Advertisement

ಕೇರಳ ಮಾದರಿ ಪ್ಯಾಕೇಜ್‌ : ಕೃಷಿಕರ ಬೇಡಿಕೆಗೆ ಕೊನೆಗೂ ಮಣೆ

12:30 AM Feb 22, 2019 | Team Udayavani |

ಮಂಗಳೂರು: ಭತ್ತದ ಬೆಳೆಗೆ ಕೇರಳ ಮಾದರಿಯಲ್ಲಿ ಪ್ರೋತ್ಸಾಹ ಪ್ಯಾಕೇಜ್‌ ನೀಡಬೇಕು ಎಂಬ ಕೃಷಿಕರ ಹಲವು ವರ್ಷಗಳ ಬೇಡಿಕೆಗೆ ಈ ಬಾರಿಯ ಬಜೆಟ್‌ನಲ್ಲಿ ಸ್ಪಂದನೆ ದೊರಕಿದೆ. 

Advertisement

ಕರಾವಳಿ ಹಾಗೂ ಮಲೆನಾಡು ಪ್ರದೇಶದಲ್ಲಿ ಭತ್ತದ ಬೆಳೆಗೆ ಹೆಕ್ಟೇರ್‌ಗೆ 7500 ರೂ. ಪೋತ್ಸಾಹ ಧನ ಘೋಷಿಸುವ ಮೂಲಕ ರೈತರ ಬೇಡಿಕೆಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಸ್ಪಂದಿಸಿದ್ದಾರೆ.ಸರಕಾರದ ಈ ಉತ್ತೇಜನಕಾರಿ ಕ್ರಮದಿಂದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಭತ್ತ ಬೆಳೆಯುವ ಸುಮಾರು 90,000 ಕೃಷಿಕರಿಗೆ ಪ್ರಯೋಜನವಾಗಲಿದೆ ಎಂದು ಅಂದಾಜಿಸಲಾಗಿದೆ. 

ಸರಕಾರದ ಕ್ರಮವನ್ನು ರೈತಾಪಿ ವರ್ಗ ಸ್ವಾಗತಿಸುವುದರ ಜತೆಗೆ ಪ್ರಸ್ತುತ ಉತ್ಪಾದನಾ ವೆಚ್ಚದಲ್ಲಿ ಭಾರಿ ಏರಿಕೆಯಾಗಿರುವುದರಿಂದ ಪ್ರೋತ್ಸಾಹ ಧನವನ್ನು ಹೆಕ್ಟೇರ್‌ ಕನಿಷ್ಠ 10 ಸಾವಿರ ರೂ.ವರೆಗೆ ನೀಡಿದ್ದರೆ ಭತ್ತದ ಕೃಷಿಗೆ ಹೆಚ್ಚಿನ ಉತ್ತೇಜನವಾಗುತ್ತಿತ್ತು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. 

ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ , ಸೂಕ್ತ ಬೆಲೆಯ ಕೊರತೆ, ಕೃಷಿ ಕೂಲಿ ಕಾರ್ಮಿಕರ ಸಮಸ್ಯೆಯಿಂದ ಭತ್ತದ ಬೆಳೆಯಲ್ಲಿ ರೈತರಿಗೆ ಹೆಚ್ಚು ಲಾಭದಾಯಕವಲ್ಲದ ಪರಿಸ್ಥಿತಿ ಇದ್ದು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ರೈತರು ಭತ್ತದ ಬೆಳೆಯಿಂದ ವಿಮುಖರಾಗುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಕೇರಳ ರಾಜ್ಯದಲ್ಲಿ ನೀಡುತ್ತಿರುವಂತೆ ಕರ್ನಾಟಕದಲ್ಲೂ ಕರಾವಳಿ/ ಮಲೆನಾಡು ಜಿಲ್ಲೆಗಳಲ್ಲಿ ಭತ್ತ ಬೆಳೆಯುವ ರೈತರಿಗೆ ಹೆಕ್ಟೇರ್‌ಗೆ 7500 ರೂ. ಪೋತ್ಸಾಹಧನ ನೀಡಬಹುದಾಗಿದೆ ಎಂದು ಕರ್ನಾಟಕ ಸರಕಾರ 2015 ರಲ್ಲಿ ನೇಮಿಸಿದ್ದ ಅಧ್ಯಯನ ತಂಡ ಕೇರಳದ ಕಾಸರಗೋಡು ಹಾಗೂ ಕಣ್ಣೂರು ಜಿಲ್ಲೆಗಳಲ್ಲಿ ಅಧ್ಯಯನ ಮಾಡಿ 2016 ರಲ್ಲಿ ವರದಿ ಸಲ್ಲಿಸಿತ್ತು. ಇದರ ಆಧಾರದಲ್ಲಿ ಕೃಷಿ ಬೆಲೆ ಆಯೋಗ ಕೂಡಾ ಸರಕಾರಕ್ಕೆ ಶಿಫಾರಸ್ಸು ಮಾಡಿತ್ತು.
 
