ತಿರುವನಂತಪುರ: ವಿವಿಗಳ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮತ್ತು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ನಡುವೆ ಹಗ್ಗಜಗ್ಗಾಟ ನಡೆಯುತ್ತಿದೆ. ಅದರ ನಡುವೆಯೇ ಮೀನುಗಾರಿಕೆ ಮತ್ತು ಸಾಗರ ಅಧ್ಯಯನಗಳ ಕೇರಳ ವಿಶ್ವವಿದ್ಯಾಲಯ (ಕೆಯುಎಫ್ಎಸ್)ದ ಕುಲಪತಿ ನೇಮಕವನ್ನು ಕೇರಳ ಹೈಕೋರ್ಟ್ ರದ್ದುಗೊಳಿಸಿದೆ.
ಯುಜಿಸಿ ನಿಯಮಗಳನ್ನು ಉಲ್ಲಂ ಸಿ ಕುಲಪತಿಗಳ ನೇಮಕ ಮಾಡಲಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಕುಲಾಧಿಪತಿ ಹುದ್ದೆಯಿಂದ ರಾಜ್ಯಪಾಲರನ್ನು ಮುಕ್ತಗೊಳಿಸಬೇಕು ಎಂದು ಕೇರಳ ಸರ್ಕಾರ ಸುಗ್ರೀವಾಜ್ಞೆ ಮಂಡಿಸಿರುವ ಬೆನ್ನಲ್ಲೇ ಈ ಘಟನೆ ಜರುಗಿದೆ.
ಕೆಯುಎಫ್ಒಎಸ್ ಕುಲಪತಿ ನೇಮಕ ಪ್ರಶ್ನಿಸಿ ಹೈಕೋರ್ಟ್‌ಗೆ ಎರಡು ಅರ್ಜಿಗಳು ಸಲ್ಲಿಕೆಯಾಗಿದ್ದವು. ಅರ್ಜಿ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಮಣಿಕುಮಾರ್ ಮತ್ತು ನ್ಯಾ. ಶಾಜಿ ಪಿ.ಚಾಲಿ ಅವರನ್ನು ಒಳಗೊಂಡ ನ್ಯಾಯಪೀಠ, ಕೆಯುಎಫ್ಎಸ್ ವಿಶ್ವವಿದ್ಯಾಲಯಕ್ಕೆ ಕುಲಪತಿಯಾಗಿ ಡಾ. ಕೆ.ರಿಜಿ ಜಾನ್ ಅವರ ನೇಮಕವು 2018ರ ಯುಜಿಸಿ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಹೇಳಿತು.
ಕುಲಪತಿ ನೇಮಕಾತಿಗಾಗಿ ಮೂವರು ಅಥವಾ ಅದಕ್ಕಿಂತ ಹೆಚ್ಚು ಅಭ್ಯರ್ಥಿಗಳ ಹೆಸರನ್ನು ಕುಲಾಧಿಪತಿಗೆ ಕಳುಹಿಸಬೇಕೆಂಬ ಯುಜಿಸಿಯ ನಿಯಮವನ್ನು ಪಾಲಿಸದೆ ಕುಲಪತಿಗಳ ನೇಮಕ ಮಾಡಲಾಗಿದೆ. ನೂತನ ಕುಲಪತಿಯನ್ನು ನೇಮಿಸಲು ಶೋಧನಾ ಸಮಿತಿ ರಚಿಸುವ ಪ್ರಕ್ರಿಯೆಯನ್ನು ಕುಲಾಧಿಪತಿ ಆರಂಭಿಸಬೇಕು ಮತ್ತು ಯುಜಿಸಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ನ್ಯಾಯಪೀಠ ಸೂಚಿಸಿದೆ.
ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಇತ್ತೀಚೆಗೆ ಕೆಯುಎಫ್ಒಎಸ್ ಕುಲಪತಿ ರಿಜಿ ಜಾನ್ ಅವರ ರಾಜೀನಾಮೆಯನ್ನು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಕೇಳಿದ್ದರು.