ಹಿರಿಯ ಪ್ರಸಂಗಕರ್ತ, ಆದರ್ಶ ಶಿಕ್ಷಕ ಸೀತಾನದಿ ಗಣಪಯ್ಯ ಶೆಟ್ಟಿಯವರ ಸಂಸ್ಮರಣಾರ್ಥ ಕಳೆದ 30 ವರ್ಷಗಳಿಂದ ನೀಡಲಾಗುತ್ತಿರುವ ಸೀತಾನದಿ ಪ್ರಶಸ್ತಿಯನ್ನು ಈ ಬಾರಿ ತೆಂಕುತಿಟ್ಟಿನ ಹಿರಿಯ ಕಲಾವಿದ, “ಅಭಿನವ ಕೋಟಿ’ ಅಭಿದಾನದ ಕೆ.ಎಚ್. ದಾಸಪ್ಪ ರೈ ಅವರಿಗೆ ನೀಡಲಾಗುತ್ತಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಅಕ್ಟೋಬರ್ 7ರಂದು ಬೆಂಗಳೂರಿನ ಬನ್ನೇರುಘಟ್ಟ ವಿಜಯ ಬ್ಯಾಂಕ್ ಕಾಲೋನಿಯಲ್ಲಿ ನೆರವೇರಲಿದೆ.
ತುಳು ಭಾಷಾ ಪ್ರಸಂಗಗಳ ಕಥಾನಾಯಕ ಪಾತ್ರಗಳಿಗೆ ತನ್ನ ಸೌಮ್ಯ ನಡೆಯಿಂದ ಜೀವಕಳೆಯನ್ನು ಭರಿಸಿ ಜನಮನ್ನಣೆ ಪಡೆದ ದಾಸಪ್ಪ ರೈಗಳು ಸದ್ಯ ಯಕ್ಷಗಾನ ತಿರುಗಾಟದಿಂದ ನಿವೃತ್ತರು. ಪುತ್ತೂರು ತಾಲೂಕು ಈಶ್ವರಮಂಗಲದ ಕುತ್ಯಾಳದಲ್ಲಿ 1950ರಲ್ಲಿ ಬೈಂಕಿ ರೈ ಮತ್ತು ಕುಂಜಕ್ಕೆ ದಂಪತಿಯ ಪುತ್ರನಾಗಿ ಜನಿಸಿದ ಇವರಿಗೆ ಈಗ 67ರ ಹರೆಯ. ಪ್ರಾಥಮಿಕ ವಿದ್ಯಾಭ್ಯಾಸವನ್ನು ಪಡೆದು ತನ್ನ 16ನೇ ವಯಸ್ಸಿನಲ್ಲಿ ಯಕ್ಷಗಾನ ಕ್ಷೇತ್ರ ಪ್ರವೇಶಿಸಿದರು. ಕೆ.ಎಸ್. ಬಾಬು ರೈ ಅವರ ಪ್ರೇರಣೆಯ ಮೇರೆಗೆ ಅವರಲ್ಲೇ ನಾಟ್ಯಾಭ್ಯಾಸ ಮಾಡಿ ಸುಮಾರು 18 ವರ್ಷ ಕರ್ನಾಟಕ ಮೇಳ; ಆ ಬಳಿಕ ಕದ್ರಿ, ಕಣಿಪುರ, ಮಂಗಳಾದೇವಿ ಹೀಗೆ ದೀರ್ಘಕಾಲ ತೆಂಕುತಿಟ್ಟಿನ ವಿವಿಧ ಮೇಳಗಳಲ್ಲಿ ಕಲಾಸೇವೆ ಮಾಡಿ 2008ರಲ್ಲಿ ನಿವೃತ್ತರಾದರು. ಮೇಳದ ಮೆನೇಜರ್ ಆಗಿ, ಸ್ವಂತ ಮೇಳದ ಯಜಮಾನಿಕೆ ನಡೆಸಿ, ಕಾರ್ಯಕ್ರಮ ಸಂಘಟಕರಾಗಿಯೂ ಯಕ್ಷಗಾನದ ವಿವಿಧ ಮಜಲುಗಳಲ್ಲಿ ಸಕ್ರಿಯರಾಗಿದ್ದಾರೆ.
