ಮಂಗಳೂರು: ನೆರೆಯ ಜಿಲ್ಲೆಗಳಾದ ಉಡುಪಿ, ಚಿಕ್ಕಮಗಳೂರು ಭಾಗಗಳಲ್ಲಿ ಮಂಗನ ಕಾಯಿಲೆ (ಕೆಎಫ್‌ಡಿ) ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಈವರೆಗೆ ಯಾವುದೇ ಕೆಎಫ್‌ಡಿ ಪ್ರಕರಣ ಕಂಡುಬಂದಿಲ್ಲ ಎಂದು ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಚ್.ಆರ್. ತಿಮ್ಮಯ್ಯ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜ್ವರ ಸಹಿತ ಸಂಶಯಾಸ್ಪದ ಲಕ್ಷಣ ಕಂಡುಬಂದರೆ ಅಂತಹವರ ರಕ್ತದ ಮಾದರಿಯನ್ನು ಸಂಗ್ರಹಿಸಿ ಹೆಚ್ಚಿನ ಪರೀಕ್ಷೆಗೆ ಕಳುಹಿಸುತ್ತೇವೆ. ಸಾಮಾನ್ಯವಾಗಿ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಭಾಗ, ಅರಣ್ಯಕ್ಕೆ ತೆರಳುವ ಮಂದಿಗೆ ಈ ರೋಗದ ಭೀತಿ ಇರುತ್ತದೆ. ಈ ವರ್ಷ ಜಿಲ್ಲೆಯಲ್ಲಿ ಒಂದು ಮಂಗನ ಸಾವು ಪ್ರಕರಣ ದಾಖಲಾಗಿದ್ದು, ಅದು ವಿಷಪ್ರಾಶನದಿಂದ ಆಗಿರುವುದು ಎಂದು ಸ್ಪಷ್ಟಪಡಿಸಿದರು.
ಆಯುಷ್ಮಾನ್ ಭಾರತ್ ಹೊಸ ಕಾರ್ಡ್ ನೋಂದಣಿ ಪ್ರಗತಿಯಲ್ಲಿದೆ. ಸ್ವಯಂ ನೋಂದಣಿಗೆ ಸರಕಾರ ಅವಕಾಶ ನೀಡಿದೆ. ದ.ಕ. ಜಿಲ್ಲೆಗೆ ಒಟ್ಟು ಸುಮಾರು 17 ಲಕ್ಷ ಕಾರ್ಡ್ ಗುರಿ ಇದ್ದು, ಸದ್ಯ ಸುಮಾರು 5 ಲಕ್ಷ ಕಾರ್ಡ್ ಮಾತ್ರ ನೋಂದಣಿಯಾಗಿದೆ. ಸ್ವಯಂ ಅವಕಾಶ ಇರುವ ಕಾರಣ ಸಾರ್ವಜನಿಕರು ಮೊಬೈಲ್ ನಲ್ಲಿಯೇ ನೋಂದಣಿ ಮಾಡಬಹುದು. ಜಿಲ್ಲೆಯಲ್ಲಿರುವ ವಸತಿ ನಿಲಯಗಳ ನೋಂದಣಿಗೆ ಕ್ರಮ ಕೈಗೊಂಡಿದ್ದು ಸದ್ಯ 353 ನೋಂದಣಿಯಾಗಿದೆ. ಮುಂದಿನ ದಿನಗಳಲ್ಲಿ ಪಿ.ಜಿ.ಗಳ ನೋಂದಣಿಗೂ ಕ್ರಮ ಕೈಗೊಳ್ಳುತ್ತೇವೆ ಎಂದರು.
ಕೆಪ್ಪಟೆ ಬಾವು: ಆರೋಗ್ಯ ಇಲಾಖೆಯಿಂದ ಸುತ್ತೋಲೆ ಜಿಲ್ಲೆಯಲ್ಲಿ ಮಕ್ಕಳು ಸೇರಿದಂತೆ ಹಿರಿಯರಲ್ಲಿ ಕೆಪ್ಪಟೆ ಬಾವು (ಕೆಪ್ಪಟ್ರಾಯ) ಕಾಡುತ್ತಿರುವ ಹಿನ್ನೆಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಹಾಗೂ ನಗರ ಆರೋಗ್ಯ ಕೇಂದ್ರದಲ್ಲಿ ಪ್ರಕರಣಗಳು ಬಂದರೆ ಇಲಾಖೆಯ ಗಮನಕ್ಕೆ ತರುವಂತೆ ಸುತ್ತೋಲೆ ಕಳುಹಿಸಲು ನಿರ್ಧರಿಸಿದೆ.
ಖಾಸಗಿ ಆಸ್ಪತ್ರೆಗಳಿಗೆ ಇಂತಹ ಪ್ರಕರಣಗಳು ಬಂದರೂ ಮಾಹಿತಿ ನೀಡುವಂತೆ ಕೇಳಿಕೊಳ್ಳಲಾಗಿದೆ. ಜಿಲ್ಲಾ ಸರ್ವೆಕ್ಷಣಾಧಿಕಾರಿಗಳು ಈ ನಿಟ್ಟಿನಲ್ಲಿ ಕಾರ್ಯಪ್ರವತ್ತರಾಗಿ ಕೆಲಸ ಮಾಡುತ್ತಿದ್ದಾರೆ. ಈ ರೀತಿಯ ಪ್ರಕರಣ ಕಂಡು ಬಂದರೆ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಗಮನಕ್ಕೆ ತರುವುದು, ಜತೆಯಲ್ಲಿ ಶಾಲಾ ಮಕ್ಕಳಲ್ಲಿ ಕಾಯಿಲೆ ಕುರಿತು ಜಾಗೃತಿ ಮೂಡಿಸುವುದು, ಪ್ರಕರಣಗಳು ಕಾಣಿಸಿಕೊಂಡರೆ ಅಂತಹ ಮಕ್ಕಳಿಗೆ ರೋಗ ವಾಸಿಯಾಗುವ ತನಕ ಶಾಲೆಗೆ ಹಾಜರಾಗದಂತೆ ಸೂಚಿಸಲು ಕ್ರಮ ಜರಗಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.