ತಿರುವನಂತಪುರಂ:ಮಹಾಮಳೆ, ಪ್ರವಾಹದಲ್ಲಿ ಕೇರಳ ತತ್ತರಿಸಿ ಹೋಗಿದ್ದ ಸಂದರ್ಭದಲ್ಲಿ ಕೊಳಚೆ ನೀರಿನ್ನೂ ಲೆಕ್ಕಿಸದೇ ತನ್ನ ಜೀವದ ಹಂಗು ತೊರೆದು ಜಿನೇಶ್ ನೂರಾರು ಜನರ ಪ್ರಾಣ ಉಳಿಸಿದ್ದ. ಈ ಯುವಕನ ಸಾಹಸದ ವಿಡಿಯೋ ತುಣುಕು, ಪತ್ರಿಕೆಯಲ್ಲಿನ ವರದಿಗಳ ಮೂಲಕ ಹೀರೋ ಆಗಿಬಿಟ್ಟಿದ್ದ. ಆದರೆ ವಿಪರ್ಯಾಸ ಏನೆಂದರೆ ನೂರಾರು ಮಂದಿ ಪ್ರಾಣ ಉಳಿಸಿದ್ದ ಜಿನೇಶ್ ಅಪಘಾತವಾಗಿ ಸಹಾಯಕ್ಕಾಗಿ ಅಂಗಲಾಚಿಯೇ ಪ್ರಾಣಬಿಟ್ಟಿರುವ ವಿಷಯ ಬಹಿರಂಗವಾಗಿದೆ.
ಭಾನುವಾರ ಜಿನೇಶ್ ಹೊರಹೋಗಿದ್ದ ವೇಳೆ ಮನೆಯಿಂದ ಸುಮಾರು 12 ಕಿಮೀ ದೂರದ ಹೆದ್ದಾರಿಯಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ಆತನ ಸೊಂಟದ ಭಾಗದ ಮೇಲೆ ಲಾರಿ ಹತ್ತಿದ್ದರಿಂದ ಸಹಾಯಕ್ಕಾಗಿ ಅಂಗಲಾಚುತ್ತಿದ್ದ ಎಂದು ಜಿನೇಶ್ ಗೆಳೆಯ ಜಗನ್ ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡುತ್ತ ತಿಳಿಸಿದ್ದಾರೆ.
ಜಿನೇಶ್ ಮತ್ತು ಜಗನ್ ಬೈಕ್ ನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿದ್ದು, ಲಾರಿಗೆ ಆ ಕ್ಷಣಕ್ಕೆ ಬ್ರೇಕ್ ಹಾಕಲು ಸಾಧ್ಯವಾಗದೇ ರಸ್ತೆ ಮೇಲೆ ಬಿದ್ದಿದ್ದ ಜಿನೇಶ್ ಮೈಮೇಲೆ ಹರಿದು ಹೋಗಿತ್ತು ಎಂದು ವಿವರಿಸಿದ್ದಾರೆ.
24ರ ಹರೆಯದ ಜಿನೇಶ್ ರಕ್ಷಿಸಿ, ರಕ್ಷಿಸಿ ಎಂದು ಗೋಗರೆದಿದ್ದ. ಆದರೆ ಬೇರೆಯವರಿಗೆ ಸಹಾಯ ಮಾಡಬೇಕೆಂದು ಸದಾ ತುಡಿಯುತ್ತಿದ್ದ ಜಿನೇಶ್ ಗೆ ಇಂತಹ ಸ್ಥಿತಿ ಬರುತ್ತೆ ಎಂಬುದನ್ನು ನನ್ನಿಂದ ನಂಬಲು ಸಾಧ್ಯವಾಗುತ್ತಿಲ್ಲ. ಚೆಂಗನ್ನೂರ್ ನಲ್ಲಿಯೇ ಪ್ರವಾಹದಲ್ಲಿ ಸಿಲುಕಿದ್ದ ನೂರಕ್ಕೂ ಅಧಿಕ ಜನರನ್ನು ಜಿನೇಶ್ ಪ್ರಾಣದ ಹಂಗು ತೊರೆದು ರಕ್ಷಿಸಿದ್ದ. ಆತ ತನ್ನ ಜೀವ ಉಳಿಸಿ ಎಂದು ಬೇಡಿಕೊಂಡರೂ ಯಾರೊಬ್ಬರೂ ಸಹಾಯಕ್ಕೆ ಬಂದಿರಲಿಲ್ಲ ಎಂದು ಗೆಳೆಯ ಜಗನ್ ಮಾಹಿತಿ ನೀಡಿದ್ದಾರೆ.
ಸುಮಾರು 30 ನಿಮಿಷಗಳ ನಂತರ ಆ್ಯಂಬುಲೆನ್ಸ್ ಬಂದಿತ್ತು. ಕೂಡಲೇ ಇಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೂ ಚಿಕಿತ್ಸೆ ನೀಡಿದರೂ ಫಲಕಾರಿಯಾಗಿಲ್ಲವಾಗಿತ್ತು. ಕೊನೆಗೆ ಜಿನೇಶ್ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದರು ಎಂದು ವರದಿ ತಿಳಿಸಿದೆ.