Advertisement

ಶಬರಿಮಲೆ ಧ್ವಜಸ್ತಂಭಕ್ಕೆ ರಾಸಾಯನಿಕ ಸುರಿದು ಹಾನಿ, ಮೂವರು ವಶಕ್ಕೆ

10:44 AM Jun 26, 2017 | Sharanya Alva |

ಶಬರಿಮಲೆ, ಜೂ. 25: ಲಕ್ಷಾಂತರ ಭಕ್ತರ ಶ್ರದ್ಧಾ ಕೇಂದ್ರ ವಾಗಿರುವ ಶಬರಿಮಲೆ ಅಯ್ಯಪ್ಪ ಕ್ಷೇತ್ರದ ಧ್ವಜಸ್ತಂಭಕ್ಕೆ ರವಿವಾರ ಹಾಡಹಗಲೇ ದುಷ್ಕರ್ಮಿಗಳು ಹಾನಿಯುಂಟು ಮಾಡಿರುವುದು ಆಘಾತದ ಅಲೆಯೆಬ್ಬಿಸಿದೆ. ಚಿನ್ನ ಹೊದಿಸಿದ ಧ್ವಜಸ್ತಂಭದ ಬುಡಕ್ಕೆ (ಪಂಚವರ್ಗತ್ತರ) ರಾಸಾಯನಿಕ ದ್ರಾವಣವನ್ನು ಸುರಿಯಲಾಗಿದ್ದು, ಇದರ ಪರಿಣಾಮವಾಗಿ ಬುಡದಲ್ಲಿರುವ ಚಿನ್ನದ ಹೊದಿಕೆ ಸುಟ್ಟು ಕಪ್ಪುಬಣ್ಣಕ್ಕೆ ತಿರುಗಿದೆ.

Advertisement

ಕೆಲವು ಮಂದಿ ಧ್ವಜಸ್ತಂಭದ ಬುಡಕ್ಕೆ ಬಾಟಲಿಯಿಂದ ಏನನ್ನೋ ಸುರಿಯುತ್ತಿರುವ ದೃಶ್ಯ ಶ್ರೀ ಕ್ಷೇತ್ರ ದಲ್ಲಿ ಅಳವಡಿಸಿರುವ ಸಿಸಿಟಿವಿಯಲ್ಲಿ ದಾಖಲಾಗಿದೆ. ಇದರ ಆಧಾರದಲ್ಲಿ 5 ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. 

ಬೆಳಗ್ಗೆ ಪ್ರತಿಷ್ಠೆ: ಕ್ಷೇತ್ರದ ಧ್ವಜಸ್ತಂಭವನ್ನು ಇತ್ತೀಚೆಗಷ್ಟೇ ಬದಲಾಯಿಸಲಾಗಿತ್ತು. ರವಿ ವಾರ ಬೆಳಗ್ಗೆ ಮುಖ್ಯ ಅರ್ಚಕ ಕಂಡರಾರು ರಾಜೀವರಾರು ಧ್ವಜಸ್ತಂಭದ ಪ್ರತಿಷ್ಠಾ  ವಿಧಿಯನ್ನು ನೆರವೇರಿಸಿದ್ದರು. ಮಧ್ಯಾಹ್ನದ ಬಳಿಕ ಧ್ವಜಸ್ತಂಭದ ಬುಡ ಸುಟ್ಟಿರುವುದು ಕಂಡು ಬಂದಿದೆ. ಪೂರ್ವಾಹ್ನ 11.50ಕ್ಕೆ ಪ್ರತಿಷ್ಠೆ ವಿಧಿವಿಧಾನಗಳು ಮುಗಿದು ಅನಂತರ ಮಧ್ಯಾಹ್ನದ ಪೂಜೆ ನೆರವೇರಿಸಲಾಗಿತ್ತು. 1.50ಕ್ಕೆ ಅರ್ಚಕರು, ಪೊಲೀಸರು ಮತ್ತು ದೇವಸ್ವಂ ಸಿಬಂದಿ ಹೋದ ಬಳಿಕ ದುಷ್ಕರ್ಮಿಗಳು ಧ್ವಜ ಸ್ತಂಭದ ಬುಡಕ್ಕೆ ರಾಸಾಯನಿಕ ದ್ರಾವಣ ಸುರಿದಿದ್ದು, ಇದು ಪಾದರಸ ವಾಗಿರಬಹುದೆಂದು ಶಂಕಿಸಲಾಗಿದೆ. ಹೆಚ್ಚಿನ ಪರೀಕ್ಷೆಗಾಗಿ ಅದರ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಶನಿವಾರವಷ್ಟೇ ಧ್ವಜಸ್ತಂಭಕ್ಕೆ ಚಿನ್ನ ಹೊದಿಸುವ ಕೆಲಸವನ್ನು ಪೂರ್ತಿ ಗೊಳಿಸಲಾಗಿತ್ತು. 9.16 ಕೆ.ಜಿ. ಚಿನ್ನ, 300 ಕೆ.ಜಿ. ತಾಮ್ರ ಮತ್ತು 17 ಕೆ.ಜಿ. ಬೆಳ್ಳಿಯನ್ನು ಬಳಸಿ ಹೊದಿಕೆ ತಯಾರಿಸಲಾಗಿದೆ.

