Advertisement

ಕೆಸುವು ಅಂದ್ರೆ ಹಸಿವು!

02:35 PM Aug 16, 2017 | |

ಮಳೆಗಾಲ ಬಂತೆಂದರೆ ಸಾಕು, ಎಲ್ಲಿ ನೀರು ಅಧಿಕವಾಗಿರುತ್ತದೋ ಅಲ್ಲೆಲ್ಲಾ ಕೆಸುವಿನ ಗಿಡಗಳು ಅಣಬೆಯಂತೆ ತಲೆಯೆತ್ತಿ ನಿಲ್ಲುತ್ತವೆ. ಇವುಗಳಿಂದ ಕೆಲವು ಅಪರೂಪದ ಅಡುಗೆಗಳನ್ನು ತಯಾರಿಸಬಹುದು. ಎಲೆಗಳಿಂದಷ್ಟೇ ಅಲ್ಲದೇ, ಅದರ ದಂಟುಗಳೂ ಉಪಯೋಗಕ್ಕೆ ಬರುತ್ತವೆ…

Advertisement

ಕೆಸುವಿನ ಕಾಲಿನ ಬೋಳುಹುಳಿ
ಬೇಕಾಗುವ ಸಾಮಗ್ರಿ: 20ರಿಂದ 25 ಕೆಸುವಿನ ದಂಟು, ಹುಣಸೆಹಣ್ಣು – 2 ಲಿಂಬೆಗಾತ್ರ, ಬೆಲ್ಲ- ಸ್ವಲ್ಪ, ಉಪ್ಪು – ರುಚಿಗೆ, ಇಂಗು- ಸಣ್ಣ ಉಂಡೆ, ತೊಗರಿಬೇಳೆ- 1 ಹಿಡಿ, ಹಸಿಮೆಣಸಿನಕಾಯಿ -5, ಎಣ್ಣೆ- ಒಗ್ಗರಣೆಗೆ, ಕೆಂಪು ಮೆಣಸಿನಕಾಯಿ – 1, ಸಾಸಿವೆ – 1 ಚಮಚ, ಕರಿಬೇವು ಮತ್ತು ಕೊತ್ತಂಬರಿ ಸೊಪ್ಪು ಸ್ವಲ್ಪ, ಅರಿಶಿನ – 1 ಚಿಟಿಕೆ.

ಮಾಡುವ ವಿಧಾನ : ಕೆಸುವಿನ ದಂಟಿನ ಮೇಲಿನ ಸಿಪ್ಪೆ ತೆಗೆದು, ತೊಳೆದು, ಸಣ್ಣಗೆ ಕತ್ತರಿಸಿಟ್ಟುಕೊಳ್ಳಿ. ತೊಗರಿಬೇಳೆಯನ್ನೂ ಚೆನ್ನಾಗಿ ಬೇಯಿಸಿಡಿ. ಕೆಸುವಿನ ದಂಟನ್ನು ಕುಕ್ಕರ್‌ನಲ್ಲಿ ಚೆನ್ನಾಗಿ ಬೇಯಿಸಿ. ಅದಕ್ಕೆ ಚಿಟಿಕೆ ಅರಿಶಿನ ಪುಡಿ, ಹುಣಸೆರಸ, ಬೆಲ್ಲ, ಉಪ್ಪು ಹಾಕಿ ಚೆನ್ನಾಗಿ ಕುದಿಸಿ. ಬೇಯುವಾಗಲೇ ಹಸಿರು ಮೆಣಸಿನಕಾಯಿಯನ್ನು ಉದ್ದಕ್ಕೆ ಕತ್ತರಿಸಿ ಅದಕ್ಕೆ ಹಾಕಿ. ಈಗ ಬೆಂದ ಬೇಳೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಕೊತ್ತಂಬರಿ ಸೊಪ್ಪು, ಇಂಗನ್ನು ನೆನೆಸಿದ ನೀರನ್ನು ಸೇರಿಸಿ. ಎಣ್ಣೆ, ಮೆಣಸಿನ ಕಾಯಿ, ಸಾಸಿವೆ, ಕರಿಬೇವಿನ ಒಗ್ಗರಣೆಯೊಂದಿಗೆ ಹುಳಿಯನ್ನು ಕೆಳಗಿಳಿಸಿ. ಈ ಹುಳಿಯು ತುಂಬಾ ನೀರಾಗಿರದೆ ಗಟ್ಟಿಯಾಗಿ ಗೊಜ್ಜಿನ ರೀತಿ ಇದ್ದರೆ ರುಚಿಯಾಗಿರುತ್ತದೆ.    

ಕೆಸುವಿನ ದಂಟಿನ ರಾಯತ
ಬೇಕಾಗುವ ಸಾಮಗ್ರಿ: ಕೆಸುವಿನ ದಂಟು -10ರಿಂದ 15, ತೆಂಗಿನ ತುರಿ – ಒಂದು ಬಟ್ಟಲು, ಕೆಂಪು ಮೆಣಸಿನಕಾಯಿ – 3, ಸಾಸಿವೆ-2 ಚಮಚ, ಉಪ್ಪು – ರುಚಿಗೆ, ಮೊಸರು – 1 ಬಟ್ಟಲು, ಹುಣಸೆಹಣ್ಣು – ಸಣ್ಣ ಲಿಂಬೆಗಾತ್ರ, ಒಗ್ಗರಣೆಗೆ – ಸಾಸಿವೆ, ಮೆಣಸಿನಕಾಯಿ, ತುಪ್ಪ, ಕರಿಬೇವು.

