚಾಗಿ ಪೂರೈಕೆಯಾಗುವುದರಿಂದ ಈ ಸಮಯದಲ್ಲಿ ಖಾದಿ ಬಟ್ಟೆಗಳಿಗೆ ಬೇಡಿಕೆ ಹೆಚ್ಚಿರುತ್ತದೆ.

ಮೆಸ್ಲಿನ್‌ ಖಾದಿ ಶರ್ಟ್‌ಗಳು, ಜಬ್ಟಾ ಸೆಟ್‌, ಖಾದಿ ಸೀರೆಗಳು, ಕಲ್ಕತ್ತ ಮತ್ತು ಒಡಿಸ್ಸಾದ ಖಾದಿ ಉಡುಪುಗಳಿಗೆ ಎಲ್ಲಿಲ್ಲದ ಬೇಡಿಕೆ ಉಂಟಾಗಿರುತ್ತದೆ. ಅಲ್ಲದೆ ಕರ್ನಾಟಕದ ಹುಬ್ಬಳ್ಳಿ ಸೀರೆಗಳು ಈ ಸಮಯದಲ್ಲಿ ಹೆಚ್ಚಾಗಿ ಮಾರಾಟಗೊಳ್ಳಲಿವೆ. ರಿಯಾಯಿತಿ ಸಂದರ್ಭಗಳನ್ನು ಹೊರತುಪಡಿಸಿದರೆ ಉಳಿದ ದಿನಗಳಲ್ಲಿ 50 ರಿಂದ 60 ಸಾವಿರ ರೂ.ಗಳಷ್ಟು ವ್ಯಾಪಾರ ಆಗುತ್ತದೆ.

Advertisement

ಆದರೆ ರಿಯಾಯಿತಿ ದಿನಗಳಲ್ಲಿ ದಿನಕ್ಕೆ ಒಂದೂವರೆಯಿಂದ ಎರಡು ಲಕ್ಷ ರೂ.ಗಳಷ್ಟು ವ್ಯಾಪಾರ ವಹಿವಾಟು ನಡೆಯುತ್ತದೆ. ಅದರಲ್ಲೂ ಈ ಸಂದರ್ಭದಲ್ಲಿ ಖಾದಿ ವಸ್ತ್ರಗಳಿಂದಲೇ ಹೆಚ್ಚಿನ ಲಾಭ ಗಳಿಸಲಾಗುತ್ತದೆ ಎಂದು ಅವರು ಖಾದಿ ಎಂಪೋರಿಯಂ ಸಹಾಯಕ ವ್ಯವಸ್ಥಾಪಕಿ ವಿಜಯಲಕ್ಷ್ಮಿ ತಿಳಿಸುತ್ತಾರೆ.

ಈ ಮಧ್ಯೆ, ಯುವ ಪೀಳಿಗೆಯ ಟ್ರೆಂಡ್‌ ಅರಿತಿರುವ ಮಾಲ್‌ಗ‌ಳು ದಿನದಿಂದ ದಿನಕ್ಕೆ ಹೆಚ್ಚು ವೈವಿಧ್ಯಮಯ ಖಾದಿ ಉಡುಪುಗಳನ್ನು ಫ್ಯಾಷನ್‌ ಲೋಕಕ್ಕೆ ಪರಿಚಯಲಿಸುತ್ತಲೇ ಇವೆ. ಆದರೆ ಇವು ಅಸಲಿ ಖಾದಿಯಲ್ಲ.

ಮಾಲ್‌ಗ‌ಳಲ್ಲಿ ಸಿಗುವ ಜಗಮಗ ಖಾದಿ ಉಡುಪುಗಳು ಪಾಲಿಸ್ಟರ್‌ ಹಾಗೂ ಲೆನಿನ್‌ ಖಾದಿ ಉಡುಗೆಗಳು. ತೀರಾ ಸರಳವಾಗಿದ್ದರೂ ಗ್ರಾಂಡ್‌ ಲುಕ್‌ ನೀಡುವ ಖಾದಿ ಉಡುಗೆಗಳಿಗೆ ಮಾಲ್‌ಗ‌ಳಲ್ಲಿ ದೊಡ್ಡ ಮೊತ್ತ ನೀಡಿ ಯುವ ಸಮೂಹ ಖರೀದಿಸುತ್ತಿದೆ. ಆದರೆ ಶುದ್ಧ ಖಾದಿ ಎಂದಿಗೂ ಹೊಳೆಯುವುದಿಲ್ಲ. ಅದು ಸರಳವಾಗಿಯೇ ಇರುತ್ತದೆ.

