ಕೊಚ್ಚಿ: ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಮತ್ತು ಎಲ್‌ಡಿಎಫ್ ಸರ್ಕಾರದ ನಡುವಿನ “ವಿಧೇಯಕ ಜಗಳ’ದಲ್ಲಿ ಸರ್ಕಾರಕ್ಕೆ ಹಿನ್ನಡೆಯಾಗಿದೆ. ರಾಜ್ಯ ವಿಧಾನಸಭೆ ಅಂಗೀಕರಿಸಿರುವಂಥ ವಿಧೇಯಕಗಳನ್ನು ಅನಿರ್ದಿಷ್ಟಾವಧಿಗೆ ಅಂಕಿತ ಹಾಕದೇ ಇಟ್ಟುಕೊಳ್ಳುವ ಅಧಿಕಾರ ರಾಜ್ಯಪಾಲರಿಗೆ ಇಲ್ಲ ಎಂದು ಘೋಷಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ಬುಧವಾರ ವಜಾ ಮಾಡಿದೆ.
ಇಂತಿಷ್ಟೇ ದಿನಗಳೊಳಗೆ ವಿಧೇಯಕಕ್ಕೆ ಅಂಕಿತ ಹಾಕಬೇಕು ಎಂಬ ಸಮಯದ ಮಿತಿ ರಾಜ್ಯಪಾಲರಿಗೆ ಇಲ್ಲ. ಅದನ್ನು ನಾವು ಹೇರಲೂ ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಮಣಿಕುಮಾರ್ ಮತ್ತು ನ್ಯಾ.ಶಾಜಿ ಪಿ.ಚಾಲಿ ಅವರನ್ನೊಳಗೊಂಡ ವಿಭಾಗೀಯ ಪೀಠ ಹೇಳಿದೆ.
ರಾಜ್ಯಪಾಲ ಆರಿಫ್ ಅವರು ಲೋಕಾಯುಕ್ತ ತಿದ್ದುಪಡಿ ವಿಧೇಯಕ ಸೇರಿದಂತೆ ಒಟ್ಟು 6 ವಿಧೇಯಕಗಳನ್ನು ಅನಿರ್ದಿಷ್ಟಾವಧಿಗೆ ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ. ಯಾವುದಕ್ಕೂ ಅಂಕಿತ ಹಾಕುತ್ತಿಲ್ಲ. ಇದು ನಿರಂಕುಶ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ವಿರುದ್ಧವಾದದ್ದು. ಹೀಗಾಗಿ, ಯಾವುದೇ ವಿಧೇಯಕ ತಮ್ಮ ಮುಂದೆ ಬಂದಾಗಲೂ ಅದಕ್ಕೆ ಅಂಕಿತ ಹಾಕಲು ರಾಷ್ಟ್ರಪತಿಗಳು ಮತ್ತು ರಾಜ್ಯಪಾಲರಿಗೆ ಕಾಲಮಿತಿ ನಿಗದಿಪಡಿಸುವಂತೆ ಸಂವಿಧಾನಕ್ಕೆ ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಮಂಗಳವಾರ ಪಿಐಎಲ್‌ವೊಂದನ್ನು ಸಲ್ಲಿಸಲಾಗಿತ್ತು.
ಸಂಪುಟ ಅಸ್ತು:
ಈ ನಡುವೆ, ರಾಜ್ಯ ವಿಶ್ವವಿದ್ಯಾಲಯಗಳ ಕುಲಾಧಿಪತಿ ಹುದ್ದೆಯಿಂದ ರಾಜ್ಯಪಾಲರನ್ನು ತೆಗೆದುಹಾಕುವ ಕರಡು ವಿಧೇಯಕಕ್ಕೆ ಕೇರಳ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ. ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಇದು ಮಂಡನೆಯಾಗಲಿದೆ.