Advertisement

ಪುರಿ ಜಗನ್ನಾಥ ದೇವಾಲಯದ ಪ್ರಾಚೀನ ರತ್ನ ಭಂಡಾರದ ಬೀಗದ ಕೈ ನಾಪತ್ತೆ

03:42 PM Jun 04, 2018 | udayavani editorial |

ಭುವನೇಶ್ವರ/ಪುರಿ : ಹನ್ನೆರಡನೇ ಶತಮಾನದ ಇತಿಹಾಸ ಪ್ರಸಿದ್ಧ ಪುರಿ ಜಗನ್ನಾಥ ದೇವಾಲಯದ ರತ್ನ ಭಂಡಾರದ ಬೀಗದ ಕೈ ನಾಪತ್ತೆಯಾಗಿರುವುದಾಗಿ ವರದಿಯಾಗಿದೆ. 

Advertisement

ಪುರಿಯ ಶ್ರೀ ಶಂಕರಾಚಾರ್ಯ, ಸ್ವಾಮಿ ನಿಶ್ಚಲಾನಂದ ಸರಸ್ವತಿ ಮತ್ತು ಭಾರತೀಯ ಜನತಾ ಪಕ್ಷದ ಪ್ರಬಲ ಪ್ರತಿಭಟನೆಯನ್ನು ಲೆಕ್ಕಿಸಿ ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ಟನಾಯಕ್‌ ಅವರು ಇಂದು ಸೋಮವಾರ ಈ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ. 

ಕಳೆದ ಎಪ್ರಿಲ್‌ 4ರಂದು ಶ್ರೀ ಜಗನ್ನಾಥ ದೇವಾಲಯದ ಆಡಳಿತ ಮಂಡಳಿಯ ಸಭೆ ನಡೆದಿದ್ದಾಗಲೇ ರತ್ನ ಭಂಡಾರದ ಬೀಗದ ಕೈ ನಾಪತ್ತೆಯಾಗಿರುವ ವಿಷಯ ಬೆಳಕಿಗೆ ಬಂದಿತ್ತು. 

ಸುಮಾರು 34 ವರ್ಷಗಳ ಬಳಿಕ ಕಳೆದ ಎಪ್ರಿಲ್‌ 4ರಂದು ಒಡಿಶಾ ಹೈಕೋರ್ಟ್‌ ಆದೇಶದ ಪ್ರಕಾರ ದೇವಾಲಯದ ರತ್ನ ಭಂಡಾರದ ಸ್ಥಿತಿಗತಿಯನ್ನು ಪರಿಶೀಲಿಸಲು 16 ಸದಸ್ಯರ ತಂಡವು ಬಿಗಿ ಭದ್ರತೆಯೊಂದಿಗೆ ಭಂಡಾರವನ್ನು ಪ್ರವೇಶಿಸುವುದಿತ್ತು. 2016ರಲ್ಲಿ  ಭಾರತದ ಪ್ರಾಕ್ತನ ಸರ್ವೇಕ್ಷಣ ಇಲಾಖೆ ಕೈಗೊಂಡಿದ್ದ ದುರಸ್ತಿ ಕಾರ್ಯದ ಉಸ್ತುವಾರಿ ನಡೆಸಿದ್ದ  ಕೋರ್ಟ್‌, ರತ್ನ ಭಂಡಾರ ಕಟ್ಟಡದ ಭದ್ರತೆ ಮತ್ತು ಸುರಕ್ಷೆಯನ್ನು ಪರಿಶೀಲಿಸುವಂತೆ ಎಎಸ್‌ಐಗೆ ಆದೇಶಿಸಿತ್ತು. 

ಎ.4ರಂದು ರತ್ನ ಭಂಡಾರ ಪ್ರವೇಶಿಸಲಿದ್ದ ತಂಡಕ್ಕೆ ಭಂಡಾರದ ಬೀಗದ ಕೈ ಸಿಗದೇ ಇದ್ದ ಕಾರಣ ಅದಕ್ಕೆ ಒಳಪ್ರವೇಶ ಸಾಧ್ಯವಾಗಿರಲಿಲ್ಲ. ಆಗ ಅದು ಶೋಧಕ ದೀಪಗಳ ನೆರವಿನಲ್ಲಿ ಹೊರಗಿನಿಂದಲೇ ಕಬ್ಬಿಣದ ಸರಳುಗಳ ಮೂಲಕ ಒಳಗಿನ ಭಾಗವನ್ನು ವೀಕ್ಷಿಸಿತ್ತು. 

Advertisement

12ನೇ ಶತಮಾನದ ಈ ಪ್ರಾಚೀನ ದೇವಾಲಯದ ರತ್ನ ಭಂಡಾರ ಒಟ್ಟು 7 ಕೋಣೆಗಳನ್ನು ಹೊಂದಿದೆ. ಮೊದಲ ಎರಡು ಕೋಣೆಗಳನ್ನು ಕಾಲಕಾಲಕ್ಕೆ ಉಪಯೋಗಿಸಲಾಗಿದೆ. ಉಳಿದ ಕೋಣೆಗಳು ಒಳಗಿನ ಸಾಲಿನಲ್ಲಿ ಇರುವವುಗಳಾಗಿವೆ. 

ಜಗನ್ನಾಥ ದೇವಾಲಯದ ಆಡಳಿತ ಸಮಿತಿಯ ಬಳಿಯಾಗಲೀ ಪುರಿ ಜಿಲ್ಲಾ ಭಂಡಾರದಲ್ಲಾಗಲೀ ರತ್ನ ಭಂಡಾರದ ಬೀಗದ ಕೈಗಳು ಇಲ್ಲ ಎಂದು ರಾಮಚಂದ್ರ ದಾಸ ಮಹಾಪಾತ್ರ ತಿಳಿಸಿದ್ದಾರೆ. 

ಈ ಬಗ್ಗೆ ಪುರಿಯ ಶ್ರೀ ಶಂಕರಾಚಾರ್ಯರು ಮತ್ತು ಬಿಜೆಪಿ ಪತ್ರಮುಖೇನ ಒಡಿಶಾ ಮುಖ್ಯಮಂತ್ರಿಯಿಂದ ಸ್ಪಷ್ಟನೆ ಕೇಳಿದ್ದಾರೆ.

ಬೀಗದ ಕೈಗಳು ಎಲ್ಲಿ, ಹೇಗೆ, ಯಾವಾಗ ನಾಪತ್ತೆಯಾದವು ಎಂಬ ಬಗ್ಗೆ ಮುಖ್ಯಮಂತ್ರಿಗಳು ಸ್ಪಷ್ಟನೆ ಕೊಡಲೇಬೇಕು ಎಂದು ರಾಜ್ಯ ಬಿಜೆಪಿ ವಕ್ತಾರ ಪೀತಾಂಬರ ಆಚಾರ್ಯ ಸುದ್ದಿಗಾರರಿಗೆ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next