ತಿರುವನಂತಪುರಂ: ಕೇರಳದ ಖ್ಯಾತ ಮೋಹಿನಿಯಾಟ್ಟಂ ನೃತ್ಯಗಾರ್ತಿ ಡಾ.ನೀನಾ ಪ್ರಸಾದ್ ಮತ್ತು ಅವರ ಬಳಗ ಪಾಲಕ್ಕಾಡ್ ನ ಮೋಯನ್ ಎಲ್ ಪಿ ಶಾಲೆಯಲ್ಲಿ ನೃತ್ಯ ಪ್ರದರ್ಶನದ ವೇಳೆ ಕಿರಿಕಿರಿ ಉಂಟು ಮಾಡುತ್ತಿದೆ ಎಂದು ಆರೋಪಿಸಿ ಪಾಲಕ್ಕಾಡ್ ಜಿಲ್ಲಾ ನ್ಯಾಯಾಧೀಶ ಕಲಾಂ ಪಾಶಾ ಅವರು ಪ್ರದರ್ಶನವನ್ನು ನಿಲ್ಲಿಸುವಂತೆ ಮಾಡಿರುವ ಘಟನೆ ಭಾರೀ ವಿವಾದಕ್ಕೆ ಕಾರಣವಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ರಾಷ್ಟ್ರೀಯ ಮಟ್ಟದ ಹ್ಯಾಮರ್ ಥ್ರೋನಲ್ಲಿ ದ್ವಿತೀಯ ಸ್ಥಾನ ಪಡೆದ ಗ್ರಾಮೀಣ ಪ್ರತಿಭೆ ರೇವತಿ
ವರದಿಗಳ ಪ್ರಕಾರ, ಪಾಲಕ್ಕಾಡ್ ನಗರದಲ್ಲಿನ ಮೋಯನ್ ಸರ್ಕಾರಿ ಪ್ರಾಥಮಿಕ ಶಾಲೆ ಸಮೀಪ ನ್ಯಾಯಾಧೀಶ ಪಾಶಾ ಅವರು ವಾಸಿಸುತ್ತಿದ್ದು, ಶನಿವಾರ ರಾತ್ರಿ 8.30ಕ್ಕೆ ನೀನಾ ಪ್ರಸಾದ್ ಅವರ ಮೋಹಿನಿಯಾಟ್ಟಂ ನೃತ್ಯ ಪ್ರದರ್ಶನ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಪೊಲೀಸರು ಏಕಾಏಕಿ ಪ್ರದರ್ಶನವನ್ನು ತಡೆದು ನಿಲ್ಲಿಸಿದ್ದ ಘಟನೆ ನಡೆದಿತ್ತು.
ಕೃಷ್ಣ ಮತ್ತು ಅರ್ಜುನನ ನಡುವಿನ ಸಂಬಂಧದ ವೈಪರೀತ್ಯ ಬಿಂಬಿಸುವ “ಸಖ್ಯಂ” ಶೀರ್ಷಿಕೆಯ ಒಂದು ಗಂಟೆಯ ನೃತ್ಯ ಪ್ರದರ್ಶನ ಇದಾಗಿತ್ತು. ಆದರೆ ನ್ಯಾಯಾಧೀಶರ ಆದೇಶದ ಮೇರೆಗೆ ಸ್ಥಳಕ್ಕೆ ಬಂದ ಪೊಲೀಸರು ಪ್ರದರ್ಶನವನ್ನು ನಿಲ್ಲಿಸಿದ್ದರು. ವೇದಿಕೆಯಲ್ಲಿ ಹಿರಿಯ ಕಲಾವಿದೆ ಡಾ.ನೀನಾ ಹಾಗೂ ಬಳಗಕ್ಕೆ ಅಪಮಾನ ಮಾಡಿ ಕಣ್ಣೀರಿಡುವಂತೆ ಮಾಡಿರುವುದಾಗಿ ವರದಿ ವಿವರಿಸಿದೆ.
ಘಟನೆಯ ನಂತರ ಪ್ರತಿಕ್ರಿಯೆ ನೀಡಿದ ಡಾ.ನೀನಾ ಪ್ರಸಾದ್, ಇದೊಂದು ನನ್ನ ನೃತ್ಯ ಜೀವನದಲ್ಲಿನ ಅತ್ಯಂತ ಕೆಟ್ಟ ಅನುಭವವಾಗಿದೆ. ಇದು ಕೇವಲ ನನಗಾದ ಅವಮಾನ ಮಾತ್ರವಲ್ಲ, ಸುಮಾರು ಎರಡು ವರ್ಷಗಳ ನಂತರ ವೇದಿಕೆಯಲ್ಲಿ ಅದ್ಭುತ ಪ್ರದರ್ಶನ ನೀಡಬೇಕೆಂಬ ನಿರೀಕ್ಷೆಯೊಂದಿಗೆ ಬಂದ ಸಹ ಕಲಾವಿದರಿಗೂ ದೊಡ್ಡ ಅವಮಾನವಾದಂತಾಗಿದೆ ಎಂದು ತಿಳಿಸಿದ್ದಾರೆ.