ಆರು ವರ್ಷಗಳಲ್ಲಿ 14,000 ಹೆ.ಇಳಿಕೆ
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲೆಯಲ್ಲಿ ಕಳೆದ 6 ವರ್ಷಗಳಲ್ಲಿ ಭತ್ತ ಬೆಳೆಯುವ ಪ್ರದೇಶದಲ್ಲಿ 14,000 ಹೆಕ್ಟೇರ್‌ ಇಳಿಕೆಯಾಗಿದೆ. ಆರು ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 34,000 ಹೆಕ್ಟೇರ್‌ನಲ್ಲಿ ಭತ್ತ ಬೆಳೆಯಲಾಗುತ್ತಿತ್ತು. 2018-19 ನೇ ಸಾಲಿಗೆ ಇದು 28,000 ಹೆಕ್ಟೇರ್‌ಗೆ ಕುಸಿದಿದ್ದು ಸುಮಾರು 6,000 ಹೆಕ್ಟೇರ್‌ ಪ್ರದೇಶದಿಂದ ಭತ್ತದ ಬೆಳೆ ಕಣ್ಮರೆಯಾಗಿದೆ. 

ಉಡುಪಿ ಜಿಲ್ಲೆಯಲ್ಲಿ ಕಳೆದ 8 ವರ್ಷಗಳಲ್ಲಿ 8 ಸಾವಿರ ಹೆಕ್ಟೇರ್‌ ಭತ್ತದ ಬೆಳೆ ಕುಸಿತವಾಗಿದೆ. 2007-08ರಲ್ಲಿ 51,350 ಹೆಕ್ಟೇರ್‌ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿತ್ತು. 2018-19 ನೇ ಸಾಲಿನಲ್ಲಿ 44,000 ಹೆಕ್ಟೇರ್‌ ಪ್ರದೇಶಕ್ಕೆ ಇಳಿಕೆಯಾಗಿದೆ. ಭತ್ತದ ಬೆಳೆ ಪ್ರಮಾಣ ಕುಸಿಯುತ್ತಿರುವ ಈ ಸಂಕೀರ್ಣ ಕಾಲಘಟ್ಟದಲ್ಲಿ ಉತ್ತೇಜನಕಾರಿ ಕ್ರಮಗಳು ಸರಕಾರದಿಂದ ಜಾರಿಯಾಗಬೇಕು ಎಂಬ ಬೇಡಿಕೆ ರೈತರಿಂದ ನಿರಂತರ ಮಂಡನೆಯಾಗುತ್ತಲೆ ಬಂದಿತ್ತು. ತಜ್ಞರು ಕೂಡಾ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು. 