ತುಳು ಯಕ್ಷಗಾನ ರಂಗದ ಸಾತ್ವಿಕ ನಾಯಕ ಪಾತ್ರ ಗಳಲ್ಲಿ ಮೆರೆದು ಅಭಿನವ ಕೋಟಿಯೆಂದೇ ಜನಾದರಣೆ ಪಡೆದ ಕಲಾವಿದ ರೈಗಳು. 1965ರ ಒಂದು ದಿನ ಕಲಾವಿದ ಬಾಬು ರೈಗಳು ತನ್ನ ಸಂಬಂಧಿ ಬಾಲಕನನ್ನು ಕರ್ನಾಟಕ ಮೇಳದ ಯಜಮಾನರಿಗೆ ಪರಿಚಯಿಸಿ ಮೇಳಕ್ಕೆ ಸೇರಿಸಿದರು. ಬಾಲಕ ರೈಗಳಿಗೆ ಆಗ ಚೌಕಿಯಲ್ಲಿ ಸಿಕ್ಕಿದ ಜಾಗ ಮೇರು ಹಾಸ್ಯಗಾರ ಮಿಜಾರು ಅಣ್ಣಪ್ಪ ನವರ ಪಕ್ಕದ್ದು. ಇದರಿಂದ ಹಾಗೂ ಮೇಳದಲ್ಲಿದ್ದ ಘಟಾನುಘಟಿಗಳಾದ ನಾರಂಬಾಡಿ ಸುಬ್ಬಯ್ಯ ಶೆಟ್ಟಿ, ಬೋಳಾರ ನಾರಾಯಣ ಶೆಟ್ಟಿ, ಅಳಿಕೆ ರಾಮಯ್ಯ ರೈ, ಮಂಕುಡೆ ಸಂಜೀವ ಶೆಟ್ಟಿ ಮುಂತಾದ ಕಲಾವಿದರ ಒಡನಾಟದಿಂದ ದಾಸಪ್ಪ ರೈಗಳು ತಯಾರಾದರು.
ಕರ್ನಾಟಕ ಮೇಳ ಸೀನುಸೀನರಿಗಳನ್ನು ನಿಲ್ಲಿಸಿ ಡೇರೆ ಮೇಳವಾದಾಗ ವಿಜೃಂಭಿಸಿದ “ಕೋಟಿ ಚೆನ್ನಯ’ ಪ್ರಸಂಗದ ಕೋಟಿಯ ಪಾತ್ರ ಅವರಿಗೆ ಹೊಸ ತಿರುವು ನೀಡಿತು. ಅವರು ಕೋಟಿಯಾಗಿ ಅಭಿನಯಿಸದೆ, ಅನುಭವಿಸಿ ಆ ಪಾತ್ರವನ್ನು ಮಾಡುತ್ತಿ ದ್ದರು. “ಅಭಿನವ ಕೋಟಿ’ ಎಂಬ ಬಿರುದು ಅವರಿಗೆ ಸಾರ್ಥಕವಾಗಿ ಸಂದಿತ್ತು. ಕಂಸ, ರಾವಣ ಮುಂತಾದ ಪಾತ್ರಗಳಲ್ಲಿ ಬೋಳಾರ ನಾರಾಯಣ ಶೆಟ್ಟರ ದಾರಿಯಲ್ಲಿ ಸಾಗಿ ಯಶಸ್ವಿಯಾದವರು ದಾಸಪ್ಪ ರೈಗಳು. ತುಳು ಯಕ್ಷಗಾನ ದಲ್ಲಿ ಇತಿಹಾಸ ಬರೆದ “ಕಾಡ ಮಲ್ಲಿಗೆ’ ಪ್ರಸಂಗದ ವೃದ್ಧ ಮೈಂದ ಗುರಿಕಾರನಾಗಿ ಯುವಕ ರೈಗಳು ಯಶಸ್ವಿ ಯಾದರು. ರೈಗಳಿಗೆ ಹೊಸ ಇಮೇಜ್ ನೀಡಿದ ಪಾತ್ರವದು. ಒಂದು ವರ್ಷದ ಅನಂತರ ಮೇಳದ ಉಸ್ತುವಾರಿಯನ್ನೂ ವಹಿಸಿಕೊಂಡು 1978ರಲ್ಲಿ ಮೇಳದ ಹೋಟೆಲ್‌ನಲ್ಲಿ ಬುಕ್ಕಿಂಗ್ ವ್ಯವಸ್ಥೆ ಯನ್ನು ಜಾರಿಗೆ ತಂದರು. ಅದು ಮೇಳಕ್ಕೊಂದು ಆರ್ಥಿಕ ಶಕ್ತಿ ನೀಡಿತು. ಬಳಿಕ ಆ ಕಾಲದ ಉಳಿದ ಡೇರೆ ಮೇಳಗಳು ಮಳೆಗಾಲದ ಬುಕ್ಕಿಂಗ್ ವ್ಯವಸ್ಥೆ ಪ್ರಾರಂಭಿ ಸಿದವು. “ಕಾಡ ಮಲ್ಲಿಗೆ’ ಪ್ರಸಂಗಕ್ಕೆ ಒಂದೇ ದಿನ 60ಕ್ಕೂ ಅಧಿಕ ಆಟಗಳು ಬುಕ್ಕಿಂಗ್ ಆಗುತ್ತಿದ್ದವು.
