ಹೈದರಾಬಾದ್: ನ್ಯಾ| ಹೇಮಾ ಸಮಿತಿ ವರದಿ ಮಲಯಾಳ ಚಿತ್ರರಂಗದಲ್ಲಿ ಕೋಲಾಹಲ ಸೃಷ್ಟಿಸಿರುವಂತೆಯೇ ಈಗ ತೆಲುಗು ಸಿನಿರಂಗದಲ್ಲೂ ಮೀ ಟೂ ಬಿರುಗಾಳಿಯ ಅಬ್ಬರ ಆರಂಭವಾಗುವ ಲಕ್ಷಣ ಗೋಚರಿಸಿದೆ. ತೆಲುಗು ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯಗಳ ಕುರಿತು ಉಪ ಸಮಿತಿ ನೀಡಿದ್ದ ವರದಿಯನ್ನು ಬಹಿರಂಗಗೊಳಿಸಬೇಕೆಂದು ತೆಲಂಗಾಣ ಸರಕಾರವನ್ನು ನಟಿ ಸಮಂತಾ ರುತ್ ಪ್ರಭು ಆಗ್ರಹಿಸಿದ್ದಾರೆ.
ಈ ಬಗ್ಗೆ ಸಮಂತಾ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ. “ತೆಲುಗು ಚಿತ್ರರಂಗದ (ಟಿಎಫ್ಐ) ಲೈಂಗಿಕ ದೌರ್ಜನ್ಯಗಳ ಕುರಿತು ಉಪ ಸಮಿತಿ ನೀಡಿದ್ದ ವರದಿಯನ್ನು ತೆಲಂಗಾಣ ಸರಕಾರ ಬಹಿರಂಗಗೊಳಿಸಬೇಕೆಂದು ಈ ಚಿತ್ರರಂಗದ ಮಹಿಳೆಯರಾದ ನಾವು ಆಗ್ರಹಿಸುತ್ತೇವೆ. ವರದಿ ಬಹಿರಂಗಗೊಂಡರೆ ಸಿನಿರಂಗದಲ್ಲಿ ಮಹಿಳೆಯರಿಗೆ ಸುರಕ್ಷಿತ ವಾತಾವರಣ ನಿರ್ಮಿಸಿಕೊಡಲು ಸೂಕ್ತ ಕಾನೂನು, ನೀತಿ ರೂಪಿಸಲು ಸರಕಾರಕ್ಕೆ ಹಾಗೂ ಚಿತ್ರರಂಗಕ್ಕೂ ನೆರವಾಗಲಿದೆ’ ಎಂದಿದ್ದಾರೆ.
ಅಲ್ಲದೆ ಹೇಮಾ ಸಮಿತಿಯ ವರದಿಯನ್ನು ನಾವು ಸ್ವಾಗತಿಸುತ್ತೇವೆ. ಈ ಚಳವಳಿಯನ್ನು ಸೃಷ್ಟಿಸುವಲ್ಲಿ ಮಲಯಾಳ ಸಿನಿಮಾ ಮಹಿಳಾ ಒಕ್ಕೂಟದ (ಡಬ್ಲ್ಯುಸಿಸಿ) ನಿರಂತರ ಪ್ರಯತ್ನವನ್ನೂ ಶ್ಲಾ ಸುತ್ತೇವೆ. ಡಬ್ಲ್ಯುಸಿಸಿಯ ಪ್ರೇರಣೆಯೊಂದಿಗೆ 2019ರಲ್ಲಿ ತೆಲುಗು ಸಿನಿರಂಗದ ಮಹಿಳೆಯರ ಧ್ವನಿಯಾಗಲೆಂದು “ದಿ ವಾಯ್ಸ ಆಫ್ ವುಮೆನ್’ ಎಂಬ ಒಕ್ಕೂಟವನ್ನು ಸ್ಥಾಪಿಸಲಾಗಿದೆ. ಈ ಮೂಲಕ ಟಿಎಫ್ಐ ಸದಸ್ಯರ ಬೆನ್ನಿಗಿರಲಿದ್ದೇವೆ ಎಂದಿದ್ದಾರೆ.
ಜಾಲತಾಣಗಳಲ್ಲಿ ಪೋಸ್ಟ್:
ಸಮಂತಾ ಮಾತ್ರವಲ್ಲದೆ ನಟಿ ಲಕ್ಷ್ಮೀ ಮಂಚು, ನಿರೂಪಕಿ ಸುಮಾ, ಝಾನ್ಸಿ, ನಿರ್ದೇಶಕಿ ನಂದಿನಿ ರೆಡ್ಡಿ ಸಹಿತ ಟಿಎಫ್ಐನ ಹಲವು ಮಹಿಳೆಯರು ಜಾಲತಾಣಗಳಲ್ಲಿ ಇದೇ ಪೋಸ್ಟ್‌ಗಳ ಮೂಲಕ ವರದಿ ಬಿಡುಗಡೆಗೆ ಸರಕಾರವನ್ನು ಆಗ್ರಹಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳು ಟಾಲಿವುಡ್‌ನಲ್ಲೂ ಮೀಟೂ ಬಿರುಗಾಳಿಯೆಬ್ಬಿಸುವ ಸುಳಿವನ್ನು ನೀಡಿದೆ.