Advertisement

ಕೆಎಫ್‌ಡಿ: ನಿರ್ಲಕ್ಷ್ಯ ಮಾಡಿದ್ರೆ ಕಠಿಣ ಕ್ರಮ: ಜ್ಞಾನೇಂದ್ರ

10:26 AM Feb 02, 2019 | |

ತೀರ್ಥಹಳ್ಳಿ: ಆರೋಗ್ಯ ಇಲಾಖೆಯ ಅಧಿಕಾರಿಗಳು ಬೇಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ದೂರು ಕೇಳಿ ಬಂದಿದೆ. ಮಂಗನ ಕಾಯಿಲೆ ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರಿಂದ ಮಾಹಿತಿ ಪಡೆದರೂ ಮೃತಪಟ್ಟ ಮಂಗಗಳು ಇರುವ ಪ್ರದೇಶಗಳಿಗೆ ಅಧಿಕಾರಿಗಳು ಭೇಟಿ ನೀಡುತ್ತಿಲ್ಲ. ಮುಂದಿನ ದಿನಗಳಲ್ಲಿ ಇಂತಹ ವಿಚಾರದಲ್ಲಿ ದೂರು ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

Advertisement

ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ತ್ತೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಆಗುಂಬೆ ಭಾಗದಲ್ಲಿ ಮಂಗಗಳ ಸಾವು ಹೆಚ್ಚುತ್ತಿದ್ದು, ಆರೋಗ್ಯ ಇಲಾಖೆ ಮತ್ತು ಅರಣ್ಯ ಇಲಾಖೆಯವರು ಹೆಚ್ಚಿನ ಕಾಳಜಿ ವಹಿಸಿ ಕಾರ್ಯ ನಿರ್ವಹಿಸಬೇಕು. ಕಾಯಿಲೆ ತಡೆಗಟ್ಟಲು ಬೇಕಾದ ಔಷಧಗಳ ಬಗ್ಗೆ ಮಾಹಿತಿ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕು ವೈದ್ಯಾಧಿಕಾರಿ ಡಾ| ಕಿರಣ್‌ ಮಾತನಾಡಿ, ಜ್ವರ ನಿಯಂತ್ರಣ ಸಂಬಂಧ ಡಿಎಂಪಿ ತೈಲ ಹಾಗೂ ಚುಚ್ಚುಮದ್ದು ನೀಡಲಾಗುತ್ತಿದೆ. ಮಂಗಗಳು ಮೃತಪಟ್ಟ ಪ್ರದೇಶಗಳಿಗೆ ಸಿಬ್ಬಂದಿಯನ್ನು ಕಳುಹಿಸಲಾಗುತ್ತಿದ್ದು, ಶಂಕಿತ ಪ್ರಕರಣದ ಗ್ರಾಮಗಳಲ್ಲಿ ಜ್ವರ ನಿರೀಕ್ಷಿತವಾಗಿರುವ ಹಿನ್ನಲೆಯಲ್ಲಿ ಸತ್ತ ಮಂಗಗಳ ಮೃತದೇಹದ ಪರೀಕ್ಷೆ ಅಗತ್ಯವಿಲ್ಲ ಎಂದು ಸಭೆಗೆ ಮಾಹಿತಿ ನೀಡಿದರು.

ಅಕ್ರಮ ಮರಳು ಸಾಗಾಟದ ವಿಚಾರದ ಬಗ್ಗೆ ಈಗಾಗಲೇ ಗುತ್ತಿಗೆದಾರರೊಂದಿಗೆ ಸಭೆ ನಡೆದಿದೆ. ಸ್ಥಳೀಯರಿಗೆ ಮರಳು ತೆಗೆದುಕೊಳ್ಳಲು ಅವಕಾಶ ನೀಡಬೇಕು. ಗ್ರಾಪಂ ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆ ನಡೆದರೆ ಅಲ್ಲಿನ ಪಿಡಿಒಗಳು ಗಮನ ಹರಿಸುವ ಅಗತ್ಯವಿದೆ. ತಾಲೂಕಿನ ಹಲವು ಕ್ವಾರಿಗಳಲ್ಲಿ ಇನ್ನೂ ಮರಳುಗಾರಿಕೆ ಆರಂಭಗೊಂಡಿಲ್ಲ. ಈ ಬಗ್ಗೆಯೂ ಇಲಾಖೆಯೊಂದಿಗೆ ಹಾಗೂ ಗುತ್ತಿಗೆದಾರರೊಂದಿಗೆ ಚರ್ಚಿಸಿದ್ದೇನೆ ಎಂದು ಶಾಸಕ ಆರಗ ಜ್ಞಾನೇಂದ್ರ ಸದಸ್ಯರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಅಕ್ರಮ ಸಕ್ರಮ ಯೋಜನೆಯ 94ಸಿ ಅಡಿಯ ನಿವೇಶನ ಹಕ್ಕು ಪತ್ರ ನೀಡುವುದಕ್ಕೆ ಅರಣ್ಯ ಇಲಾಖೆಯವರು ಸ್ಪಂದಿಸುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಬಡವರಿಗೆ ಹಕ್ಕುಪತ್ರ ನೀಡುವುದು ಪುಣ್ಯದ ಕೆಲಸವಾಗಿದ್ದು ಕಾನೂನಿನ ಹೆಸರಿನಲ್ಲಿ ಅಡ್ಡಿಪಡಿಸಬೇಡಿ. ಕಂದಾಯ ಮತ್ತು ಅರಣ್ಯ ಇಲಾಖೆಯವರು ಮಾನವೀಯ ನೆಲೆಯಲ್ಲಿ ಕೆಲಸ ಮಾಡಬೇಕು ಎಂದು ಸೂಚಿಸಿದರು.

