ಕೊಚ್ಚಿ: ಕೇರಳದ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ನಡೆಯುತ್ತಿದೆ. ಸದ್ಯದ ಟ್ರೆಂಡ್ ಪ್ರಕಾರ ಎಲ್ ಡಿಎಫ್ ಮೇಲುಗೈ ಸಾಧಿಸಿದೆ. ತಿರುವನಂತಪುರಂ ಪಾಲಿಕೆಯಲ್ಲಿ ಆಡಳಿತಾರೂಢ ಎಲ್ ಡಿಎಫ್ ಮತ್ತು ಬಿಜೆಪಿ ನೇತೃತ್ವದ ಎನ್ ಡಿಎ ಕೂಟದ ನಡುವೆ ಪೈಪೋಟಿ ಸ್ಪರ್ಧೆ ಏರ್ಪಟ್ಟಿದೆ.
ಕೊಚ್ಚಿ ಪಾಲಿಕೆಯಲ್ಲಿ ಬಿಜೆಪಿ ಶುಭಾರಂಭ ಮಾಡಿದೆ. ಇಲ್ಲಿನ ಉತ್ತರ ಐಲ್ಯಾಂಡ್ ವಾರ್ಡ್ ನಲ್ಲಿ ಬಿಜೆಪಿ ಕೇವಲ ಒಂದು ಮತದ ಅಂತರದಿಂದ ಗೆಲುವು ಸಾಧಿಸಿದೆ. ಕಾಂಗ್ರೆಸ್ ನ ಮೇಯರ್ ಅಭ್ಯರ್ಥಿಯಾಗಿದ್ದ ಎನ್ ವೇಣುಗೋಪಾಲ್ ವಿರುದ್ಧ ಬಿಜೆಪಿ ಅಭ್ಯರ್ಥಿ ಒಂದು ಮತದ ಅಂತರದಿಂದ ವಿಜಯಿಯಾಗಿದ್ದಾರೆ.
ಇದನ್ನೂ ಓದಿ:1971ರ ಭಾರತ, ಪಾಕ್ ಯುದ್ಧ- ಬಾಂಗ್ಲಾದೇಶ ಉದಯ; ಏನಿದು ವಿಜಯ್ ದಿವಸ್ ಸಂಭ್ರಮ
ಕೇರಳದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಮೂರು ಹಂತದಲ್ಲಿ ಚುನಾವಣೆ ನಡೆದಿತ್ತು. ಮೊದಲ ಹಂತದಲ್ಲಿ 72.67% ಮತದಾನವಾಗಿದ್ದರೆ, ಎರಡನೇ ಹಂತದಲ್ಲಿ 76.38% ಮತ್ತು ಮೂರನೇ ಹಂತದಲ್ಲಿ ದಾಖಲೆಯ 78.64% ಮತದಾನವಾಗಿತ್ತು.
ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ವಿಧಾನಸಭಾ ಚುನಾವಣೆಯಲ್ಲಿನ ಪಕ್ಷಗಳ ನಿರ್ಧಾರಗಳಿಗೆ ಸೂಚಕವಾಗಿ ಪರಿಗಣಿಸಲಾಗುತ್ತದೆ. ಮುಂದಿನ ವರ್ಷ ಕೇರಳದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಹೀಗಾಗಿ ಈ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಕುತೂಹಲಕ್ಕೆ ಕಾರಣವಾಗಿದೆ.