ಮೂರು ದಿನಕ್ಕೆ ಕೆಜಿಎಫ್ ಗಳಿಕೆ 60 ಕೋಟಿ ರೂ. ; ಯಶ್ ಅಭಿನಯದ ಚಿತ್ರಕ್ಕೆ ಬಾಲಿವುಡ್‌ನಲ್ಲೂ ಸಖತ್ ರೆಸ್ಪಾನ್ಸ್
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ಚಿ ತ್ರ ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡುತ್ತಿದ್ದು, ಕಿಂಗ್‌ಖಾನ್ ಶಾರುಖ್ ಖಾನ್ ಅಭಿನಯದ ಝೀರೊಗೆ ಭರ್ಜರಿ ಫೈಟ್ ನೀಡಿದೆ.
ಶುಕ್ರವಾರ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ಬಿಡುಗಡೆಯಾಗಿರುವ ಯಶ್ ಅಭಿನಯದ ಕೆಜಿಎಫ್ ಚಿತ್ರ ಗಳಿಕೆಯಲ್ಲಿ ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಅವರ ಝೀರೊವನ್ನೂ ಹಿಂದೆ ಹಾಕಿದೆ. ಈ ಮೂರು ದಿನಗಳಲ್ಲಿ ಕೆಜಿಎಫ್ 60 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಸ್ವತಃ ನಿರ್ಮಾಪಕ ವಿಜಯ ಕಿರಗಂದೂರು ಹೇಳಿದ್ದಾರೆ. ಅದೇ ಶಾರುಖ್ ಖಾನ್ ಅಭಿನಯದ ಝಿರೋ ಚಿತ್ರದ ಗಳಿಕೆ ಮೊದಲ ದಿನದಿಂದ ಇಲ್ಲಿವರೆಗೆ ಇಳಿಮುಖವಾಗಿದೆ. ಅದೂ ಮುಂಬೈನಲ್ಲೇ ಝೀರೊಗೆ ಕೆಜಿಎಫ್ ಭರ್ಜರಿ ಫೈಟ್ ಕೊಡುತ್ತಿದೆ. ಸಿನಿಮಾ ಮಾರುಕಟ್ಟೆ ವಿಶ್ಲೇಷಕ ತರಣ್ ಆದರ್ಶ್ ಪ್ರಕಾರ, ಕೆಜಿಎಫ್ ಚಿತ್ರದ ಗಳಿಕೆ ಮೇಲ್ಮುಖವಾಗಿದ್ದರೆ, ಝೀರೊ ಚಿತ್ರದ ಗಳಿಕೆ ಇಳಿಮುಖದತ್ತ ಸಾಗಿದೆ.
ಚಿತ್ರ ಬಿಡುಗಡೆಯಾದ ಮೊದಲ ದಿನ ‘ಕೆಜಿಎಫ್’ನ ವಿಶ್ವದಾದ್ಯಂತದ ಕಲೆಕ್ಷನ್ 24 ಕೋಟಿ ರೂಪಾಯಿ. ಭಾರತದಲ್ಲೇ ‘ಕೆಜಿಎಫ್’ 18 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದರೆ, ಮೊದಲ ದಿನ ಕನ್ನಡವೊಂದರಿಂದಲೇ 12.5ಕೋಟಿ ರೂ. ಕಲೆಕ್ಷನ್ ಬಂದಿತ್ತು. ಇನ್ನು, ಶನಿವಾರ ಹಾಗೂ ಭಾನುವಾರ ಎರಡು ದಿನದ ಕಲೆಕ್ಷನ್ ಅಂದಾಜು 40 ಕೋಟಿ ರೂ. ಈ ಬಗ್ಗೆ ‘ಉದಯವಾಣಿ’ಯೊಂದಿಗೆ ಮಾತನಾಡಿದ ನಿರ್ಮಾಪಕ ವಿಜಯ್ ಕಿರಗಂದೂರು, ‘ಚಿತ್ರ ಬಿಡುಗಡೆಯಾದ ಮೊದಲ ದಿನ 24 ಕೋಟಿ ರೂ. ಗಳಿಸಿದರೆ, ಎರಡನೇ ಹಾಗೂ ಮೂರನೇ ದಿನ ಅಂದಾಜು 20-21 ಕೋಟಿ ರೂ. ಗಳಿಕೆಯಾಗಿದೆ. ಮೂರು ದಿನಗಳಲ್ಲಿ ಸುಮಾರು 60 ಕೋಟಿ ರೂ. ಗಳಿಕೆಯಾಗಿದೆ ಎನ್ನಬಹುದು. ಹಿಂದಿಯಲ್ಲೂ ದಿನದಿಂದ ದಿನಕ್ಕೆ ಚಿತ್ರದ ಕಲೆಕ್ಷನ್ ಹೆಚ್ಚಾಗುತ್ತಿದೆ. ಬೇರೆ ಭಾಷೆಗಳಲ್ಲೂ ಪ್ರೇಕ್ಷಕರು ಸಿನಿಮಾವನ್ನು ತುಂಬಾ ಇಷ್ಟಪಟ್ಟು ನೋಡುತ್ತಿದ್ದಾರೆ’ ಎಂದು ಹೇಳಿದರು.
