ಬೆಂಗಳೂರು: ವಿಧಾನಸಭಾಧ್ಯಕ್ಷ ಸ್ಥಾನಕ್ಕೆ ಕೆ.ಆರ್.ರಮೇಶ್ ಕುಮಾರ್ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಸ್ಪೀಕರ್ ಆಯ್ಕೆ ಪ್ರಕ್ರಿಯೆಯೂ ಶುರುವಾಗಿದ್ದು, ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ ಅವರೇ ಬಿಜೆಪಿಯಿಂದ ನಾಮಪತ್ರ ಸಲ್ಲಿಸಲಿದ್ದು, ಸ್ಪೀಕರ್ ಆಗಿ ಆಯ್ಕೆ ಮಾಡುವುದು ಬಹುತೇಕ ಖಚಿತ ಎನ್ನಲಾಗಿದೆ.
ರಮೇಶ್ ಕುಮಾರ್ ಅವರು ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಪ್ರಕಟಿಸುತ್ತಿದ್ದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹಿರಿಯ ನಾಯಕರೊಂದಿಗೆ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಮಾಜಿ ಸ್ಪೀಕರ್‌ಗಳಾದ ಕೆ.ಜಿ.ಬೋಪಯ್ಯ, ಜಗದೀಶ್ ಶೆಟ್ಟರ್, ಮಾಜಿ ಸಚಿವರಾದ ಎಸ್.ಸುರೇಶ್ ಕುಮಾರ್, ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಹೆಸರು ಪ್ರಸ್ತಾಪವಾಯಿತು.
ಈ ಸಂದರ್ಭದಲ್ಲಿ ಕೆಲವರು ತಮಗೆ ಸ್ಪೀಕರ್ ಸ್ಥಾನಕ್ಕಿಂತ ಸಚಿವ ಸ್ಥಾನ ನೀಡಿದರೆ ಸೂಕ್ತ ಎಂಬ ಅಭಿಪ್ರಾಯ ತಿಳಿಸಿದರು. ಈವರೆಗೆ ಸಚಿವರಾಗದ ಕೆ.ಜಿ.ಬೋಪಯ್ಯ ಅವರು ಈ ಬಾರಿ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಆದರೆ ಕಾನೂನಿನ ಬಗ್ಗೆ ಉತ್ತಮ ಜ್ಞಾನದ ಜತೆಗೆ ಸಂದರ್ಭಕ್ಕೆ ಅನುಗುಣವಾಗಿ ಪರಿಸ್ಥಿತಿಯನ್ನು ನಿಭಾಯಿಸುವವರ ಅಗತ್ಯವಿದೆ. ಈ ಹಿಂದೆಯೂ ಈ ಜವಾಬ್ದಾರಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದ ಅನುಭವವಿರುವ ಬೋಪಯ್ಯ ಅವರೇ ಸ್ಪೀಕರ್ ಸ್ಥಾನಕ್ಕೆ ಸೂಕ್ತ ಎಂದು ಹಿರಿಯ ನಾಯಕರು ಅಭಿಪ್ರಾಯಪಟ್ಟರು.
ಬಳಿಕ ಬೋಪಯ್ಯ ಅವರು ಒಪ್ಪಿದರು ಎಂದು ಹೇಳಲಾಗಿದೆ. ಮಂಗಳವಾರ ಬೆಳಗ್ಗೆ 10.30ರಿಂದ ಮಧ್ಯಾಹ್ನ 12ರೊಳಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿದ್ದು, ಬಿಜೆಪಿಯಿಂದ ಕೆ.ಜಿ.ಬೋಪಯ್ಯ ಅವರೇ ನಾಮಪತ್ರ ಸಲ್ಲಿಸಲಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್, ಜೆಡಿಎಸ್‌ನಿಂದ ಯಾರೊಬ್ಬರೂ ನಾಮಪತ್ರ ಸಲ್ಲಿಸದಿದ್ದರೆ ಬುಧವಾರ ಬೋಪಯ್ಯ ಅವರು ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಇದೆ.