Advertisement

ಕೇರಳ ಶಾಲಾ ಕಲೋತ್ಸವಕ್ಕೆ ಮುಖ್ಯಮಂತ್ರಿ ಹಸಿರು ನಿಶಾನೆ

02:00 AM Sep 13, 2018 | Karthik A |

ಕಾಸರಗೋಡು: ಮಹಾಪ್ರವಾಹ ಸೃಷ್ಟಿಯಾಗಿ ಭಾರೀ ನಾಶನಷ್ಟಗಳು ಸಂಭವಿಸಿದ ಹಿನ್ನೆಲೆಯಲ್ಲಿ ಆರ್ಥಿಕ ಶಿಸ್ತುಕ್ರಮ ಪಾಲಿಸುವ ಹೆಸರಿನಲ್ಲಿ ಕೇರಳ ಶಾಲಾ ಕಲೋತ್ಸವವನ್ನು ರದ್ದುಗೊಳಿಸಿ ರಾಜ್ಯ ಸಾರ್ವಜನಿಕ ಆಡಳಿತ ಇಲಾಖೆಯು ಹೊರಡಿಸಿದ ಆದೇಶವನ್ನು ತೀವ್ರ ಪ್ರತಿಭಟನೆಯ ನಿಟ್ಟಿನಲ್ಲಿ ಸರಕಾರವು ಕೊನೆಗೂ ಹಿಂತೆಗೆದುಕೊಂಡಿದೆ. ಶಾಲಾ ಕಲೋತ್ಸವವನ್ನು ರದ್ದುಪಡಿಸಿದ ನಿಲುವಿಗೆ ಆಡಳಿತ ಪಕ್ಷಗಳು, ವಿಪಕ್ಷಗಳು ಹಾಗೂ ಸಾಂಸ್ಕೃತಿಕ ನಾಯಕರೂ ಸೇರಿದಂತೆ ರಾಜ್ಯ ವ್ಯಾಪಕವಾಗಿ ಭಾರೀ ಪ್ರತಿಭಟನೆಗೂ ದಾರಿ ಮಾಡಿಕೊಟ್ಟಿತ್ತು. ಈ ಮಧ್ಯೆ ಸಾಂಸ್ಕೃತಿಕ ರಂಗದ ನೇತಾರ ಸೂರ್ಯಕೃಷ್ಣಮೂರ್ತಿ ಅವರು ಕಲೋತ್ಸವ ರದ್ದುಪಡಿಸಿದ ಕ್ರಮದ ಸಮಂಜಸತೆ ಮತ್ತು ಅದು ಮಕ್ಕಳ ಮೇಲೆ ಬೀರಲಿರುವ ಪರಿಣಾಮಗಳ ಕುರಿತಾಗಿ ಪತ್ರಿಕೆಯೊಂದರಲ್ಲಿ ಲೇಖನವೊಂದನ್ನು ಬರೆದಿದ್ದರು.

Advertisement

ಚಿಕಿತ್ಸೆಯಲ್ಲಿರುವ ವೇಳೆಯಲ್ಲೂ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಆ ಲೇಖನವನ್ನು ಓದಿ ಅದರ ಗಂಭೀರತೆಯನ್ನು  ಮನಗಂಡು ಆ ಬಗ್ಗೆ  ರಾಜ್ಯ ಶಿಕ್ಷಣ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳನ್ನು ಅಮೇರಿಕಾದಿಂದ ಮೊಬೈಲ್‌ ಫೋನ್‌ ಮೂಲಕ ಸಂಪರ್ಕಿಸಿ ಅವರೊಂದಿಗೆ ಚರ್ಚಿಸಿದರು. ಅಲ್ಲದೆ ಕಲೋತ್ಸವ ರದ್ದು ಕ್ರಮ ಹಿಂತೆಗೆದುಕೊಳ್ಳುವಂತೆ ನಿರ್ದೇಶಿಸಿದರು. ಆ ಮೂಲಕ ಈ ವಿಚಾರದಲ್ಲಿ ತಲೆದೋರಿದ್ದ ಅನಿಶ್ಚಿತತೆಗೆ ಮುಖ್ಯಮಂತ್ರಿ ಕೊನೆಗೂ ತೆರೆ ಎಳೆದು ಕಲೋತ್ಸವ ನಡೆಸಲು ಹಸಿರು ನಿಶಾನೆತೋರಿದ್ದಾರೆ.

