ಬಾಲಪ್ಪ ತಳವಾರ ಎಂಬಾತ ಗ್ರಾಮದೇವತೆ ಗುಡಿಗೆ ಹತ್ತಿರ ಇರುವ ಸರ್ಕಾರಿ ಜಾಗೆ ಅತಿಕ್ರಮಿಸಿ ಮನೆ ಕಟ್ಟಿಸಿಕೊಳ್ಳುತ್ತಿದ್ದಾನೆ. ಇದಕ್ಕಾಗಿ ಗ್ರಾಪಂನವರು ಫಾರ್ಮ ನಂಬರ್ 9ರಲ್ಲಿ ತಿದ್ದುಪಡಿ ಮಾಡಿ ಕಟ್ಟಡಕ್ಕೆ ಅನುಮತಿ ಕೊಟ್ಟಿದ್ದಾರೆ. ಬಾಲಪ್ಪನಿಗೆ ಇರುವ ನಿಜವಾದ ಜಾಗದ ಅಳತೆ ಉತ್ತರ ದಕ್ಷಿಣಕ್ಕೆ 50 ಮತ್ತು ಪೂರ್ವ ಪಶ್ಚಿಮಕ್ಕೆ 17 ಅಡಿ ಇದೆ. ಆದರೆ ಉತಾರೆಯಲ್ಲಿ ಇದನ್ನು ಉತ್ತರ ದಕ್ಷಿಣಕ್ಕೆ 50 ಮತ್ತು ಪೂರ್ವ ಪಶ್ಚಿಮಕ್ಕೆ 17 ಅಡಿ ಎಂದು ತಿದ್ದುಪಾಡಿ ಮಾಡಲಾಗಿದೆ. ಈ ಮೊದಲು ಕಟ್ಟಡ ಕಟ್ಟಲು ಅನುಮತಿ ಕೊಡಬೇಡಿ ಎಂದು ತಕರಾರು ಸಲ್ಲಿಸಿದ್ದರೂ ಗ್ರಾಪಂನವರು ಪರಿಗಣಿಸಿಲ್ಲ ಎಂದು ಪ್ರತಿಭಟನಾನಿರತ ಗ್ರಾಮಸ್ಥರು ಹೇಳಿದ್ದಾರೆ. ಸರ್ಕಾರಿ ಜಾಗ ಅತಿಕ್ರಮಿಸಿ ಕಟ್ಟಡ ಕಟ್ಟಿಕೊಂಡಲ್ಲಿ ಸಾರ್ವಜನಿಕರ ಸಂಚಾರಕ್ಕೆ ಮತ್ತು ಮೂರು ವರ್ಷಕ್ಕೊಮ್ಮೆ ನಡೆಯುವ ಗ್ರಾಮದೇವತೆ ಜಾತ್ರೆಗೆ ಅನಾನುಕೂಲ ಆಗುತ್ತದೆ. ಅಲ್ಲದೆ ಹೊಸ ಅಳತೆ ಪ್ರಕಾರ ಮನೆ ಕಟ್ಟಿಕೊಂಡರೆ ಊರ ಅಗಸಿ ಬಾಗಿಲಿಗೆ ಅವರ ಕಟ್ಟಡದ ಗೋಡೆ ಬಂದು ಸೇರುತ್ತದೆ. ಇದರಿಂದ ಸಾರ್ವಜನಿಕರ ಸಂಚಾರ, ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಗುತ್ತದೆ. ಇದನ್ನು ತಪ್ಪಿಸಲು ಕಟ್ಟಡ ಅನುಮತಿ ಪರವಾನಗಿ ರದ್ದುಪಡಿಸಬೇಕು. ಮತ್ತು ಹೆಚ್ಚುವರಿ ಅಳತೆಯ ಸರ್ಕಾರಿ ಜಾಗವನ್ನು ಸಾರ್ವಜನಿಕ ಬಳಕೆಗೆ ಅನುವು ಮಾಡಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಜಿಪಂ ಅಧ್ಯಕ್ಷೆ ಭೇಟಿ: ಜಿಪಂ ಅಧ್ಯಕ್ಷೆ ನೀಲಮ್ಮ ಮೇಟಿ ಆಲೂರ ಗ್ರಾಪಂಗೆ ಬೀಗ ಹಾಕಿದ ಮಾಹಿತಿ ಪಡೆದು ತಮ್ಮ ಪತಿ ಗೋವಾ ಕನ್ನಡಿಗರ ಮಹಾಸಂಘದ ಅಧ್ಯಕ್ಷ ಸಿದ್ದಣ್ಣ ಮೇಟಿ ಜೊತೆ ಗ್ರಾಪಂ ಕಚೇರಿಗೆ ಆಗಮಿಸಿ ವಿಚಾರಣೆ ನಡೆಸಿದರು. ಪಿಡಿಒ, ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸುವವರೆಗೆ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು. ಪಿಡಿಒ ಅಮಾನತಿಗೆ ಸೂಚನೆ: ಜಿಪಂ ಅಧ್ಯಕ್ಷೆ ನೀಲಮ್ಮ ಗ್ರಾಪಂಗೆ ಭೇಟಿ ನೀಡಿದ ವೇಳೆ ಪಿಡಿಒ ಆನಂದ ಹಿರೇಮಠ ರಜೆ ಮೇಲಿದ್ದಾರೆ ಎನ್ನುವ ಮಾಹಿತಿ ಪಡೆದು ತಾಪಂ ಇಒ ಜಿ.