‘ಕೆಜಿಎಫ್’ ಚಿತ್ರದ ಮುಂದೆ ಬಂದ ಪರಭಾಷೆಯ ದೊಡ್ಡ ಚಿತ್ರವೆಂದರೆ ಅದು ಶಾರುಖ್ ಖಾನ್ ಅಭಿನಯದ ‘ಝೀರೊ’. ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದ ‘ಝೀರೋ’ ಚಿತ್ರಕ್ಕೆ ಕನ್ನಡದ ‘ಕೆಜಿಎಫ್’ ದೊಡ್ಡ ಮಟ್ಟದಲ್ಲಿ ಸ್ಪರ್ಧೆಯೊಡ್ಡಿದೆ. ಇದೇ ಚಿತ್ರ ಇದುವರೆಗೆ 38 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ತರಣ್ ಆದರ್ಶ್ ಹೇಳುತ್ತಾರೆ. ಇನ್ನು ಹಿಂದಿಯಲ್ಲಿ ‘ಕೆಜಿಎಫ್’ ಚಿತ್ರದ ಕಲೆಕ್ಷನ್ ಹೆಚ್ಚುತ್ತಿದೆ. ಮೂಲಗಳ ಪ್ರಕಾರ, ‘ಕೆಜಿಎಫ್’ನ ಹಿಂದಿ ವರ್ಶನ್ ಮೊದಲ ದಿನ 2.1 ಕೋಟಿ ಕಲೆಕ್ಷನ್ ಆದರೆ, ಎರಡನೇ ದಿನ 3 ಕೋಟಿ. ಭಾನುವಾರದ ಗಳಿಕೆ ಸೇರಿದರೆ 5.10 ಕೋಟಿ ರೂ. ಗಳಾಗಿದೆ. ತಮಿಳು, ತೆಲುಗಿನಲ್ಲೂ ‘ಕೆಜಿಎಫ್’ಗೆ ಮೆಚ್ಚುಗೆ ವ್ಯಕ್ತವಾಗುವ ಮೂಲಕ ಚಿತ್ರಮಂದಿರಗಳನ್ನು ಹೆಚ್ಚಿಸಲಾಗಿದೆ. ತಮಿಳಿನಲ್ಲಿ ಚಿತ್ರಕ್ಕೆ ಪ್ರಶಂಸೆ ವ್ಯಕ್ತವಾಗುವ ಮೂಲಕ ಚಿತ್ರಮಂದಿರಗಳನ್ನು ಹೆಚ್ಚಿಸಲಾಗಿದೆ ಎಂದು ವಿಶಾಲ್ ಫಿಲಂ ಫ್ಯಾಕ್ಟರಿ ಟ್ವಿಟರ್‌ನಲ್ಲಿ ತಿಳಿಸಿದೆ. ‘ಕೆಜಿಎಫ್’ ಚಿತ್ರ 2460 ಪರದೆಗಳಲ್ಲಿ ತೆರೆ ಕಂಡಿತ್ತು. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರದಲ್ಲಿ ಕೋಲಾರ ಚಿನ್ನದ ಗಣಿಯನ್ನು ಮುಖ್ಯ ವಿಷಯವನ್ನಾಗಿಸಲಾಗಿದೆ.