Advertisement

ಕ್ಯಾನ್ಸರ್‌ ಪೀಡಿತರ ಚಿಕಿತ್ಸೆಗೆ ಪೋರನಿಂದ ಕೇಶದಾನ!

03:45 AM Feb 18, 2017 | Team Udayavani |

ಮಂಗಳೂರು: ಕ್ಯಾನ್ಸರ್‌ ಚಿಕಿತ್ಸೆಯಿಂದ ಕೂದಲು ಕಳೆದುಕೊಳ್ಳುವವರ ನೋವನ್ನು ಒರೆಸುವ ಕಾರ್ಯಕ್ಕೆ ಎರಡೂವರೆ ವರ್ಷದ ಬಾಲಕ ಕೈ ಜೋಡಿಸಿದ್ದಾನೆ. ಮಂಗಳೂರು ಸಮೀಪದ ಮಣ್ಣಗುಡ್ಡೆ ನಿವಾಸಿಗಳಾದ ಅಶ್ವಿ‌ನ್‌ ಪ್ರಭು ಹಾಗೂ
ಶ್ರೀಲತಾ ಪ್ರಭು ಅವರ ಎರಡೂವರೆ ವರ್ಷದ ಮಗ ಅರ್ನವ್‌ ಪ್ರಭು ಅವರ ಮೊದಲ ಬಾರಿ ಕೂದಲು ಕತ್ತರಿಸುವ ಕಾರ್ಯಕ್ರಮ ಇತರರಿಗಿಂತ ವಿಭಿನ್ನವಾಗಿ ನಡೆಯಿತು.

Advertisement

ಸಾಮಾನ್ಯವಾಗಿ ಒಂದೂವರೆ ವರ್ಷದಲ್ಲಿ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಕೂದಲು ಕತ್ತರಿಸುವ ಸಂಪ್ರದಾಯ ಅವರ ಮನೆತನದಲ್ಲಿ ನಡೆದು ಬರುತ್ತಿತ್ತು. ಆದರೆ, ಶ್ರೀಲತಾ ಪ್ರಭು ಅವರ ಇಚ್ಛೆಯಂತೆ ಕ್ಯಾನ್ಸರ್‌ನ ಕೀಮೋಥೆರಪಿ ಚಿಕಿತ್ಸೆಯಿಂದ ಕೂದಲು ಕಳೆದುಕೊಂಡ ಅನೇಕರಿಗೆ ನೆರವಾಗುವ ದೃಷ್ಟಿಯಿಂದ ಅರ್ನವ್‌ ಅವರ ಕೂದಲನ್ನು ಉದ್ದ ಬರುವವರೆಗೆ ಬಿಟ್ಟು ದಾನ ಮಾಡಿದ್ದಾರೆ.

ಸಂಪ್ರದಾಯದಂತೆ ಮಗುವಿನ ಕೂದಲನ್ನು ಮೊದಲ ಬಾರಿಗೆ ತೆಗೆದಾದ ಹೋಮಕುಂಡಕ್ಕೆ ಹಾಕಲಾಗುತ್ತದೆ. ಆದರೆ, ಶ್ರೀಲತಾ ಪ್ರಭು ಅವರು ಸಂಪ್ರದಾಯದಂತೆ ಒಂದೆರಡು ಕೂದಲನ್ನು ಹೋಮ ಕುಂಡಕ್ಕೆ ಹಾಕಿ ಬಾಕಿ ಕೂದಲನ್ನು ದಾನ ಮಾಡಿದ್ದಾರೆ.

10 ಇಂಚು ಕೂದಲು: ದಾನ ಮಾಡುವ ಕೂದಲು ಸುಮಾರು 8 ಎಂಚು ಇರಬೇಕು ಎಂಬ ನಿಯಮವಿದ್ದು, ಅರ್ನವ್‌ ಪ್ರಭು ಅವರ ಹತ್ತು ಇಂಚಿನ ಕೂದಲನ್ನು ಅಮೆರಿಕನ್‌ ಕ್ಯಾನ್ಸರ್‌ ಫೌಂಡೇಶನ್‌ ಸಂಸ್ಥೆಯೊಂದಿಗೆ ಕೈ ಜೋಡಿಸಿರುವ ಪ್ಯಾಂಟಿನ್‌ ಬ್ಯುಟಿಫ್ಯೂಲ್‌ ಲೆಂತ್‌ ಎಂಬ ಸಂಸ್ಥೆಗೆ ಕೊರಿಯರ್‌ ಮೂಲಕ ಕಳುಹಿಸುತ್ತಿದ್ದಾರೆ. ಭಾರತದಲ್ಲಿ ಕೆಲವೇ ಕೆಲವು ಕೇಶದಾನ ಮಾಡುವ ಸಂಸ್ಥೆಗಳಿದ್ದು, ಅವರನ್ನು ಸಂಪರ್ಕಿಸಿದಾಗ ಅವರ ಅಭಿಯಾನ ಮಾಡುವ ಜಾಗದಲ್ಲಿ ಮಾತ್ರವೇ ಕೇಶ ಸ್ವೀಕರಿಸಲಾಗುತ್ತದೆ ಎಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಅವರು ವಿದೇಶಿ ಸಂಸ್ಥೆಯನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಂಡರು.

