ಬೆಂಗಳೂರು: ಬಿಬಿಎಂಪಿ ಸಹಾಯಕ ಅಧಿಕಾರಿ ಸೇರಿ ನಾಲ್ವರು ಸರ್ಕಾರಿ ಅಧಿಕಾರಿಗಳ ಕಚೇರಿ ಹಾಗೂ ನಿವಾಸಗಳು ಹಾಗೂ ರಾಜ್ಯದ 10 ಸ್ಥಳಗಳಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ನಡೆಸಿದದಾಳಿ ವೇಳೆ ಕೆ.ಜಿಗಟ್ಟಲೆ ಚಿನ್ನ, ಲಕ್ಷಾಂತರ ರೂ. ನಗದು ಮತ್ತು ಕೋಟ್ಯಂತರ ರೂ. ಮೌಲ್ಯದ ಜಮೀನುಗಳ ದಾಖಲೆಗಳು ಪತ್ತೆಯಾಗಿವೆ.
ನಾಲ್ವರು ಆರೋಪಿತ ಅಧಿಕಾರಿಗಳ ನಿವಾಸಗಳಲ್ಲಿ ದೊರೆತ ಚಿನ್ನ, ಬೆಳ್ಳಿ ಆಭರಣಗಳು, ಜಮೀನು ದಾಖಲೆಗಳು ಸೇರಿದಂತೆ ಇನ್ನಿತರೆ ದಾಖಲೆಗಳನ್ನು ಜಪ್ತಿ ಪಡಿಸಿಕೊಂಡ ಎಸಿಬಿ ತನಿಖೆ ಮುಂದುವರಿಸಿದೆ. ದಾಳಿ ವೇಳೆ ಸಹಕಾರ ಇಲಾಖೆಯ ಸಹಕಾರ ಸಂಘಗಳ ಅಪರ ನಿಬಂಧಕ ಬಿ.ಸಿ.ಸತೀಶ್ ಅವರ ಬಸವೇಶ್ವರ ನಗರದ ನಿವಾಸದಲ್ಲಿ ಒಂದು ಕೆ.ಜಿ 900 ಗ್ರಾಂ. ಚಿನ್ನಾಭರಣ, ಜತೆಗೆ ಬ್ಯಾಂಕ್ ಆಫ್ ಇಂಡಿಯಾದ ಲಾಕರ್‌ನಲ್ಲಿ 1.3 ಕೆ.ಜಿ ಚಿನ್ನಾಭರಣ ಪತ್ತೆಯಾಗಿದೆ. ಜಪ್ತಿ ಮಾಡಿಕೊಂಡ ಚಿನ್ನಾಭರಣಗಳ ಅಂದಾಜು ಮೌಲ್ಯ 70 ಲಕ್ಷ ರೂ.ಗಿಂತಲೂ ಅಧಿಕವಾಗಿವೆ.
