ತಿರುವನಂತಪುರ/ಕೊಲ್ಲಂ: ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ರವಿವಾರ ಉಂಟಾದ ಹಠಾತ್ ಪ್ರವಾಹದಲ್ಲಿ ಒಬ್ಬ ವ್ಯಕ್ತಿ ಅಸುನೀಗಿ, ಮತ್ತೊಬ್ಬನಿಗೆ ತೀವ್ರ ಗಾಯಗಳಾಗಿವೆ. ಇತರ ಮೂವರನ್ನು ಪಾರು ಮಾಡಲಾಗಿದೆ.
ಜಿಲ್ಲೆಯ ಕುಂಭವುರುತ್ತಿ ಜಲಪಾತದಲ್ಲಿ ಈ ಘಟನೆ ನಡೆದಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕೊಟ್ಟಾಯಂ ಜಿಲ್ಲೆಯಲ್ಲಿ ಕೂಡ ಪ್ರವಾಹದಿಂದ ಹಲವು ರೀತಿಯ ಹಾನಿಯಾಗಿದೆ.
ಈ ನಡುವೆ, ರಾಜ್ಯದಲ್ಲಿ ಆ. 4ರ ವರೆಗೆ ಧಾರಾಕಾರ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ರವಿವಾರ ಮುನ್ನೆಚ್ಚರಿಕೆ ಕೊಟ್ಟಿದೆ.
12 ಮಂದಿ ನೀರು ಪಾಲು: ರಾಜಸ್ಥಾನದ ಹಲವು ಜಿಲ್ಲೆಗಳಲ್ಲಿ ಮಳೆ ಪ್ರಕೋಪಕ್ಕೆ ನದಿಗಳು ಉಕ್ಕೇರಿ ಹರಿದಿವೆ. ಇದರಿಂದಾಗಿ ಒಟ್ಟು 12 ಮಂದಿ ನೀರು ಪಾಲಾಗಿದ್ದಾರೆ. ಈ ಪೈಕಿ ಶ್ರೀಗಂಗಾನಗರ ಜಿಲ್ಲೆಯೊಂದರಲ್ಲಿಯೇ ಐವರು ನೀರು ಪಾಲಾಗಿದ್ದಾರೆ.
ಹಲವೆಡೆ ಮಳೆ: ಪಂಜಾಬ್ ಮತ್ತು ಹರಿಯಾಣದ ವಿವಿಧ ಜಿಲ್ಲೆಗಳಲ್ಲಿ ರವಿವಾರ ಧಾರಾಕಾರ ಮಳೆಯಾಗಿದೆ. ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯಲ್ಲಿ ಮಳೆಯಾದ್ದರಿಂದ ಬಿಯಾಸ್ ನದಿಯಲ್ಲಿ ಪ್ರವಾಹ ಉಕ್ಕಿ ಹರಿದಿದೆ. ಉತ್ತರ ಪ್ರದೇಶದ ವಾರಾಣಸಿಯಲ್ಲಿ ಹೆಚ್ಚು ಮಳೆಯಾಗಿದ್ದರಿಂದ ಗಂಗಾ ನದಿ ಉಕ್ಕಿ ಹರಿದಿದೆ.