ಮೂಡಬಿದಿರೆ: ವಿದ್ಯಾರ್ಥಿಗಳು ಪಠ್ಯಕ್ಕೆ ಮಾತ್ರ ಸೀಮಿತರಾಗಬಾರದು. ಸಾಹಿತ್ಯ, ಕಲೆ, ಕ್ರೀಡಾರಂಗಗಳಲ್ಲೂ ಸಕ್ರಿಯರಾಗಿ ಅತ್ಯುತ್ತಮ ಬದುಕು ರೂಪಿಸಬೇಕು. ಇಂಥ ವಾತಾವರಣ ಆಳ್ವಾಸ್‌ನಲ್ಲಿದೆ. ಕೇರಳದಿಂದ ಬಂದ ವಿದ್ಯಾರ್ಥಿಗಳು ಇಲ್ಲಿ ಸಿಗುವ ಎಲ್ಲ ಅವಕಾಶಗಳನ್ನು ಬಳಸಿಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಕಣ್ಣೂರು ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಎನ್.ಕೆ. ಅಬ್ದುಲ್ ಖಾದರ್ ತಿಳಿಸಿದರು. ಆಳ್ವಾಸ್ ಕಾಲೇಜಿನ ನುಡಿಸಿರಿ ವೇದಿಕೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕೇರಳ ವಿದ್ಯಾರ್ಥಿಗಳಿಗಾಗಿ ಶನಿವಾರ ಆಯೋಜಿಸಿದ ‘ಆಳ್ವಾಸ್ ಕೇರಳೀಯಂ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಜಗತ್ತಿನಲ್ಲಿ ಇರುವುದು ಒಂದೇ ಸೂರ್ಯ, ಒಂದೇ ಗಾಳಿ, ಒಂದೇ ಭೂಮಿ. ಜಾತಿ, ಧರ್ಮ ಮಾತ್ರ ಬೇರೆ. ಆದರೆ ಈ ಭಾರಿ ಕೇರಳದಲ್ಲಿ ಜಲಪ್ರಳಯ ಸಂಭವಿಸಿದ ದಿನಗಳಲ್ಲಿ ಜಾತಿ, ಧರ್ಮಗಳ ನಡುವಿನ ಅಂತರವೇ ಇಲ್ಲದಾದಂತಾಗಿದೆ. ಮುಸ್ಲಿಮರ ಹಬ್ಬವನ್ನು ಹಿಂದೂ ದೇವಸ್ಥಾನಗಳಲ್ಲಿ ಆಚರಿಸಿದ್ದಾರೆ. ಕಷ್ಟ ಬಂದಾಗ ಜಾತಿ, ಧರ್ಮ, ಮತ ಬೇಧ ಬಿಟ್ಟು ಸಮಾಜ ಸೇವೆಯಲ್ಲಿ ತೊಡಗಿದ್ದನ್ನು ಕೇರಳದಲ್ಲಿ ಕಂಡಿದ್ದೇವೆ. ಪ್ರಕೃತಿ ವಿಕೋಪಕ್ಕೆ ಸಿಲುಕಿದ ಕೇರಳವನ್ನು ಮತ್ತೆ ದೇಶದ ರಮಣೀಯ ಸ್ಥಳವನ್ನಾಗಿ ಮಾಡಬೇಕಾಗಿದೆ ಎಂದು ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ್ ಆಳ್ವ, ಟ್ರಸ್ಟಿ ವಿವೇಕ್ ಆಳ್ವ ಮತ್ತು$ಆಳ್ವಾಸ್ ವಿದ್ಯಾ ಸಂಸ್ಥೆಯ ವಿವಿಧ ಕಾಲೇಜುಗಳ ಪ್ರಾಂಶುಪಾಲರು ಉಪಸ್ಥಿತರಿದ್ದರು. ದೀಪ್ತಿ ಬಾಬು ಸ್ವಾಗತಿಸಿ, ಆಶ್ವತಿ ಜೈನ್ ನಿರೂಪಿಸಿದರು. ಊಟೋಪಚಾರದಲ್ಲಿ ಕೇರಳದ ವಿಭಿನ್ನ ಸುಮಾರು 15 ಬಗೆಯ ಖಾದ್ಯಗಳಿದ್ದವು.
ಮೆರವಣಿಗೆ
ಚೆಂಡೆ ಮತ್ತು ಕೇರಳದ ಸಂಪ್ರದಾಯ ಉಡುಗೆ ತೊಟ್ಟು ಮೆರವಣಿಗೆ ಮೂಲಕ ಅತಿಥಿಗಳನ್ನು ಸ್ವಾಗತಿಸಿದರು. ಕೇರಳ ರಾಜ್ಯವನ್ನು ಆಳುತ್ತಿದ್ದ ಮಾವೇಲಿರಾಜನ ವೇಷಧಾರಿಯಾಗಿ ಮೆರವಣಿಗೆಗೆ ಮೆರುಗನ್ನು ತಂದು ಕೊಟ್ಟಿತ್ತು. ಕೇರಳದ ಸಾಂಸ್ಕೃತಿಕ ನೃತ್ಯಗಳನ್ನು ಪ್ರದರ್ಶಿಸಲಾಯಿತು.