ಮಲೆನಾಡ ಸೊಗಡು, ಹಸಿರಿನ ಸೊಬಗು, ನಿಧಾನವಾಗಿ ಕಣ್ಮರೆಯಾಗುತ್ತಿರುವ “ಕೆರೆಬೇಟೆ’ ಎಂಬ ಗ್ರಾಮೀಣ ಸಂಸ್ಕೃತಿ, ಅಂಟಿಗೆ-ಪಿಂಟಿಗೆ ಪದಗಳ ಲಾಲಿತ್ಯ, ನಡುವೆ ಯೊಂದು ನವಿರಾದ ಪ್ರೇಮಕಥೆ, ಅದರ ಹಿಂದೆ ಕಾಣದ ಕ್ರೌರ್ಯದ ಅಟ್ಟಹಾಸ, ಬಡಜೀವಗಳ ವೇದನೆ, ಜಾತಿ ವೈಷಮ್ಯ ಹೀಗೆ ನಮ್ಮ ನಡುವೆಯೇ ಬೆರೆತು ಹೋದ ಒಂದಷ್ಟು ವಿಷಯಗಳನ್ನು ಪೋಣಿಸಿ ಅದೆಲ್ಲವನ್ನೂ ಸುಂದರ ದೃಶ್ಯ ಕಾವ್ಯದಂತೆ ತೆರೆಮೇಲೆ ತೆರೆದಿಡುವ “ಚಿತ್ರ’ಣವೇ ಈ ವಾರ ಬಿಡುಗಡೆಯಾಗಿ ತೆರೆಗೆ ಬಂದಿರುವ “ಕೆರೆಬೇಟೆ’ ಸಿನಿಮಾ.
ಮಲೆನಾಡಿನ ಗ್ರಾಮೀಣ ಭಾಗದಲ್ಲಿ ಆಚರಣೆಯಲ್ಲಿರುವ “ಕೆರೆಬೇಟೆ’ ಎಂಬ ವಿಭಿನ್ನ ಕ್ರೀಡಾ ಸಂಸ್ಕೃತಿಯನ್ನು ಅನಾವರಣ ಮಾಡುತ್ತಾ¤ ತೆರೆದುಕೊಳ್ಳುವ ಸಿನಿಮಾದ ಕಥೆಯ ಆರಂಭದಲ್ಲಿಯೇ ಯಾರಿಗೂ ಹೆದರದ, ಯಾರಿಗೂ ತಲೆಬಾಗದ, ಕಳ್ಳನಾಟ ಕುಯ್ದು ಜೈಲುಪಾಲಾಗಿದ್ದ ಹುಲಿಮನೆ ನಾಗ (ನಾಯಕ)ನ ಆಗಮನವಾಗುತ್ತದೆ. ಊರಿನವರ ಅಸಹನೆಗೆ ಗುರಿಯಾಗಿರುವ, ರೋಷಾವೇಶವನ್ನೆ ಮೈ ತುಂಬಿಕೊಂಡಿ ಕೊಂಡಿರುವ “ಮನೆಹಾಳ’ ನಾಗನ ಬದುಕಿಗೆ ನಿಧಾನವಾಗಿ ಮೀನಾ (ನಾಯಕಿ) ಅಡಿಯಿಡುತ್ತಾಳೆ. ಇಬ್ಬರ ನಡುವೆ ಪ್ರೀತಿ ಮೂಡಿ, ಈ ವಿಷಯ ಕುಟುಂಬದವರಿಗೆ ತಿಳಿಯುವ ಹೊತ್ತಿಗೆ ಕಥೆಯಲ್ಲೊಂದು ಅನಿರೀಕ್ಷಿತ ತಿರುವು ಸಿಗುತ್ತದೆ. ಆನಂತರ ನಡೆಯುವುದೆಲ್ಲವೂ ನೋಡುಗರು ಊಹಿಸಲಾಗದಂಥ ಸನ್ನಿವೇಶಗಳು.
ಮಲೆನಾಡು ಸಂಸ್ಕೃತಿಯ ಜೊತೆಗೆ ಒಂದು ಲವ್‌ಸ್ಟೋರಿ ಯನ್ನು ಸಸ್ಪೆನ್ಸ್, ಕ್ರೈಂ-ಥ್ರಿಲ್ಲರ್ ಶೈಲಿಯಲ್ಲಿ “ಕೆರೆಬೇಟೆ’ ಸಿನಿಮಾದಲ್ಲಿ ಪ್ರೇಕ್ಷಕರ ಮುಂದೆ ತಂದಿದ್ದಾರೆ ನಿರ್ದೇಶಕ ರಾಜಗುರು. ನವಿರಾದ ಹಾಡು, ಕೂತಲ್ಲೇ ಕಚಗುಳಿಯಿಡುವ ಕಾಮಿಡಿ, ರಗಡ್ ಎನಿಸುವಂಥ ಪಾತ್ರಗಳು, ಭರ್ಜರಿ ಆ್ಯಕ್ಷನ್, ಮಾಸ್ ಡೈಲಾಗ್ಸ್ ಹೀಗೆ ಔಟ್ ಆ್ಯಂಡ್ ಔಟ್ ಕಮರ್ಷಿಯಲ್ ಎಂಟರ್‌ಟೈನ್ಮೆಂಟ್ ಅಂಶಗಳನ್ನು ಇಟ್ಟುಕೊಂಡು ಪಕ್ಕಾ ಗ್ರಾಮೀಣ ಸೊಗಡಿನ ಕಥೆಯನ್ನು ಮೂಲಕ ಪ್ರೇಕ್ಷಕರ ಮುಂದಿಡುವ ಪ್ರಯತ್ನದಲ್ಲಿ ಚಿತ್ರತಂಡ ಬಹುತೇಕ ಯಶಸ್ವಿಯಾಗಿದೆ.
ನಾಯಕ ಗೌರಿಶಂಕರ್ ತಮ್ಮ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ, ಈ ಸಿನಿಮಾದಲ್ಲಿ ಸಾಕಷ್ಟು ಮಾಡಿದ್ದಾರೆ. ಮಲೆನಾಡ ಹಳ್ಳಿ ಹುಡುಗನಾಗಿ ತಮ್ಮ ಪಾತ್ರವನ್ನು ಮನ ಮುಟ್ಟುವಂತೆ ಪ್ರೇಕ್ಷಕರಿಗೆ ಒಪ್ಪಿಸಿ ಫುಲ್ ಮಾರ್ಕ್ಸ್ ಪಡೆ ದು ಕೊಳ್ಳುತ್ತಾರೆ. ನಾಯಕಿ ಬಿಂದು ಕೂಡ ಮೊದಲ ನೋಟದಲ್ಲೇ ಇಷ್ಟವಾಗುತ್ತಾರೆ. ನಾಯಕಿ ತಂದೆಯಾಗಿ ಗೋಪಾಲ್ ದೇಶಪಾಂಡೆ, ನಾಯಕನ ತಾಯೊಯಾಗಿ ಹರಿಣಿ ಅವರದ್ದು ಎಂದಿನಂತೆ ಅಚ್ಚುಕಟ್ಟಾದ ಅಭಿನಯ. ಉಳಿದಂತೆ ಸಂಪತ್, ರಾಕೇಶ್ ಪೂಜಾರಿ ಮತ್ತಿತ ರರು ತಮ್ಮ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.
– ಜಿ.ಎಸ್.ಕಾರ್ತಿಕ ಸುಧನ್