ಆ ಬಳಿಕ ಕರ್ನೂರು ಕೊರಗಪ್ಪ ರೈಗಳ ಕದ್ರಿ ಮೇಳದ ಪ್ರಧಾನ ಕಲಾವಿದ ಮತ್ತು ಉಸ್ತುವಾರಿ ಹುದ್ದೆ ರೈಗಳ ಹೆಗಲಿಗೇರಿತು. ಅಲ್ಲಿ “ಗೆಜ್ಜೆದ ಪೂಜೆ’, “ಸತ್ಯದಪ್ಪೆ ಚೆನ್ನಮ್ಮ’ ಪ್ರಸಂಗಗಳು ಇತಿಹಾಸ ನಿರ್ಮಿಸಿದವು. ಬಳಿಕ ತಾನೇ ಒಂದು ಮೇಳವನ್ನು ಕಟ್ಟಲು ಮುಂದಾದ ದಾಸಪ್ಪ ರೈಗಳು ಕುಂಬಳೆ ಮೇಳ ಪ್ರಾರಂಭಿಸಿದರು. ಆದರೆ ವಿವಿಧ ಕಾರಣಗಳಿಂದ ಅವರು ಕಲಾವಿದನಾಗಿ ಗೆದ್ದರೂ ಯಜಮಾನರಾಗಿ ಸೋತರು. ಬಳಿಕ ಮತ್ತೆ ಕಲಾವಿದರಾಗಿ ಕರ್ನಾಟಕ ಮೇಳ, ಕದ್ರಿ ಮೇಳ, ಮಂಗಳಾದೇವಿ ಮೇಳಗಳಲ್ಲಿ ತಿರುಗಾಟ ನಡೆಸಿದರು.
ಕನ್ನಡ ಪೌರಾಣಿಕ ಪ್ರಸಂಗಗಳ ಪಾತ್ರಗಳ ನಿರ್ವಹಣೆಯಲ್ಲಿಯೂ ಗಣನೀಯ ಸಾಧನೆ ಮಾಡಿದ್ದಾರೆ. ರಾವಣ, ಮಹಿಷಾಸುರ, ಕಂಸ, ಭೀಮ ಮುಂತಾದ ಪಾತ್ರಗಳು ಅವರಿಗೆ ಹೆಸರು ತಂದಿದ್ದವು. ತುಳು ಪ್ರಸಂಗಗಳ ಯಶಸ್ಸಿನ ಒಂದು ಭಾಗವೇ ಆಗಿದ್ದ ರೈಗಳ ತಿರುಗಾಟ ತುಳು ಯಕ್ಷಗಾನ ಇತಿಹಾಸದ ಅಧ್ಯಾಯಗಳಲ್ಲೊಂದು ಎಂದರೆ ತಪ್ಪಲ್ಲ.
ಪ್ರೊ| ಎಸ್. ವಿ. ಉದಯ ಕುಮಾರ ಶೆಟ್ಟಿ