ನವದೆಹಲಿ: ಅತ್ತ, ದೂರದ ದೆಹಲಿಯಲ್ಲಿ ಪತಿಯಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕಾರ, ಅದೇ ಹೊತ್ತಿಗೆ ಸರಿಯಾಗಿ, ಕೇರಳದಲ್ಲಿ ಕ್ಯಾನ್ಸರ್‌ನಿಂದ ಸಾವಿಗೀಡಾದ ಪತ್ನಿಯ ಅಂತ್ಯಸಂಸ್ಕಾರ!
ಒಂದು ಜೀವನದ ಉತ್ತುಂಗದ ಖುಷಿ, ಮತ್ತೊಂದು ಹೃದಯ ವಿದ್ರಾವಕ ದುಃಖ. ಇವೆರಡನ್ನೂ ಏಕಕಾಲದಲ್ಲಿ ಅನುಭವಿಸಿದ ಸ್ಥಿತಿ ಕೇರಳದ ಲೇಖಕರಾದ ಬಾಲನ್ ಪುಥೇರಿಯವರದ್ದು.
ಕಣ್ಣಿನ ದೃಷ್ಟಿ ಇರದ ಬಾಲನ್ ನೂರಾರು ಪುಸ್ತಕಗಳನ್ನು ಬರೆದಿದ್ದು, ಅವರಿಗೆ ಅವರ ಪತ್ನಿ ಶಾಂತಾ ಬೆನ್ನೆಲುಬಾಗಿದ್ದರು. ಅವರ ಜೊತೆಯಲ್ಲೇ ನವದೆಹಲಿಗೆ ಬಂದು ಪದ್ಮಶ್ರೀ ಸ್ವೀಕರಿಸಬೇಕೆಂಬ ಕನಸು ಬಾಲನ್ ಅವರಿಗಿತ್ತಂತೆ. ಆದರೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಶಾಂತಾ, ಆಸ್ಪತ್ರೆಗೆ ಸೇರಿದ್ದರಿಂದ ದೆಹಲಿಯಲ್ಲಿ ಬಾಲನ್ ಅವರು ಪ್ರಶಸ್ತಿ ಸ್ವೀಕರಿಸಲು ಕೆಲ ಸಮಯವಿದ್ದಾಗ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ:ಲವ್ಲಿನಾರನ್ನು ನೇರವಾಗಿ ವಿಶ್ವಕೂಟಕ್ಕೆ ಆಯ್ಕೆ ಮಾಡಿದ್ದೇಕೆ?
ಅಷ್ಟರಲ್ಲಾಗಲೇ ರಾಷ್ಟ್ರಪತಿ ಭವನದಲ್ಲಿದ್ದ ಬಾಲನ್ ಪ್ರಶಸ್ತಿ ಪಡೆದೇ ಕೇರಳಕ್ಕೆ ವಾಪಸಾಗಲು ನಿರ್ಧರಿಸಿದ್ದಾರೆ.ಭಾರವಾದ ಹೃದಯದಿಂದ ನಡುಗುವ ಕೈಯ್ಯಲ್ಲಿ ಅವರು ಪ್ರಶಸ್ತಿ ಸ್ವೀಕರಿಸಿದ್ದಾರೆ.
ಅದೇ ಸಮಯಕ್ಕೆ ಸರಿಯಾಗಿ ಮಲಪ್ಪುರಂನ ಕೊಂಡೊಟ್ಟಿಯಲ್ಲಿ ಪತ್ನಿಯ ಚಿತೆಗೆ ಸಂಬಂಧಿಕರು ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಇತ್ತ ಚಿತೆ ಉರಿಯುತ್ತಿದ್ದಾಗಲೇ ಅತ್ತ ಅವರು ಪ್ರಶಸ್ತಿ ಸ್ವೀಕರಿಸುವಂತಾಗಿದ್ದು ದುರ್ದೈವದ ಸಂಗತಿ.