ಕೇಶ ನೀಡುವ ಮೊದಲು ಅರ್ಜಿ ನಮೂನೆ ಭರ್ತಿ ಮಾಡಿ, ನಮ್ಮ ದೇಶದಲ್ಲಿನ ಕ್ಯಾನ್ಸರ್‌ ಪೀಡಿತರಿಗೆ ನೀಡಬೇಕು ಎಂದು ಕೋರಿದ್ದಾರೆ. ಇದರಿಂದಾಗಿ ನಮ್ಮ ದೇಶದ ರೋಗಿಗೆ ಅರ್ನವ್‌ ಅವರ ಕೂದಲಿನಿಂದ ತಯಾರಿಸಿದ ವಿಗ್‌ನ್ನು ನೀಡಲಾಗುತ್ತದೆ.

Advertisement

ಕೊರಿಯರ್‌ ಮೂಲಕ ಅಮೆರಿಕಕ್ಕೆ:
ಕೂದಲು ತುಂಡರಿಸುವ ಮುನ್ನ ಶ್ಯಾಂಪೊ ಮೂಲಕ ಕೂದಲನ್ನು ತೊಳೆದಿರಬೇಕು. ಬಳಿಕ ಗ್ಲೋ ಡ್ರೈ ಮಾಡಿ 10 ಇಂಚಿನ ಕೂದಲನ್ನು ಪ್ಲಾಸ್ಟಿಕ್‌ನಿಂದ ಕವರ್‌ ಮಾಡಿ ಕೊರಿಯರ್‌ ಮೂಲಕ ಅಮೆರಿಕಕ್ಕೆ ಕಳುಹಿಸಲಾಗುತ್ತದೆ.
ಅದರೊಂದಿಗೆ ಮಗುವಿನ ಮೊದಲಿನ ಚಿತ್ರ ಹಾಗೂ ಈಗಿನ ಚಿತ್ರವನ್ನು ಕಳುಹಿಸಬೇಕಾಗುತ್ತದೆ.

ಚಿಕ್ಕಂದಿನಿಂದಲೇ ಅರ್ನವ್‌ಗೆ ಕೂದಲು ಎಂದರೆ ತುಂಬಾ ಇಷ್ಟ. ಕೂದಲು ತುಂಡರಿಸುವ ಎಂದಾಗ ಅರ್ನವ್‌ ಬೊಬ್ಬೆ ಹೊಡೆಯುತ್ತಿದ್ದ. ಒಂದು ದಿನ ಕ್ಯಾನ್ಸರ್‌ನಿಂದ ಕೂದಲು ಕಳೆದುಕೊಂಡ ಜನರ ಚಿತ್ರ ತೋರಿಸಿ ನಿನ್ನ ಕೂದಲು ಅವರಿಗೆ ನೀಡು, ನಿನಗೆ ಬೇರೆ ಬರುತ್ತದೆ ಎಂದು ಹೇಳಿದಾಗ ಒಪ್ಪಿಕೊಂಡ. ಕೂದಲು ತುಂಡು ಮಾಡುವಾಗಲೂ ಅಳದೆ ಸುಮ್ಮನೇ ಕೂತಿದ್ದ.
– ಅಶ್ವಿ‌ನ್‌ ಪ್ರಭು, ತಂದೆ 

ಕೇಶದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಗ ಅರ್ನವ್‌ನ ಕೂದಲನ್ನು ದಾನ ಮಾಡಿದ್ದೇವೆ. ನಮ್ಮ ದೇಶದಲ್ಲಿ ಅಂತಹ ಸಂಸ್ಥೆಗಳು ಕಡಿಮೆ ಇವೆ. ಹಾಗಾಗಿ ವಿದೇಶಿ ಸಂಸ್ಥೆಯನ್ನು ಸಂಪರ್ಕಿಸಿ ಸಾಂಪ್ರದಾಯಿಕ ಚೌಕಟ್ಟು ಮೀರದಂತೆ ಮಗನ ಮೊದಲ ಕೇಶವನ್ನು ದಾನ ಮಾಡಿದ್ದೇವೆ. ಈ ಬಗ್ಗೆ ಜನರಲ್ಲಿ ತಿಳಿವಳಿಕೆ ಮೂಡಿದರೆ
ಸಂತೋಷ.
– ಶ್ರೀಲತಾ ಪ್ರಭು, ತಾಯಿ

Advertisement

Udayavani is now on Telegram. Click here to join our channel and stay updated with the latest news.

Next