ಬೆಂಗಳೂರು: ನಗರದ ಎಚ್‌ಬಿಆರ್ ಲೇಔಟ್‌ನಲ್ಲಿ ಶುಕ್ರವಾರ ಮುಂಜಾನೆ ದುಷ್ಕರ್ಮಿಯಿಂದ ಲೈಂಗಿಕ ಕಿರುಕುಳಕ್ಕೆ ತುತ್ತಾಗಿದ್ದಾಳೆ ಎನ್ನಲಾದ ಯುವತಿ ಮೇಲೆ ಗಂಭೀರ ಸ್ವರೂಪದ ಹಲ್ಲೆ ನಡೆದಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಆಕೆಗೆ ಆರೋಪಿ ನಾಲಗೆ ಹಾಗೂ ತುಟಿ ಕಚ್ಚಿ ಗಾಯಗೊಳಿಸಿದ್ದಾನೆ ಎಂಬುದನ್ನೂ ಪೊಲೀಸರು ನಿರಾಕರಿಸಿದ್ದಾರೆ.
ಮನೆಯಿಂದ ಕೋರಮಂಗ ದಲ್ಲಿರುವ ತನ್ನ ಕಚೇರಿಗೆ ಯುವತಿ ತೆರಳುತ್ತಿದ್ದಳು. ಆ ವೇಳೆ ಮಾರ್ಗ ಮಧ್ಯೆ ಕಿಡಿಗೇಡಿಯೊಬ್ಬ, ಆಕೆಯನ್ನು ಹಿಂಬಾಲಿಸಿ ಬಂದು ದುಷ್ಕೃತ್ಯ ಎಸಗಿದ್ದಾನೆ. ಜನ ಸಂಚಾರವಿಲ್ಲದ ರಸ್ತೆಯಲ್ಲಿ ಒಂಟಿಯಾಗಿ ಹೋಗುತ್ತಿದ್ದ ಯುವತಿಯಿಂದ ಬ್ಯಾಗ್ ಕಳವಿಗೆ ಆತ ಯತ್ನಿಸಿರಬಹುದು. ಹಿಂದಿನಿಂದ ಬಳಸಿಕೊಂಡು ಬಂದ ಅವನು, ಬ್ಯಾಗ್ ಕಸಿದುಕೊಳ್ಳಲು ಮುಂದಾಗಿದ್ದಾನೆ.
ಅನಿರೀಕ್ಷಿತ ದಾಳಿಯಿಂದ ಆತಂಕಗೊಂಡ ಆಕೆ, ಕಿಡಿಗೇಡಿಯಿಂದ ತಪ್ಪಿಸಿಕೊಳ್ಳಲು ಅವನಿಗೆ ಹೊಡೆದಿಲ್ಲದೆ ಕೈ ಕಚ್ಚಿದ್ದಾರೆ. ಅಲ್ಲದೆ ರಕ್ಷಣೆಗೆ ಜೋರಾಗಿ ಆಕೆ ಕೀರುಚಿಕೊಂಡಿದ್ದಾರೆ. ಭಯಗೊಂಡ ಆರೋಪಿ, ಕೂಗಾಟ ನಿಲ್ಲಿಸಲು ಆಕೆಯ ಬಾಯಿಯನ್ನು ಕೈಯಿಂದ ಬಲವಾಗಿ ಅದುಮಿ ಹಿಡಿದಿದ್ದರಿಂದ ಸ್ವಯಂ ನಾಲಗೆ ಕಚ್ಚಿಕೊಂಡಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಈ ಕೃತ್ಯವು ಕೆಲ ಸೆಕೆಂಡ್‌ಗಳಲ್ಲಿ ನಡೆದಿದೆ. ಯುವತಿ ಮೇಲೆ ದುಷ್ಕರ್ಮಿಯಿಂದ ಗಂಭೀರ ಸ್ವರೂಪದ ದಾಳಿ ನಡೆದಿಲ್ಲ. ತನ್ನ ಘನತೆಗೆ ಧಕ್ಕೆ ತರಲಾಗಿದೆ ಎಂದು ಯುವತಿ ವಿಚಾರಣೆ ಹೇಳಿಕೆ ನೀಡಿದ್ದಾರೆ. ತಪ್ಪಿಸಿಕೊಂಡಿರುವ ಆರೋಪಿಗೆ ಪತ್ತೆಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಅಜಯ್ ಹಿಲೋರಿ “ಉದಯವಾಣಿ’ಗೆ ತಿಳಿಸಿದ್ದಾರೆ.
ಮಾಧ್ಯಮಗಳಲ್ಲಿ ಬಿಂಬಿತವಾಗುತ್ತಿರುವಂತೆ ಎಚ್‌ಬಿಆರ್ ಲೇಔಟ್‌ನಲ್ಲಿ ಶುಕ್ರವಾರ ಯುವತಿ ಮೇಲೆ ಗಂಭೀರ ಸ್ವರೂಪದ ಹಲ್ಲೆ ನಡೆದಿಲ್ಲ. ಈ ಕೃತ್ಯ ನಡೆದ ಬಳಿಕ ಎಂದಿನಂತೆ ಅವರು ತಮ್ಮ ಕಚೇರಿ ಕೆಲಸಕ್ಕೆ ಹಾಜರಾಗಿದ್ದಾರೆ. ಆದರೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಆರೋಪಿ ಪತ್ತೆಗೆ ಕ್ರಮ ತೆಗೆದುಕೊಳ್ಳಲಾಗಿದೆ.
-ಅಜಯ್ ಹಿಲೋರಿ, ಡಿಸಿಪಿ, ಪೂರ್ವ ವಿಭಾಗ
ಘಟನೆ ಬಗ್ಗೆ ನನಗೆ ಮಾಹಿತಿ ಇಲ್ಲ. ಅಧಿಕಾರಿಗಳಿಂದ ಪೂರ್ಣ ವಿವರಗಳನ್ನು ತರಿಸಿಕೊಳ್ಳುತ್ತೇನೆ. ಪ್ರಕರಣದ ಸಮಗ್ರ ತನಿಖೆ ನಡೆಸುವಂತೆ ನಗರ ಪೊಲೀಸ್ ಆಯುಕ್ತರಿಗೆ ಆದೇಶ ನೀಡುತ್ತೇನೆ.
-ಪರಮೇಶ್ವರ್, ಗೃಹ ಸಚಿವ.