ಎಸ್.ಪಾಟೀಲ್ ಅವರಿಗೆ ಫೋನ್ ಮೂಲಕ ಮಾತನಾಡಿ, ಪಿಡಿಒ ರಜೆ ಬಗ್ಗೆ ವಿಚಾರಿಸಿದರು. ಪಿಡಿಒ 15 ದಿನಗಳ ಹಿಂದೆ ತಾಪಂ ಕಚೇರಿಗೆ ಬಂದು ರಜೆ ಚೀಟಿ ನೀಡಿದ್ದಾರೆ. ಆದರೆ ನಾನು ರಜೆ ಮಂಜೂರು ಮಾಡಿಲ್ಲ. ಆದರೂ ರಜೆ ಮೇಲೆ ಪಿಡಿಒ ತೆರಳಿದ್ದು ಅನ ಧಿಕೃತ ಗೈರು ಎಂದು ಪರಿಗಣಿಸಲ್ಪಡುತ್ತದೆ ಎಂದು ಇಒ ತಿಳಿಸಿದರು. ಪಿಡಿಒ ಅವರನ್ನು ಸೇವೆಯಿಂದ ಅಮಾನತುಗೊಳಿಸಲು ಜಿಪಂ ಮುಖ್ಯ ಕಾರ್ಯನಿರ್ವಾಹಕ
ಅಧಿಕಾರಿಗೆ ಶಿಫಾರಸು ಮಾಡಿ ಎಂದು ಜಿಪಂ ಅಧ್ಯಕ್ಷರು ತಾಪಂ ಇಒಅವರಿಗೆ ಸೂಚಿಸಿ ಕೂಡಲೇ ತಾಪಂನ ಅಧಿ ಕಾರಿಯೊಬ್ಬರನ್ನು ಗ್ರಾಪಂಗೆ ಕಳಿಸಿ ಸಮಸ್ಯೆ ಬಗೆಹರಿಸುವಂತೆ ತಿಳಿಸಿದರು. ಇಒ ಸೂಚನೆ ಮೇರೆಗೆ ತಾಪಂ ಸಹಾಯಕ ನಿರ್ದೇಶಕ ನಿಂಗಣ್ಣ ದೊಡಮನಿ ಸಂಜೆ ಗ್ರಾಪಂ ಕಚೇರಿಗೆ ಬಂದು ಹಿಂದಿನ ದಾಖಲೆ ಪಡೆದುಕೊಂಡು ಪರಿಶೀಲಿಸಿ ಗ್ರಾಮಸ್ಥರ ಅಹವಾಲು ಆಲಿಸಿದರು. ಜಿಪಂ ಅಧ್ಯಕ್ಷರೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಕಂಡುಹಿಡಿದು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಇದರಿಂದ ಪ್ರತಿಭಟನಾಕಾರರು ಬೀಗ ತೆರವುಗೊಳಿಸಿದರು.
ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಶ್ರೀಶೈಲ ಮಲ್ಲಿಕಾರ್ಜುನ ದೇಶಮುಖ, ಪ್ರಮುಖರಾದ ಬಸಪ್ಪ ಚಲವಾದಿ, ಕರೆಪ್ಪ ಪೂಜಾರಿ, ಶಂಕರಗೌಡ ಪಾಟೀಲ, ಮುದಕಪ್ಪ ಶಿವಪುರ, ದ್ಯಾಮಣ್ಣ ಹಿರೇಕುರುಬರ, ಸಿದ್ದಣ್ಣ ಉಪ್ಪಿನಕಾಯಿ, ಬಾಸೇಸಾಬ ತಾಳಿಕೋಟೆ, ಶ್ರೀನಿವಾಸ ಗೌಂಡಿ, ಸುರೇಶ ಭೈರವಾಡಗಿ ಸೇರಿದಂತೆ 50ಕ್ಕೂ ಹೆಚ್ಚು ಗ್ರಾಮಸ್ಥರು ಪಾಲ್ಗೊಂಡಿದ್ದರು.
Advertisement