ಕೆಎಸ್‌ಆರ್‌ಟಿಸಿ ಸಿಬಂದಿ ನೀಡಿದ ಸುಳಿವು: ಪಂಪೆಯ ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ಐದು ಮಂದಿ ಸಂಶಯಾಸ್ಪದವಾಗಿ ಓಡಾಡುತ್ತಿರುವುದನ್ನು ನೋಡಿ ಸಿಬಂದಿ ತತ್‌ಕ್ಷಣ ಪಂಪಾ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದರು. ಪೊಲೀಸರು ಬಂದು ಅವರನ್ನು ವಶಕ್ಕೆ ತೆಗೆದುಕೊಂಡು ಪ್ರಶ್ನಿಸಿದಾಗ ಧ್ವಜಸ್ತಂಭಕ್ಕೆ ರಾಸಾಯನಿಕ ದ್ರಾವಣ ಸುರಿದಿರುವ ವಿಷಯ ತಿಳಿದು ಬಂದಿದೆ. 

ಸೆರೆಯಾಗಿರುವವರ ಚಹರೆ ಸಿಸಿಟಿವಿಯಲ್ಲಿ  ದಾಖಲಾದವರ ಚಹರೆಗೆ ಹೋಲಿಕೆಯಾಗುತ್ತಿತ್ತು. ಐವರು ಧ್ವಜಸ್ತಂಭಕ್ಕೆ ಬಾಟಲಿಯಿಂದ ಏನೋ ದ್ರಾವಣ ಸುರಿಯುತ್ತಿರುವ ದೃಶ್ಯ ಸಿಸಿಟಿವಿ ಕೆಮರಾದಲ್ಲಿದೆ. ಇವರೆಲ್ಲ ಆಂಧ್ರ ಪ್ರದೇಶದ ವಿಜಯವಾಡ ಜಿಲ್ಲೆಯವರು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಯಾವ ಉದ್ದೇಶಕ್ಕಾಗಿ ದ್ರಾವಣ ಸುರಿದಿದ್ದಾರೆ ಎಂದು ಇನ್ನೂ ತಿಳಿದು ಬಂದಿಲ್ಲ. ಧ್ವಜಸ್ತಂಭ ಸ್ಥಾಪನೆ ವಿಚಾರವಾಗಿ ಕೂಡ ಕೆಲವೊಂದು ಭಿನ್ನಾಭಿಪ್ರಾಯಗಳಿದ್ದವು. ಈ ಹಿನ್ನೆಲೆಯಲ್ಲೂ ಪ್ರಕರಣವನ್ನು ಪರಿಶೀಲಿಸಲಾಗು ತ್ತಿದೆ. ಹೆಚ್ಚಿನ ಪರೀಕ್ಷೆಗಾಗಿ ವಿಧಿವಿಜ್ಞಾನ ತಜ್ಞರನ್ನು ಸನ್ನಿಧಾನಕ್ಕೆ ಕರೆಸಲಾಗಿದೆ.