Advertisement

ತಾಪಂ ಸದಸ್ಯ ಚಂದುವಳ್ಳಿ ಸೋಮಶೇಖರ್‌ ಮಾತನಾಡಿ, ವನ್ಯಜೀವಿ ಅಭಯಾರಣ್ಯ ಪ್ರದೇಶಗಳಲ್ಲಿ ಅರಣ್ಯ ಇಲಾಖೆ ಕಟ್ಟಡ ಇತರೆ ಕಾಮಗಾರಿಗಳನ್ನು ಅನುಮತಿ ಇಲ್ಲದೆ ನಿರ್ವಹಿಸುತ್ತಿದೆ. ಆದರೆ ಸಾರ್ವಜನಿಕರಿಗೆ ಬೇಕಾದ ಮೂಲ ಸೌಕರ್ಯಗಳ ಕಾಮಗಾರಿಗಳಿಗೆ ಮಾತ್ರ ಇಲಾಖೆಯವರು ಕಾನೂನಿನ ಹೆಸರಿನಲ್ಲಿ ಅಡ್ಡಿಪಡಿಸುತ್ತಿದ್ದಾರೆ. ಕಾನೂನಿನ ವಿಚಾರದಲ್ಲಿ ತಾರತಮ್ಯವೇಕೆ ಎಂದು ಪ್ರಶ್ನಿಸಿದರು. ದಲಿತ ವರ್ಗದ ಅನುದಾನ ನಿಯಾಮಾನುಸಾರದಂತೆ ಬಳಕೆಯಾಗಿಲ್ಲ. ತಾಲೂಕಿನ ಹಲವೆಡೆ ರಸ್ತೆ ಕಾಮಗಾರಿಗಳು ಕಳಪೆಯಾಗಿವೆ ಎಂದು ತಾಪಂ ಅಧ್ಯಕ್ಷೆ ನವಮಣಿ ತಿಳಿಸಿದರು.

ಬೆಜ್ಜವಳ್ಳಿ ಗ್ರಾಪಂ ವ್ಯಾಪ್ತಿಯ ಮೇಲಿನಕೊಪ್ಪ ಗ್ರಾಮದ ಕೆರೆ ತುಂಬಿಸುವ ಯೋಜನೆಯ ದಲಿತ ವರ್ಗದ ಅನುದಾನದ ಕಾಮಗಾರಿ ಕುಟುಂತ್ತಾ ಸಾಗಿದೆ. ಒಂದು ಕೋಟಿ ಯೋಜನೆಯ ಕಾಮಗಾರಿಗೆ ಎರಡು ವರ್ಷ ಬೇಕಾಗಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಜಿಪಂ ಸದಸ್ಯ ಕೆ. ಶ್ರೀನಿವಾಸ್‌ ಆಗ್ರಹಿಸಿದರು. ಸಭೆಯಲ್ಲಿ ತಹಶೀಲ್ದಾರ್‌ ಆನಂದಪ್ಪ ನಾಯ್ಕ, ತಾಪಂ ಸಿಇಒ ಧನರಾಜ್‌, ತಾಪಂ ಅಧ್ಯಕ್ಷೆ ನವಣಿ, ತಾಪಂ ಸಾಮಾಜಿಕ ಸ್ಥಾಯಿ ನ್ಯಾಯ ಸಮಿತಿ ಅಧ್ಯಕ್ಷ ಸಿ. ಸೋಮಶೇಖರ್‌, ಜಿಪಂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಶ್ರೀನಿವಾಸ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next