ವಯನಾಡ್ : ಕೇರಳದ ವಯನಾಡ್‌ನಲ್ಲಿರುವ ಪಶುವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ವಿಶ್ವವಿದ್ಯಾನಿಲಯಗಳ ಕುಲಪತಿಯಾಗಿರುವ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಶನಿವಾರ ಉಪಕುಲಪತಿಯನ್ನು ಅಮಾನತುಗೊಳಿಸಿದ್ದಾರೆ.
ಫೆಬ್ರವರಿ 18 ರಂದು ನಡೆದ 20 ವರ್ಷದ ಸಿದ್ಧಾರ್ಥನ್ ಜೆ.ಎಸ್.ಸಾವಿನ ಘಟನೆಯ ಕುರಿತು ವಿಸಿ ಪ್ರೊ.ಡಾ.ಎಂ ಆರ್ ಶಶೀಂದ್ರ ನಾಥ್ ಅವರು ನೀಡಿದ ವರದಿಯು “ಉಪ ಕುಲಪತಿಗಳ ಕಡೆಯಿಂದ ಕರ್ತವ್ಯ ಲೋಪಕ್ಕೆ ಸಾಕ್ಷಿಯಾಗಿದೆ” ಎಂದು ಅಮಾನತು ಆದೇಶದಲ್ಲಿ ಖಾನ್ ಹೇಳಿದ್ದಾರೆ.
“ವಿಸಿ ಅವರ ಕರ್ತವ್ಯ ಮತ್ತು ಜವಾಬ್ದಾರಿಗಳ ಬಗ್ಗೆ ಅಸಡ್ಡೆ, ನಿರ್ಲಕ್ಷ್ಯ ಮತ್ತು ನಿಷ್ಠುರ ವರ್ತನೆ, ವಿಶೇಷವಾಗಿ ಈ ಅಹಿತಕರ ಘಟನೆಯ ಹಿನ್ನೆಲೆಯಲ್ಲಿ ಫೆಬ್ರವರಿ 28 ರ ಅವರ ವರದಿಯಿಂದ ಬಹಿರಂಗವಾಗಿದೆ” ಎಂದು ರಾಜ್ಯಪಾಲರು ಹೇಳಿದ್ದು, ವಿದ್ಯಾರ್ಥಿಯ ಸಾವಿನ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ. ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‌ನ ಹಾಲಿ ಅಥವಾ ನಿವೃತ್ತ ನ್ಯಾಯಾಧೀಶರಿಂದ ತನಿಖೆಗೆ ಸೂಚಿಸಿದ್ದಾರೆ.
ಸಿದ್ಧಾರ್ಥನ್ ಫೆಬ್ರವರಿ 18 ರಂದು ಹಾಸ್ಟೆಲ್‌ನ ಸ್ನಾನಗೃಹದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಆತನನ್ನು ಕೆಲವು ಸ್ಥಳೀಯ ಎಸ್‌ಎಫ್‌ಐ ಮುಖಂಡರು ಮತ್ತು ಕಾರ್ಯಕರ್ತರು ಹೊಡೆದು ಹತ್ಯೆಗೈದಿದ್ದಾರೆ ಎಂದು ಕಾಲೇಜು ಸಹಪಾಠಿಗಳು ಹೇಳಿದ್ದರು ಎಂದು ಪೋಷಕರು ಹೇಳಿದ್ದರು. ಘಟನೆ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿತ್ತು.
ಆಡಳಿತಾರೂಢ ಸಿಪಿಐ(ಎಂ) ನ ವಿದ್ಯಾರ್ಥಿ ಘಟಕ ಎಸ್‌ಎಫ್‌ಐ ಮೇಲೆ ಮಾಡಿದ್ದ ಆರೋಪ ವಿಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಹೋರಾಟಕ್ಕಿಳಿಯಲು ಕಾರಣವಾಗಿತ್ತು.