Advertisement

ಉದ್ದೇಶಪೂರ್ವಕ ಕೃತ್ಯ: ಧ್ವಜಸ್ತಂಭದ ಬುಡಕ್ಕೆ ರಾಸಾಯನಿಕ ದ್ರಾವಣ ಸುರಿದಿರುವುದು ಉದ್ದೇಶಪೂರ್ವಕ ಕೃತ್ಯ ಎಂದು ಸ್ಥಳಕ್ಕೆ ಭೇಟಿ ನೀಡಿರುವ ದೇವಸ್ವಂ (ಮುಜರಾಯಿ) ಸಚಿವ ಕಡಕಂಪಳ್ಳಿ ಸುರೇಂದ್ರನ್‌ ಹೇಳಿದ್ದಾರೆ. ಕೃತ್ಯದ ಹಿಂದಿನ ಷಡ್ಯಂತ್ರವನ್ನು ಬಯಲಿಗೆಳೆದು ತಪ್ಪಿತಸ್ಥರಿಗೆ ಕಠಿನ ಶಿಕ್ಷೆ ವಿಧಿಸಲು ಬದ್ಧರಾಗಿದ್ದೇವೆ. ಧ್ವಜಸ್ತಂಭದ ಬಳಿ ಸಿಕ್ಕಿರುವ ಬಾಟಲಿಯಲ್ಲಿರುವ ದ್ರಾವಣವನ್ನು ಹೆಚ್ಚಿನ ಪರೀಕ್ಷೆಗೊಳಪಡಿಸಲು ಸೂಚಿಸಿದ್ದೇನೆ.ಕ್ಷೇತ್ರದ ಕಾವಲನ್ನು ಇನ್ನಷ್ಟು ಬಿಗುಪಡಿಸಲು ಸೂಚಿಸಿದ್ದೇನೆ ಎಂದಿದ್ದಾರೆ. ಪಾದರಸದಲ್ಲಿ ಅದ್ದಿದ ಬಟ್ಟೆಯನ್ನು ಧ್ವಜಸ್ತಂಭದ ಬುಡಕ್ಕೆ ಎಸೆದಿರುವ ಸಾಧ್ಯತೆಯೂ ಇದೆ. ಯಾವುದೋ ಪ್ರತೀಕಾರ ಭಾವನೆಯಿಂದ ಈ ಕೃತ್ಯ ಎಸಗಿರುವಂತೆ ಕಂಡು
ಬರುತ್ತಿದೆ ಎಂದು ತಿಳಿಸಿದ್ದಾರೆ.

ದೇವಸ್ವಂ ಮಂಡಳಿ ಅಧ್ಯಕ್ಷ ಪ್ರಯರ್‌ ಗೋಪಾಲ ಕೃಷ್ಣನ್‌ ರಾಜ್ಯ ಪೊಲೀಸ್‌ ವರಿಷ್ಠಾಧಿಕಾರಿಯನ್ನು ಭೇಟಿಯಾಗಿ ಪ್ರಕರಣದ ಸಮಗ್ರ ತನಿಖೆ ತನಿಖೆ ನಡೆಸಲು ಒತ್ತಾಯಿಸಿದ್ದಾರೆ. ಇದೇ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಸಮಗ್ರ ತನಿಖೆ ನಡೆಸಲು ಪೊಲೀಸರಿಗೆ ಸೂಚಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next