Advertisement
ಕೋವಿಡ್ 19 ವೈರಸ್ ಹಿನ್ನೆಲೆಯಲ್ಲಿ ಗಡಿಯಲ್ಲಿನ ತನ್ನೆಲ್ಲಾ ಮಾರ್ಗಗಳನ್ನು ಕೇರಳ ಸರಕಾರ ಮುಚ್ಚಿತ್ತು. ಆ ಪೈಕಿ ಪ್ರಸ್ತುತ ತಿರುವನಂತಪುರದ ಇಂಚಿವಿಲ, ಕೊಲ್ಲಂ ಜಿಲ್ಲೆಯ ಆರ್ಯಂಕವು, ಇಡುಕ್ಕಿ ವ್ಯಾಪ್ತಿಯ ಕುಮಿಲಿ, ಪಾಲಕ್ಕಾಡ್ ಜಿಲ್ಲೆಯ ವಲಯಾರ್, ವಯನಾಡ್ ಜಿಲ್ಲೆಯ ಮುತಂಗ ಮತ್ತು ಕಾಸರಗೋಡು ಜಿಲ್ಲೆಯ ಮಂಜೇಶ್ವರ ಸೇರಿ 6 ಕಡೆ ಚೆಕ್ ಪೋಸ್ಟ್‌ಗಳನ್ನು ತೆರೆಯಲಾಗಿದ್ದು, ಈ ಚೆಕ್‌ಪೋಸ್ಟ್‌ಗಳ ಮೂಲಕ ತನ್ನ ರಾಜ್ಯದ ಜನರಿಗೆ ಮಾತ್ರ ಪ್ರವೇಶ ನೀಡುವುದಾಗಿ ಸರಕಾರ ತಿಳಿಸಿದೆ.
ಮಾರ್ಗದ ಬಳಿ 500 ಮಂದಿ ಉಳಿದುಕೊಳ್ಳಲು ಮತ್ತು ವಾಹನ ನಿಲುಗಡೆಗೆ ಅಗತ್ಯ ವ್ಯವಸ್ಥೆ ಮಾಡುವಂತೆ ಆಯಾ ಜಿಲ್ಲಾಡಳಿತಗಳಿಗೆ ಸರಕಾರ ಸೂಚನೆ ನೀಡಿದೆ. ಕೇರಳಿಗರನ್ನು ಬರಮಾಡಿಕೊಳ್ಳಲು ಗಡಿಯಲ್ಲಿ 60 ಕೇಂದ್ರಗಳನ್ನು ತೆರೆಯಲಾಗಿದೆ. ಅಗತ್ಯಬಿದ್ದರೆ ಇನ್ನೂ ಹೆಚ್ಚಿನ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಕಾಸರಗೋಡು ಜಿಲ್ಲಾಧಿಕಾರಿ ಡಿ.ಸುಜಿತ್ ಬಾಬು ಮಾಧ್ಯಮಗಳಿಗೆ ತಿಳಿಸಿದ್ದಾರೆ.