ನಟ ಗೌರಿಶಂಕರ್ ಅಭಿನಯದ “ಕೆರೆಬೇಟೆ’ ಸಿನಿಮಾ ತೆರೆಗೆ ಬರಲು ಸಿದ್ಧವಾಗುತ್ತಿದೆ. ಸದ್ಯ ನಿಧಾನವಾಗಿ “ಕೆರೆಬೇಟೆ’ ಸಿನಿಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇತ್ತೀಚೆಗೆ ಸಿನಿಮಾದ ಮೊದಲ ಟೀಸರ್ ಬಿಡುಗಡೆ ಮಾಡಿದೆ.
ಮಲೆನಾಡಿನ ಗ್ರಾಮೀಣ ಸೊಗಡಿನ ಕಥಾಹಂದರ ಹೊಂದಿರುವ “ಕೆರೆಬೇಟೆ’ ಸಿನಿಮಾದ ಟೀಸರ್ ಅನ್ನು “ಕೆರೆಬೇಟೆ’ ಆಡುವ ಶೈಲಿಯಲ್ಲಿಯೇ ಬೆಂಗಳೂರಿನ ಮಲ್ಲತ್ತಹಳ್ಳಿ ಕೆರೆ ದಂಡೆಯಲ್ಲಿ ಚಿತ್ರತಂಡ ವಿಶೇಷವಾಗಿ ಬಿಡುಗಡೆ ಮಾಡಿತು. ನಟ ಧನಂಜಯ, ನಿರ್ದೇಶಕ ದಿನಕರ್ ತೂಗುದೀಪ್ “ಕೆರೆಬೇಟೆ’ ಸಿನಿಮಾದ ಟೀಸರ್ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ನಿರ್ದೇಶಕರಾದ ಗುರು ದೇಶಪಾಂಡೆ, ಪವನ್ ಒಡೆಯರ್, ಜಡೇಶ್ ಹಂಪಿ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು “ಕೆರೆಬೇಟೆ’ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಹಾಜರಿದ್ದರು.
ಟೀಸರ್ ಬಿಡುಗಡೆಗೊಳಿಸಿ ಮಾತನಾಡಿದ ನಟ ಡಾಲಿ ಧನಂಜಯ್, “ನಮ್ಮ ನೆಲದ ಸಿನಿಮಾಗಳು ಯಾವಾಗಲು ಸೋಲಲ್ಲ. “ಕೆರೆಬೇಟೆ’ ಕೂಡ ನಮ್ಮ ನೆಲದ ಸಿನಿಮಾ. ಎಷ್ಟೋ ಜನರಿಗೆ “ಕೆರೆಬೇಟೆ’ಯ ಬಗ್ಗೆ ಗೊತ್ತಿಲ್ಲ. ಈ ಸಿನಿಮಾ ಮೂಲಕ ಎಲ್ಲರಿಗೂ ಗೊತ್ತಾಗಿದೆ. ನಮ್ಮ ಸಂಸ್ಕೃತಿಯ ಸಿನಿಮಾವಿದು’ ಎಂದರು. ಇನ್ನೂ ದಿನಕರ್ ತೂಗುದೀಪ ಮಾತನಾಡಿ, “ಈ ಸಿನಿಮಾದ ನಾಯಕ ಗೌರಿಶಂಕರ್ ಹಲವು ವರ್ಷಗಳಿಂದ ನನಗೆ ಪರಿಚಿತರು. ಸಿನಿಮಾದ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದಾರೆ. ಈಗಾಗಲೇ ಈ ಸಿನಿಮಾವನ್ನು ನೋಡಿದ್ದೇನೆ. ಸಿನಿಮಾ ತುಂಬಾ ಚೆನ್ನಾಗಿ ಬಂದಿದ್ದು, ಗೆದ್ದೇಗೆಲ್ಲುತ್ತೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ “ಕೆರೆಬೇಟೆ’ ಸಿನಿಮಾದ ಬಗ್ಗೆ ಮಾತನಾಡಿದ ನಿರ್ದೇಶಕ ರಾಜಗುರು, “ನಾನು ಮಲೆನಾಡಿನ ಹುಡುಗ. ಚಿಕ್ಕ ವಯಸ್ಸಿನಿಂದ ಕೆರೆಬೇಟೆ ನೋಡಿಕೊಂಡು ಬೆಳೆದವನು. ಈ ಸಿನಿಮಾ ಮಾಡಬೇಕು ಎನ್ನುವುದು ನನ್ನ ಕನಸಾಗಿತ್ತು. ಇದೀಗ ನನಸಾಗಿದೆ’ ಎಂದರು.
ನಾಯಕ ಗೌರಿಶಂಕರ್ ಮಾತನಾಡಿ, “ಸಾಕಷ್ಟು ಶ್ರದ್ದೆಯಿಂದ ಒಳ್ಳೆಯ ಕಂಟೆಂಟ್ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ’ ಎಂದು ಸಿನಿಮಾದ ಹಿಂದಿನ ಕಥೆಯನ್ನು ತೆರೆದಿಟ್ಟರು. ಸಮಾರಂಭದಲ್ಲಿ ಹಾಜರಿದ್ದ ನಾಯಕಿ ಬಿಂದು, ನಟರಾದ ಸಂಪತ್, ಗೋಪಾಲ್ ದೇಶಪಾಂಡೆ, ನಟಿ ಹರಿಣಿ ಸೇರಿದಂತೆ ಅನೇಕರು ಸಿನಿಮಾ ಮತ್ತು ತಮ್ಮ ಪಾತ್ರದ ಬಗ್ಗೆ ಮಾತನಾಡಿದರು.
“ಜನಮನ ಸಿನಿಮಾಸ್’ ಬ್ಯಾನರ್‌ನಲ್ಲಿ ನಿರ್ಮಾಣ ವಾಗಿರುವ “ಕೆರೆಬೇಟೆ’ ಸಿನಿಮಾದ ಹಾಡುಗಳಿಗೆ ಗಗನ್ ಬಡೇರಿಯಾ ಸಂಗೀತ ಸಂಯೋಜಿಸಿದ್ದು, ಶಿವಮೊಗ್ಗ ಜಿಲ್ಲೆಯ ಸಿಗಂದೂರು, ಸೊರಬ ಸುತ್ತಮುತ್ತ ಸಿನಿಮಾದ ಬಹುತೇಕ ಚಿತ್ರೀಕರಣ ಮಾಡಲಾಗಿದೆ