ಪ್ರತೀ ವರ್ಷದಂತೆ ಶಾಲಾ ಕಲೋತ್ಸವವನ್ನು ಅದ್ದೂರಿಯಾಗಿ ನಡೆಸುವುದನ್ನು ಹೊರತುಪಡಿಸಿ ವೆಚ್ಚ  ನಿಯಂತ್ರಿಸಿ ಅತ್ಯಂತ ಸರಳವಾಗಿ ನಡೆಸುವಂತೆಯೂ ಶಿಕ್ಷಣ ಇಲಾಖೆಗೆ ಮುಖ್ಯಮಂತ್ರಿ ತಿಳಿಸಿದ್ದಾರೆ. ಕಲೋತ್ಸವ ರದ್ದುಪಡಿಸಿದ್ದಲ್ಲಿ ಅದರಲ್ಲಿ  ಭಾಗವಹಿಸುವ ಮಕ್ಕಳಿಗೆ ಗ್ರೇಸ್‌ ಮಾರ್ಕ್‌ ನಷ್ಟಗೊಳ್ಳಲಿದೆ. ಅದಕ್ಕೆ ಆಸ್ಪದ ನೀಡದೆ ಸರಳ ರೀತಿಯಲ್ಲಾದರೂ ಕಲೋತ್ಸವ ನಡೆಸಬೇಕೆಂದು ಮುಖ್ಯಮಂತ್ರಿ ಸೂಚನೆ ನೀಡಿದರು. ಇದರಿಂದಾಗಿ ಶಾಲಾ ಕಲೋತ್ಸವ ವಿಷಯದಲ್ಲಿ ಉದ್ಭವಿಸಿದ್ದ ಗೊಂದಲ ಕೊನೆಗೂ ನಿವಾರಣೆಯಾದಂತಾಗಿದೆ. ಶಾಲಾ ಕಲೋತ್ಸವ ರದ್ದುಪಡಿಸಿ ರಾಜ್ಯ ಸಾರ್ವಜನಿಕ ಆಡಳಿತ ಇಲಾಖೆಯು ಹೊರಡಿಸಿರುವ ಆದೇಶವನ್ನು ಹಿಂಪಡೆದು ರಾಜ್ಯ ಸರಕಾರವು ಶೀಘ್ರದಲ್ಲೇ ಹೊಸ ಆದೇಶವನ್ನು  ಹೊರಡಿಸಲಿದೆ.

ಪ್ರವಾಹ ರಹಿತ ಜಿಲ್ಲೆಗಳು ಪರಿಗಣನೆಯಲ್ಲಿ : ಪ್ರಸಕ್ತ ಶೈಕ್ಷಣಿಕ ವರ್ಷದ ರಾಜ್ಯ ಮಟ್ಟದ ಶಾಲಾ ಕಲೋತ್ಸವಗಳು ಆಲಪ್ಪುಳದಲ್ಲಿ ನಡೆಸಲು ಶಿಕ್ಷಣ ಇಲಾಖೆಯು ಈ ಹಿಂದೆ ನಿರ್ಧಾರ ಕೈಗೊಂಡಿತ್ತು. ಆದರೆ ಆಲಪ್ಪುಳ ಜಿಲ್ಲೆಯು ಮಹಾಪ್ರವಾಹದಲ್ಲಿ ಸಿಲುಕಿದ ಹಿನ್ನೆಲೆಯಲ್ಲಿ ಅಲ್ಲಿ ನಡೆಸಲು ತೀರ್ಮಾನಿಸಿದ್ದ ರಾಜ್ಯ ಶಾಲಾ ಕಲೋತ್ಸವವನ್ನು ಕಾಸರಗೋಡು, ತಿರುವನಂತಪುರ ಸೇರಿದಂತೆ ಪ್ರವಾಹ ರಹಿತ ಜಿಲ್ಲೆಗಳಿಗೆ ಸ್ಥಳಾಂತರಿಸಲು ಶಿಕ್ಷಣ ಇಲಾಖೆಯು ಇದೀಗ ಆಲೋಚನೆ ನಡೆಸುತ್ತಿದೆ. ಮುಂದಿನ ಕೆಲವು ದಿನಗಳಲ್ಲಿ  ಈ ಕುರಿತು ಅಂತಿಮ ನಿರ್ಧಾರಕ್ಕೆ ಬರಲಾಗುವುದು ಎಂದು ಶಿಕ್ಷಣ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next