ಕೊಚ್ಚಿ: ಕೇರಳದ ಕ್ರಿಕೆಟಿಗ ಎಸ್. ಶ್ರೀಶಾಂತ್ ಮತ್ತೆ ಸಂದಿಗ್ಧಕ್ಕೆ ಸಿಲುಕಿದ್ದಾರೆ. 2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಶಾಂತ್ ಮೇಲೆ ಬಿಸಿಸಿಐ ಹೇರಿದ ಆಜೀವ ನಿಷೇಧವನ್ನು ಮಂಗಳವಾರ ಕೇರಳ ಹೈಕೋರ್ಟ್ ಎತ್ತಿಹಿಡಿದಿದೆ.
ಕಳೆದ ಆಗಸ್ಟ್ 7ರಂದು ನ್ಯಾಯಮೂರ್ತಿ ಎ.ಮಹ್ಮದ್ ಮುಷ್ತಾಕ್ ಅವರನ್ನೊಳಗೊಂಡ ಏಕಸದಸ್ಯ ನ್ಯಾಯಪೀಠವು ಶ್ರೀಶಾಂತ್ ಮೇಲೆ ಬಿಸಿಸಿಐ ಹೇರಿದ್ದ ನಿಷೇಧವನ್ನು ತೆರವುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಬಿಸಿಸಿಐ ಮೇಲ್ಮನವಿ ಸಲ್ಲಿಸಿತ್ತು.
ಮಂಗಳವಾರ ಹೈಕೋರ್ಟ್ ಮುಖ್ಯ ನ್ಯಾಯಾಧೀಶ ನವನೀತಿ ಪ್ರಸಾದ್ ಮತ್ತು ನ್ಯಾ|ಮೂ| ರಾಜ ವಿಜಯರಾಘವನ್ ಅವರನ್ನೊಳಗೊಂಡ ದ್ವಿಸದಸ್ಯ ವಿಭಾಗ ಪೀಠವು ಬಿಸಿಸಿಐ ಸಲ್ಲಿಸಿದ ಮೇಲ್ಮನವಿಯ ವಿಚಾರಣೆ ನಡೆಸಿ ಶ್ರೀಶಾಂತ್ ಮೇಲಿನ ನಿಷೇಧವನ್ನು ಎತ್ತಿಹಿಡಿಯಿತು.
ಈ ಪ್ರಕರಣದಲ್ಲಿ ಸಹಜ ನ್ಯಾಯದ ಉಲ್ಲಂಘನೆಯಾಗಿಲ್ಲ ಎಂದು ಅಭಿಪ್ರಾಯಪಟ್ಟ ದ್ವಿಸದ್ಯ ವಿಭಾಗ ಪೀಠವು ಶ್ರೀಶಾಂತ್ ಪರವಾಗಿ ನೀಡಿದ ಹಿಂದಿನ ತೀರ್ಪನ್ನು ರದ್ದುಪಡಿಸಿದೆ.
ಇದು ಬಿಸಿಸಿಐಗೆ ಸಂದ ನೈತಿಕ ಗೆಲುವಾದರೆ, ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಆಡಲು ತುದಿಗಾಲಲ್ಲಿ ನಿಂತಿದ್ದ ಶ್ರೀಶಾಂತ್‌ಗೆ ಭಾರೀ ಹಿನ್ನಡೆಯಾಗಿದೆ.