ಶುದ್ಧ ಖಾದಿ ತೀರಾ ದಪ್ಪವಾಗಿದ್ದು, ತಿಳಿ ಬಣ್ಣದಲ್ಲಿ ಇರುತ್ತವೆ. ಶುದ್ಧ ಖಾದಿಯ ಯಾವುದೇ ಬಟ್ಟೆಗಳು ತೆಳುವಾಗಿರುವುದಿಲ್ಲ. ಇದು ಆರೋಗ್ಯದ ಮೇಲೆ ಯಾವುದೇ ಕೆಟ್ಟ ಪರಿಣಾಮ ಬಿರುವುದಿಲ್ಲ. ಅಲ್ಲದೆ ಬಟ್ಟೆಗಳಿಂದ ಬಣ್ಣವೂ ಮಾಸುವುದಿಲ್ಲ. ಒಮ್ಮೆ ತೊಳೆದರೆ ಬಣ್ಣ ಬಿಟ್ಟಂತೆ ಅಂತ ಅನ್ನಿಸಿದರೂ ಬಟ್ಟೆಗಳು ಎಂದಿಗೂ ಬಣ್ಣ ಕಳೆದುಕೊಳ್ಳುವುದಿಲ್ಲ ಎನ್ನುತ್ತಾರೆ ಖಾದಿ ಎಂಪೋರಿಯಂ ಮಳಿಗೆಯ ಸಿಬ್ಬಂದಿ.

ಹಳ್ಳಿಗಳ ಅಭಿವೃದ್ಧಿ ಹಾಗೂ ದೇಶದ ಸ್ವಾವಲಂಬನೆಯಲ್ಲಿ ಗುಡಿ ಕೈಗಾರಿಕೆಗಳು ಪ್ರಮುಖ ಪಾತ್ರ ವಹಿಸಿದ್ದವು. ಖಾದಿ ಬಟ್ಟೆಗಳ ನೆಯ್ಗೆ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸಿತ್ತು. ಆದರೆ ಇಂದು ಖಾದಿ ಮಹತ್ವ ತಿಳಿಯದೇ ದೂರವಾಗುತ್ತಿರುವುದು ನೋವಿನ ಸಂಗತಿ.
-ಎಚ್‌.ಹನುಮಂತಪ್ಪ, ಮಾಜಿ ರಾಜ್ಯಸಭಾ ಸದಸ್ಯ.

ಖಾದಿಯನ್ನು ಇಂದು ರಾಜಕೀಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ಖಾದಿ ಕಮಿಷನ್‌ (ಆಯೋಗ) ಮಿಷನ್‌ ಆಗಿದೆ. ಭಾರತದಲ್ಲಿ ಖಾದಿ ಅಂಗಡಿಗಳು ಹೆಚ್ಚಾಗಬೇಕೆಂಬ ಉದ್ದೇಶದಿಂದ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್‌ ಖಾದಿ ಆಯೋಗ ಸ್ಥಾಪಿಸಿದರು. ಆದರೆ ಆ ಉದ್ದೇಶ ಈಡೇರಿಲ್ಲ.
-ಎಚ್‌.ಎಸ್‌.ದೊರೆಸ್ವಾಮಿ, ಸ್ವಾತಂತ್ರ್ಯ ಹೋರಾಟಗಾರ

* ಶ್ರುತಿ ಮಲೆನಾಡತಿ

Advertisement

Udayavani is now on Telegram. Click here to join our channel and stay updated with the latest news.

Next