ನವದೆಹಲಿ: ಕೋವಿಡ್ 19 ವೈರಸ್ ಪ್ರಕರಣಗಳು ಜಗತ್ತಿನಾದ್ಯಂತ ವೇಗವಾಗಿ ಹರಡುತ್ತಿದ್ದು, ಸಾವಿನ ಪ್ರಮಾಣವೂ ದಿನಂಪ್ರತಿ ಏರಿಕೆಯಾಗುತ್ತಿದೆ. ಈ ಮಾರಕ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಿಸಲಾಗಿದೆ. ಅಗತ್ಯ ವಸ್ತುಗಳು ಮಾತ್ರ ಲಭ್ಯವಿದ್ದು, ಉಳಿದೆಲ್ಲವೂ ಸ್ತಬ್ಧವಾಗಿದೆ.
ದೇಶದಲ್ಲಿ ಕೇರಳ ಮತ್ತು ಮಹಾರಾಷ್ಟ್ರ ಕೋವಿಡ್ 19 ವೈರಸ್ ನ ಹಾಟ್ ಸ್ಪಾಟ್ ಆಗಿದೆ. ಕೇರಳದಲ್ಲಿ 234 ಪ್ರಕರಣಗಳು, ಮಹಾರಾಷ್ಟ್ರದಲ್ಲಿ 216. ದೆಹಲಿ 97, ಕರ್ನಾಟಕದಲ್ಲಿ 83 ಪ್ರಕರಣಗಳು ದಾಖಲಾಗಿವೆ. ನಂತರ ತೆಲಂಗಾಣ 79, ರಾಜಸ್ಥಾನ 74, ತಮಿಳುನಾಡು 74, ಗುಜರಾತ್ 73 ಪ್ರಕರಣ ದಾಖಲಾಗಿದೆ.
ದೇಶದಲ್ಲಿ ಮೊದಲ ಕೋವಿಡ್ 19 ಪ್ರಕರಣ ಪತ್ತೆಯಾಗಿದ್ದು ಕೇರಳದ ತ್ರಿಶ್ಶೂರ್ ಜಿಲ್ಲೆಯಲ್ಲಿ ಜನವರಿ 30ರಂದು. ಫೆಬ್ರವರಿ 3ರಂದು ಕೋವಿಡ್ 19 ವೈರಸ್ ನ ಮೂರು ಪ್ರಕರಣಗಳು ದೃಢಪಟ್ಟಿದ್ದವು. ಸುಮಾರು ಒಂದು ತಿಂಗಳ ಕಾಲ ದೇಶದಲ್ಲಿ ಯಾವುದೇ ಹೊಸ ಪ್ರಕರಣಗಳು ಪತ್ತೆಯಾಗಿಲ್ಲವಾಗಿತ್ತು. ಮಾರ್ಚ್ 2ರಂದು ದಿಲ್ಲಿ ಹಾಗೂ ಹೈದರಾಬಾದ್ ನಲ್ಲಿ ತಲಾ ಒಂದೊಂದು ಪ್ರಕರಣ ಪತ್ತೆಯಾಗಿತ್ತು. ಇಬ್ಬರ ಟ್ರಾವೆಲ್ ಹಿಸ್ಟರಿ ಪ್ರಕಾರ ವಿದೇಶದಿಂದ ಬಂದವರಾಗಿದ್ದರು ಎಂದು ವರದಿ ತಿಳಿಸಿದೆ.
ಮೊದಲ 50 ಕೋವಿಡ್ 19 ಪ್ರಕರಣಗಳು ವರದಿಯಾಗಿದ್ದು, ಕೇರಳ, ತಮಿಳುನಾಡು, ತೆಲಂಗಾಣ, ಕರ್ನಾಟಕ, ಮಹಾರಾಷ್ಟ್ರ, ಉತ್ತರಪ್ರದೇಶ, ದಿಲ್ಲಿ, ಹರ್ಯಾಣ, ರಾಜಸ್ಥಾನ, ಪಂಜಾಬ್, ಜಮ್ಮು ಕಾಶ್ಮೀರ ಮತ್ತು ಲಡಾಖ್ ಪ್ರದೇಶಗಳಿಂದ ಎಂದು ವರದಿ ತಿಳಿಸಿದೆ.
ದೇಶದಲ್ಲಿ ಕೋವಿಡ್ 19 ಪ್ರಕರಣಗಳು ಬೆಳಕಿಗೆ ಬರುತ್ತಿರುವ ನಡುವೆಯೇ ಕೆಲವು ಒಳ್ಳೆ ಸುದ್ದಿಗಳು ಬರತೊಡಗಿದ್ದವು. ಕೆಲವು ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಿ ಐಸೋಲೇಶನ್ ನಲ್ಲಿ ಇಡಲಾಗಿತ್ತು. ನಂತರ ಅವರು ಗುಣಮುಖರಾಗಿ ಡಿಸ್ ಚಾರ್ಜ್ ಆಗಿದ್ದರು ಎಂದು ವರದಿ ಹೇಳಿದೆ.
ಜನವರಿ 30 ಮತ್ತು ಫೆ.3ರಂದು ಕೇರಳದಲ್ಲಿ ಪತ್ತೆಯಾದ ಮೂವರು ಸೋಂಕಿತರು ಗುಣಮುಖರಾದ ನಂತರ ಡಿಸ್ ಚಾರ್ಜ್ ಆಗಿದ್ದರು. ಮಾರ್ಚ್ 31ರವರೆಗೆ ದೇಶದಲ್ಲಿ 124 ಜನರು ಕೋವಿಡ್ 19 ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.