ಕೋಯಿಕ್ಕೋಡ್: ರೈಲು ಪ್ರಯಾಣಿಕರ ನಡುವೆ ಜಗಳವಾಗಿ ಓರ್ವ ಮತ್ತೋರ್ವನಿಗೆ ಬೆಂಕಿ ಹಚ್ಚಿದ ಘಟನೆ ಭಾನುವಾರ ಆಲಪ್ಪುಳ-ಕಣ್ಣೂರು ಎಕ್ಸಿಕ್ಯುಟಿವ್ ಎಕ್ಸ್‌ಪ್ರೆಸ್ ರೈಲಿನಲ್ಲಿ ನಡೆದಿದೆ. ಘಟನೆಯಲ್ಲಿ ಮೂವರಿಗೆ ಸುಟ್ಟ ಗಾಯಗಳಾಗಿವೆ.
ರಾತ್ರಿ 9.45 ರ ಸುಮಾರಿಗೆ ರೈಲು ಕೇರಳದ ಕೋಯಿಕ್ಕೋಡ್ ನಗರವನ್ನು ದಾಟಿದ ನಂತರ ಕೊರಪುಳ ರೈಲ್ವೆ ಸೇತುವೆಯನ್ನು ತಲುಪಿದಾಗ ಈ ಘಟನೆ ಸಂಭವಿಸಿದೆ ಎಂದು ಪಿಟಿಐ ವರದಿ ಮಾಡಿದೆ.
ರೈಲ್ವೇ ಮೂಲಗಳ ಪ್ರಕಾರ, ಪ್ರಯಾಣಿಕರು ತುರ್ತು ಸರಪಳಿಯನ್ನು ಎಳೆದ ನಂತರ ರೈಲು ನಿಧಾನಗೊಂಡಾಗ ಬೆಂಕಿ ಹಚ್ಚಿದ ವ್ಯಕ್ತಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ರೈಲ್ವೇ ರಕ್ಷಣಾ ಪಡೆಗೆ (ಆರ್‌ಪಿಎಫ್) ಮಾಹಿತಿ ನೀಡಿದ ಇತರ ಪ್ರಯಾಣಿಕರು ಬೇಗನೆ ಬೆಂಕಿಯನ್ನು ನಂದಿಸಿದ್ದಾರೆ.
ಇದನ್ನೂ ಓದಿ:ಐಪಿಎಲ್ 2023: ಭರ್ಜರಿ ಅರ್ಧಶತಕದೊಂದಿಗೆ ಹೊಸ ದಾಖಲೆ ಬರೆದ ವಿರಾಟ್ ಕೊಹ್ಲಿ
ಘಟನೆಯಲ್ಲಿ ಸುಟ್ಟು ಗಾಯಗೊಂಡವರನ್ನು ಆರ್ ಪಿಎಫ್ ಆಸ್ಪತ್ರೆಗೆ ರವಾನಿಸಲಾಗಿದೆ. ಅಗತ್ಯ ತಪಾಸಣೆಯ ನಂತರ ರೈಲು ತನ್ನ ಪ್ರಯಾಣವನ್ನು ಮುಂದುವರಿಸಲು ಸಾಧ್ಯವಾಯಿತು.
ಆರಂಭಿಕ ವರದಿಗಳ ಪ್ರಕಾರ, ಇಬ್ಬರು ಪ್ರಯಾಣಿಕರ ನಡುವೆ ವಾಗ್ವಾದದ ನಂತರ ಘಟನೆ ಸಂಭವಿಸಿದೆ. ಈ ಬಗ್ಗೆ ಕೋಯಿಕ್ಕೋಡ್ ನಗರ ಪೊಲೀಸರು ಮತ್ತು ರೈಲ್ವೇ ರಕ್ಷಣಾ ಪಡೆ ತನಿಖೆ ಆರಂಭಿಸಿದೆ.