ವಿಜಯಪುರದ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಉಪನಿರ್ದೇಶಕ ಶರದ್ ಗಂಗಪ್ಪ ಇಜ್ರಿ ನಿವಾಸದಲ್ಲಿ 42.66 ಲಕ್ಷ ರೂ. ನಗದು ಪತ್ತೆಯಾಗಿದೆ. ಈ ಕುರಿತು ಶೋಧ ಕಾರ್ಯ ಹಾಗೂ ತನಿಖೆ ಮುಂದುವರಿದಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಯಾರ್ಯಾರ ಮನೆಯಲ್ಲಿ ಎಷ್ಟೆಷ್ಟು?: ಮಂಜುನಾಥ್ ಎಸ್.ಬಿ (ಸಹಾಯಕ ಕಂದಾಯ ಅಧಿಕಾರಿ, ಬಿಬಿಎಂಪಿ)- ಬೆಂಗಳೂರಿನಲ್ಲಿ ಒಂದು ಮನೆ, ನಾಲ್ಕು ಸೈಟ್, ಚನ್ನರಾಯಪಟ್ಟಣದಲ್ಲಿ ಒಂದು ಮನೆ, ವಾಣಿಜ್ಯ ಸಂಕೀರ್ಣ, ಹಾಸನದಲ್ಲಿ 13 ಗುಂಟೆ ಜಮೀನು, 453 ಗ್ರಾಂ. ಚಿನ್ನ, ಒಂದು ಕೆ.ಜಿ 230 ಗ್ರಾಂ. ಬೆಳ್ಳಿ, ಒಂದು ಕಾರು, ಒಂದು ಬೈಕ್, 4.26 ಲಕ್ಷ ನಗದು, 19 ಲಕ್ಷ ರೂ. ಗೃಹಪಯೋಗಿ ವಸ್ತುಗಳು. ಬಿ.ಸಿ ಸತೀಶ್ (ಸಹಕಾರ ಇಲಾಖೆಯ ಸಹಕಾರ ಸಂಘಗಳ ಅಪರ ನಿಬಂಧಕ)- ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಐಶಾರಾಮಿ ಮನೆ, 2 ಸೈಟ್, ಒಂದು ಕೆ.ಜಿ 900 ಗ್ರಾಂ ಚಿನ್ನ, ಒಂದು ಕಾರು, ಒಂದು ಬೈಕ್, ಉಳಿತಾಯ ಖಾತೆಯಲ್ಲಿ 3.84 ಲಕ್ಷ ರೂ. 34 ಲಕ್ಷ ರೂ. ಮೌಲ್ಯದ ಗೃಹಪಯೋಗಿ ವಸ್ತುಗಳು, ಲಾಕರ್‌ನಲ್ಲಿ ಸುಮಾರು 38 ಲಕ್ಷ ರೂ. ಮೌಲ್ಯದ ಚಿನ್ನಾಭರಣ.
ಶರದ್ ಗಂಗಪ್ಪ ಇಜ್ರಿ ( ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ ವಿಜಯಪುರ ಉಪನಿರ್ದೇಶಕ) ವಿಜಯಪುರದಲ್ಲಿ 2 ಮನೆ ಒಂದು ಫ್ಲಾಟ್, 32 ಎಕರೆ 24 ಗುಂಟೆ ಜಮೀನು, 675 ಗ್ರಾಂ. ಚಿನ್ನಾಭರಣ, 12.5 ಕೆ.ಜಿ ಬೆಳ್ಳಿ ಆಭರಣ, 3 ಕಾರು, ಮೂರು ಬೈಕ್. 42 ಲಕ್ಷ ರೂ. ನಗದು, ಬ್ಯಾಂಕ್ ಖಾತೆಯಲ್ಲಿ 3.97 ಲಕ್ಷ ರೂ. 2.6 ಲಕ್ಷ ರೂ. ಠೇವಣಿ, ಒಂದು ಲಾಕರ್, 6.37 ಲಕ್ಷ ಮೌಲ್ಯದ ವಿಮೆ.
ಪ್ರಕಾಶ್‌ಗೌಡ ಕುದರಿಮೋಟಿ (ಮುಂಡರಗಿ ಕೃಷಿ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ)- ಮುಂಡರಗಿಯಲ್ಲಿ ಎರಡು ಮನೆ, ಎರಡು ಸೈಟ್, ಕುಕ್ಕನೂರಿನಲ್ಲಿ ಐದು ಎಕರೆ ಹರಲಾಪುರದಲ್ಲಿ 4.29 ಎಕರೆ ಜಮೀನು, ಹಳ್ಳಿಗುಡ್ಡಿ ಗ್ರಾಮದಲ್ಲಿ 7.31 ಎಕರೆ
ಜಮೀನು, 570 ಗ್ರಾಂ. ಚಿನ್ನ, 2 ಕೆ.ಜಿ 290 ಗ್ರಾಂ. ಬೆಳ್ಳಿ, 1 ಕಾರು, 2 ಬೈಕ್.