ತಿರುವನಂತಪುರಂ: ಲಾಕ್ ಡೌನ್ ಹಿನ್ನೆಲೆಯಲ್ಲಿ ಅನಾರೋಗ್ಯ ಪೀಡಿತ ತಂದೆ ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆದ ಹಿನ್ನೆಲೆಯಲ್ಲಿ ಆಟೋ ರಿಕ್ಷಾದಲ್ಲಿ ಕರೆದೊಯ್ಯುತ್ತಿದ್ದ ವೇಳೆ ಪೊಲೀಸ್ ಮಧ್ಯದಾರಿಯಲ್ಲಿಯೇ ತಡೆದು ನಿಲ್ಲಿಸಿದ ಪರಿಣಾಮ ತಂದೆಯನ್ನು ಹೊತ್ತುಕೊಂಡು ಸಾಗಿದ ಘಟನೆ ಕೇರಳ ನಡೆದಿದ್ದು, ಈ ವಿಡಿಯೋ ಇದೀಗ ವೈರಲ್ ಆಗಿದೆ.
ಬುಧವಾರ ತಂದೆ ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆದ ನಂತರ ಆಟೋ ರಿಕ್ಷಾದಲ್ಲಿ ಮನೆಗೆ ಕರೆದೊಯ್ಯುತ್ತಿದ್ದ ಸಂದರ್ಭದಲ್ಲಿ ಪೊಲೀಸ್ ದಾರಿಮಧ್ಯೆಯೇ ಅಡ್ಡಗಟ್ಟಿ ನಿಲ್ಲಿಸಿದ್ದರು. ಆಸ್ಪತ್ರೆ ದಾಖಲೆ ತೋರಿಸಿದರೂ ಕೂಡಾ ಪೊಲೀಸ್ ಆಟೋ ರಿಕ್ಷಾ ಹೋಗಲು ಅವಕಾಶ ಕೊಡಲಿಲ್ಲ ಎಂದು ವರದಿ ವಿವರಿಸಿದೆ.
65 ವರ್ಷದ ಕುಲಾಥುಪುಝಾ ನಿವಾಸಿಯನ್ನು ಪುನಾಲುರ್ ತಾಲೂಕು ಆಸ್ಪತ್ರೆಯಿಂದ ಡಿಸ್ ಚಾರ್ಜ್ ಮಾಡಲಾಗಿತ್ತು. ಆಟೋ ಹೋಗಲು ಅವಕಾಶ ಕೊಡದ ಹಿನ್ನೆಲೆಯಲ್ಲಿ ಮಗ ಬರೀ ಮೈಯಲ್ಲಿದ್ದ ತಂದೆಯನ್ನು ಎತ್ತಿಕೊಂಡು ಹೋಗುತ್ತಿದ್ದು, ಆತನ ಹಿಂದೆ ಮಹಿಳೆಯೊಬ್ಬರು ಆಸ್ಪತ್ರೆಯ ದಾಖಲೆ, ಬಟ್ಟೆಗಳನ್ನು ಹಿಡಿದುಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ. ಇದೀಗ ಕೇರಳ ಮಾನವ ಹಕ್ಕು ಆಯೋಗ ಸ್ವಯಂ ಆಗಿ ಪ್ರಕರಣ ದಾಖಲಿಸಿಕೊಂಡಿದೆ ಎಂದು ವರದಿ ತಿಳಿಸಿದೆ.
ಕೋವಿಡ್ 19 ತಡೆಗಟ್ಟುವ ನಿಟ್ಟಿನಲ್ಲಿ ಮೇ 3ರವರೆಗೆ ದೇಶಾದ್ಯಂತ ಲಾಕ್ ಡೌನ್ ವಿಸ್ತರಿಸಲಾಗಿದೆ. ಆದರೆ ಮೆಡಿಕಲ್ ತುರ್ತು ಸೇರಿದಂತೆ ಅಗತ್ಯ ವಸ್ತುಗಳಿಗೆ ವಿನಾಯ್ತಿ ನೀಡಬೇಕಾಗಿದೆ. ಆದರೆ ಈ ಪ್ರಕರಣದಲ್ಲಿ ಪೊಲೀಸ್ ಹೇಳಿಕೆ ಪ್ರಕಾರ, ಆಟೋ ರಿಕ್ಷಾ ನಿಲ್ಲಿಸಿದ ವೇಳೆ ಅದರೊಳಗೆ ರೋಗಿ ಇಲ್ಲ. ಈ ವೇಳೆ ಡಿಕ್ಲರೇಷನ್ ದಾಖಲೆ ತೋರಿಸುವಂತೆ ಕೇಳಲಾಗಿತ್ತು. ನಂತರ ಈತ ರಿಕ್ಷಾದಿಂದ ಕೆಳಗಿಳಿದು 200 ಮೀಟರ್ ದೂರದಲ್ಲಿರುವ ಆಸ್ಪತ್ರೆಗೆ ಹೋಗಿ ವಾಪಸ್ ಬರುವಾಗ ತಂದೆಯನ್ನು ಕೈಯಲ್ಲಿ ಹೊತ್ತು ತಂದಿರುವುದಾಗಿ ತಿಳಿಸಿದ್ದಾರೆ.