Advertisement

ಉತ್ತೇಜನಕಾರಿ 
ಪ್ರಸ್ತುತ ಒಂದು ಕ್ವಿಂಟಾಲ್‌ ಭತ್ತ ಬೆಳೆಯಲು 1780 ರೂ, ಉತ್ಪಾದನಾ ವೆಚ್ಚ ತಗುಲುತ್ತದೆ ಎಂದು ಅಂದಾಜಿಸಲಾಗಿದೆ. 1 ಎಕ್ರೆ ಭತ್ತ ಕೃಷಿ ಮಾಡಲು ಕನಿಷ್ಠ 25,000 ರೂ. ಬೇಕಾಗುತ್ತದೆ. ಈಗಾಗಲೇ ಯಂತ್ರದ ಮೂಲಕ ಬೀಜ ಬಿತ್ತನೆಗೆ, ನಾಟಿಯಂತ್ರ ಬಳಕೆ, ಯಂತ್ರದ ಮೂಲಕ ಕಟಾವಿಗೆ ಸರಕಾರ ನೆರವು ನೀಡುತ್ತಿದೆ. ಇದೀಗ ಹೆಕ್ಟೇರ್‌ಗೆ 7500 ರೂ. ( ಎಕರೆಗೆ 3000 ) ರೂ. ಪೋತ್ಸಾಹ ಧನ ರೈತನಿಗೆ ಸಹಕಾರಿಯಾಗಲಿದೆ ಎಂಬುದು ರೈತರ ಅಭಿಪ್ರಾಯವಾಗಿದೆ.

ಉತ್ತಮ ಕ್ರಮ
ಯುವಜನರನ್ನು ಭತ್ತದ ಕೃಷಿಗೆ ಆಕರ್ಷಿಸುವ ನಿಟ್ಟಿನಲ್ಲಿ ಸರಕಾರದಿಂದ ಪ್ರೋತ್ಸಾಹಕ ಕ್ರಮಗಳು ಅಗತ್ಯವಿದೆ. ಪ್ರಸ್ತುತ ಸರಕಾರ ಹೆಕ್ಟೇರ್‌ಗೆ 7500 ರೂ. ಪ್ರೋತ್ಸಾಹಧನ ಘೋಷಿಸಿರುವುದು ಉತ್ತಮ ಬೆಳವಣಿಗೆ. ರೈತರು ಕಚೇರಿಗಳಿಗೆ ಅಲೆದಾಡಿಸದೆ ಗ್ರಾಮ ಪಂಚಾಯತ್‌ ಮೂಲಕ ಮಾಹಿತಿ ಸಂಗ್ರಹಿಸಿ ರೈತರ ಖಾತೆಗಳಿಗೆ ಲಭ್ಯವಾಗುವಂತೆ ಮಾಡಬೇಕು. 
– ಸಂಜೀವ ಸಪಲಿಗ, ಎಡಪದವು, ಪ್ರಗತಿಪರ ಕೃಷಿಕರು

ಉತ್ತೇಜನಕಾರಿ
ಸರಕಾರ ಬಜೆಟ್‌ನಲ್ಲಿ ಭತ್ತದ ಬೆಳೆಗೆ ಹೆಕ್ಟೇರ್‌ಗೆ 7500 ರೂ. ಪ್ರೋತ್ಸಾಹ ಧನ ಘೋಷಣೆ ಮಾಡಿರುವುದು ಒಳ್ಳೆಯ ಕ್ರಮ. ಒಂದು ಕಿಂಟ್ವಾಲ್‌ ಭತ್ತ ಬೆಳೆಯಲು ಸುಮಾರು 1700 ರೂ.ವರೆಗೆ ಉತ್ಪಾದನಾ ವೆಚ್ಚ ತಗಲುತ್ತದೆ. 1650 ರೂ. ಬೆಂಬಲ ಬೆಲೆ ಪ್ರಸ್ತಾವನೆಯಲ್ಲೇ ಇದೆ. ಈ ಹಂತದಲ್ಲಿ ಸರಕಾರದಿಂದ ಉತ್ತೇಜನಕಾರಿ ಕ್ರಮಗಳು ಅಗತ್ಯ. ಪ್ರೋತ್ಸಾಹ ಹಣವನ್ನು ನೇರವಾಗಿ ರೈತರ ಖಾತೆಗೆ ಸಕಾಲದಲ್ಲಿ ಜಮೆ ಮಾಡಿದರೆ ರೈತರಿಗೆ ಪ್ರಯೋಜನವಾಗಲಿದೆ.
– ನವೀನ್‌ ಪ್ರಭು, 
ಅತಿಕಾರಿಬೆಟ್ಟು, ಪ್ರಗತಿಪರ ಕೃಷಿಕರು

– ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next