 ಮಾಡುವ ವಿಧಾನ : ನಾರು ತೆಗೆದ ಕೆಸುವಿನ ದಂಟನ್ನು ಸಣ್ಣಗೆ ಕತ್ತರಿಸಿ ಚೆನ್ನಾಗಿ ಬೇಯಿಸಿ. ಒಂದು ಮಿಕ್ಸಿ ಜಾರ್‌ಗೆ ತೆಂಗಿನ ತುರಿ, ಮೆಣಸಿನಕಾಯಿ, ಸಾಸಿವೆ 1 ಚಮಚ, ಉಪ್ಪು, ಹುಣಸೆಹಣ್ಣು ಹಾಕಿ ಮೊಸರಿನೊಂದಿಗೆ ರುಬ್ಬಿಕೊಳ್ಳಿ. ಬೆಂದ ಮಿಶ್ರಣಕ್ಕೆ ರುಬ್ಬಿದ್ದ ಮಿಶ್ರಣ ಸೇರಿಸಿ ಒಂದು ಕುದಿ ಬರಿಸಿ ಕೆಳಗಿಡಿ. ಒಂದು ಚಮಚ ತುಪ್ಪಕ್ಕೆ ಸಾಸಿವೆ, ಕರಿಬೇವಿನೊಂದಿಗೆ ಒಗ್ಗರಣೆ ಕೊಡಿ.

Advertisement

ಕೆಸುವಿನ ಎಲೆಯ ಚಟ್ನಿ
ಬೇಕಾಗುವ ಸಾಮಗ್ರಿ: ಕೆಸುವಿನ ಎಲೆ (ದೊಡ್ಡದಾಗಿದ್ದರೆ 2 ಎಲೆ), ತೆಂಗಿನತುರಿ – 1 ಬಟ್ಟಲು, ಹುಣಸೆಹಣ್ಣು – ಸಣ್ಣ ಲಿಂಬೆ ಗಾತ್ರ, ಇಂಗು- ಸ್ವಲ್ಪ, ಕೆಂಪು ಮೆಣಸಿನಕಾಯಿ -3, ಬೆಳ್ಳುಳ್ಳಿ- 5 ಎಸಳು, ಉದ್ದಿನಬೇಳೆ- 2 ಟೀ ಚಮಚ, ಧನಿಯ – 1/2 ಚಮಚ, ಕರಿಬೇವು, ಸ್ವಲ್ಪ ಎಣ್ಣೆ, ಚಿಟಿಕೆ ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಮೊದಲಿಗೆ ಹುಳುಕಿರದ ಎಲೆಯನ್ನು ಚೆನ್ನಾಗಿ ತೊಳೆದು ಅದನ್ನು ಕತ್ತರಿಸಿ ಒಂದು ಬಾಣಲೆಗೆ ಹಾಕಿ. ಅದಕ್ಕೆ ಸ್ವಲ್ಪ ನೀರು ಹಾಕಿ ಅರಿಶಿನ ಪುಡಿ, ಹುಣಸೆಹಣ್ಣು, ಉಪ್ಪನ್ನು ಹಾಕಿ ಚೆನ್ನಾಗಿ ಬೇಯಿಸಿ. ಬೇರೊಂದು ಬಾಣಲೆಗೆ ಎಣ್ಣೆ ಹಾಕಿ ಅದಕ್ಕೆ ಕೆಂಪು ಮೆಣಸಿನಕಾಯಿ, ಧನಿಯಾ, ಉದ್ದಿನಬೇಳೆ, ಬೆಳ್ಳುಳ್ಳಿ, ಕರಿಬೇವನ್ನು ಹಾಕಿ ಕೆಂಪಗೆ ಹುರಿಯಿರಿ. ಈಗ ಬೇಯಿಸಿದ ಕೆಸುವಿನ ಎಲೆಯ ಮಿಶ್ರಣವನ್ನು ತೆಂಗಿನತುರಿಯೊಂದಿಗೆ ಮಿಕ್ಸಿ ಜಾರಿಗೆ ಹಾಕಿ. ಅದಕ್ಕೆ ಹುರಿದ ಮಿಶ್ರಣ, ಇಂಗು ಹಾಕಿ ರುಬ್ಬಿ ತೆಗೆದಿಡಿ. ಈ ಚಟ್ನಿಯು ಬಿಸಿಬಿಸಿ ಅನ್ನದೊಂದಿಗೆ ತಿನ್ನಲು ಭಾರಿ ರುಚಿಕರವಾಗಿರುತ್ತದೆ. 

ಪುಷ್ಪಾ ಎನ್‌. ಕೆ. ರಾವ್‌

Advertisement

Udayavani is now on Telegram. Click here to join our channel and stay updated with the latest news.

Next