Advertisement
ಕೇರಳ ಆರೋಗ್ಯ ಇಲಾಖೆ ನಿಫಾ ವೈರಸ್ ತಗಲಿದ್ದ ಬಾಲಕನ ಸಂಪರ್ಕಕ್ಕೆ ಬಂದಿದ್ದವರ ಪತ್ತೆ ಕಾರ್ಯ ನಡೆಸುತ್ತಿದ್ದು ರಾಜ್ಯ ಆರೋಗ್ಯ ಇಲಾಖೆಯ ಈವರೆಗಿನ ಲೆಕ್ಕಾಚಾರದ ಪ್ರಕಾರ 350 ಮಂದಿ ಆತನ ಸಂಪರ್ಕಕ್ಕೆ ಬಂದಿದ್ದಾರೆ. ಈ ಪೈಕಿ 68 ಮಂದಿ ಆರೋಗ್ಯ ಸಿಬಂದಿ ಸಹಿತ 101 ಮಂದಿಯನ್ನು ಗಂಭೀರ ಎಂದು ಗುರುತಿಸಲಾಗಿದೆ. ಸದ್ಯ ರಾಜ್ಯದಲ್ಲಿ ಆರು ಮಂದಿಗೆ ನಿಫಾ ಸೋಂಕು ತಗಲಿರುವುದು ದೃಢಪಟ್ಟಿದೆ. ರಾಜ್ಯದಲ್ಲಿ ನಿಫಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಕೇರಳ ಸರಕಾರ ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಆರೋಗ್ಯ ಮಾರ್ಗಸೂಚಿಯನ್ನು ರವಾನಿಸಿದ್ದು, ಕಟ್ಟೆಚ್ಚರ ವಹಿಸುವಂತೆ ನಿರ್ದೇಶನ ನೀಡಿದೆ. ಯಾವುದೇ ಸಂಭಾವ್ಯ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿರುವಂತೆ ವೈದ್ಯಾಧಿಕಾರಿಗಳಿಗೆ ಆರೋಗ್ಯ ಸಚಿವರು ಸೂಚನೆ ನೀಡಿದ್ದಾರೆ. ಬಾವಲಿ ತಿಂದ ಹಣ್ಣನ್ನು ಸೇವಿಸಿದ ಪರಿಣಾಮ ಬಾಲಕನಿಗೆ ನಿಫಾ ವೈರಸ್ ಹರಡಿರುವುದು ಪ್ರಾಥಮಿಕ ಪರಿಶೀಲನೆ ವೇಳೆ ಕಂಡುಬಂದಿದೆ. ಇಷ್ಟು ಮಾತ್ರವಲ್ಲದೆ ಬಾವಲಿ ಮತ್ತು ಹಂದಿಗಳು ಹೆಚ್ಚಿರುವ ಪ್ರದೇಶದಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸರಕಾರ ಇದೇ ವೇಳೆ ಸಾರ್ವಜನಿಕರಿಗೆ ಕಿವಿಮಾತು ಹೇಳಿದೆ.
ನೆರೆಯ ರಾಜ್ಯದಲ್ಲಿ ಕಾಣಿಸಿಕೊಂಡಿರುವ ವೈರಾಣು ಕರ್ನಾಟಕಕ್ಕೂ ಹರಡುವ ಸಾಧ್ಯತೆಗಳಿರುವುದರಿಂದ ಸರಕಾರ ಹೆಚ್ಚಿನ ಮುಂಜಾಗರೂಕತೆ ವಹಿಸಬೇಕಿದೆ. ನಿಫಾ ವೈರಸ್‌ನ ಹರಡುವಿಕೆಗೆ ಕಾರಣವಾಗುವ ಬಾವಲಿಗಳು ಮತ್ತು ಹಂದಿಗಳು ಅಧಿಕವಾಗಿರುವ ಸ್ಥಳಗಳಲ್ಲಿ ಮತ್ತು ಹಣ್ಣುಗಳ ಸೇವನೆ ಸಂದರ್ಭದಲ್ಲಿಯೂ ಜನರು ಮುನ್ನೆಚ್ಚರಿಕೆ ವಹಿಸಬೇಕು. ಇದೇ ವೇಳೆ ರಾಜ್ಯ ಸರಕಾರ ಗಡಿ ಜಿಲ್ಲೆಗಳಲ್ಲಿ ತೀವ್ರ ನಿಗಾ ಇಡುವ ಜತೆಯಲ್ಲಿ, ಜನರ ಆರೋಗ್ಯ ರಕ್ಷಣೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಯಾವುದೇ ತುರ್ತು ಸ್ಥಿತಿ ಎದುರಿಸಲು ಅಗತ್ಯವಾದ ವೈದ್ಯಕೀಯ ಸಿದ್ಧತೆಗಳನ್ನು ಆರೋಗ್ಯ ಇಲಾಖೆ ಮಾಡಿಕೊಳ್ಳಬೇಕು.