ತಿರುವನಂತಪುರ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶ ನಿಟ್ಟಿನಲ್ಲಿ ಅ.17-22ರ ವರೆಗೆ ನಡೆದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಭಾಗವಹಿಸಿದವರ ವಿರುದ್ಧ ಕೇರಳ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಒಟ್ಟು 210 ಮಂದಿಯ ವಿವರ ಕಲೆ ಹಾಕಲಾಗಿದ್ದು, ಅವರ ಫೋಟೋಗಳನ್ನು ಬಿಡುಗಡೆ ಮಾಡಲಾಗಿದೆ. ವಿವಿಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗಳಿಗೆ ವಿವರ ಕಳುಹಿಸಿಕೊಡಲಾಗಿದೆ. ಗುರುತು ಪತ್ತೆಗೆ ವಿಶೇಷ ತಂಡ ರಚಿಸಲಾಗುತ್ತದೆ ಎಂದು ಪತ್ತಣಂತಿಟ್ಟ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ನಾರಾಯಣನ್ ತಿಳಿಸಿದ್ದಾರೆ. 2 ದಿನಗಳಲ್ಲಿ 1500 ಮಂದಿಯನ್ನು ಬಂಧಿಸಿರುವುದಾಗಿಯೂ ತಿಳಿಸಿದ್ದಾರೆ.
ಇದೇ ವೇಳೆ ನ.17ರಿಂದ ಮತ್ತೆ ಅಯ್ಯಪ್ಪ ದೇಗುಲದ ಬಾಗಿಲು ತೆರೆಯಲಿದ್ದು, ಭದ್ರತೆಗಾಗಿ 5 ಸಾವಿರ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜಿಸಲು ಉದ್ದೇಶಿಸಲಾಗಿದೆ. ದೇಗುಲದ ಸನ್ನಿಧಾನ, ಪಂಪಾ, ನಿಳಕ್ಕಲ್‌ಗಳಲ್ಲಿಯೂ ಸಿಸಿಟಿವಿ ವ್ಯವಸ್ಥೆ ಹೆಚ್ಚಿಸಲಾಗುತ್ತದೆ ಎಂದಿದ್ದಾರೆ.
ಹೈಕೋರ್ಟ್‌ಗೆ ಮನವಿ: ದೇಗುಲಕ್ಕೆ ಹಿಂದೂಯೇತರರು ಪ್ರವೇಶಿಸಬಾರದು ಎಂದು ಆದೇಶ ಹೊರಡಿಸುವಂತೆ ಕೋರಿ ಬಿಜೆಪಿ ನಾಯಕ ಟಿ.ಜಿ. ಮೋಹನ್‌ದಾಸ್ ಕೇರಳ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ. ಕೇರಳ ಸಾರ್ವಜನಿಕ ಪೂಜಾ ಸ್ಥಳ (ಪ್ರವೇಶಾವಕಾಶ ಅಧಿಕಾರ) ಕಾಯ್ದೆ 1956ರ ನಿಯಮ 3ರ ಅನ್ವಯ ಆದೇಶ ಜಾರಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಸೆ.28ರಂದು ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಹಿಂದೂ ಮಹಿಳೆಯರಿಗೆ ಮಾತ್ರ ಪ್ರವೇಶ ಎಂಬ ಅಂಶವನ್ನು ಪ್ರಸ್ತಾವ ಮಾಡಿದೆ. ಹಿಂದೂಯೇತರರು ಮತ್ತು ಮೂರ್ತಿ ಪೂಜೆ ಮಾಡದೇ ಇರುವವರು ದೇಗುಲ ಪ್ರವೇಶಿಸಿದರೆ ಕಾಯ್ದೆಯ ನಿಯಮ ಉಲ್ಲಂಘನೆಯಾಗುತ್ತದೆ ಎಂದು ತಮ್ಮ ಅರ್ಜಿಯಲ್ಲಿ ಅರಿಕೆ ಮಾಡಿದ್ದಾರೆ. ಅಲ್ಲದೆ, ಪಿಣರಾಯಿ ನೇತೃತ್ವದ ಸರಕಾರ ಹಿಂದೂಯೇತರರಿಗೆ ಬಿಗಿ ಭದ್ರತೆಯಲ್ಲಿ ದೇಗುಲ ಪ್ರವೇಶ ಯತ್ನಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂದು ದೂರಿದ್ದಾರೆ. ಇದೇ ವೇಳೆ ದೇಗುಲ ಪ್ರವೇಶಾವಕಾಶ ಸಿಗದೇ ಇದ್ದ ಬಗ್ಗೆ ನಾಲ್ವರು ಮಹಿಳೆಯರು ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ವಿಚಾರಣೆಗೆ ಅಂಗೀಕರಿಸಿದೆ. ಅ.29 ರಂದು ವಿಚಾರಣೆ ನಡೆಯಲಿದೆ.
31ಕ್ಕೆ ಸಚಿವರ ಸಭೆ
ತೀರ್ಪಿನ ಬಳಿಕದ ಬೆಳವಣಿಗೆ ಹಿನ್ನೆಲೆಯಲ್ಲಿ ಕೇರಳ ಸಿಎಂ ವಿಜಯನ್ ಅ.31ರಂದು ದಕ್ಷಿಣ ಭಾರತ ರಾಜ್ಯಗಳ ಮುಜರಾಯಿ ಸಚಿವರ ಸಭೆ ಕರೆದಿದ್ದಾರೆ. ಅದರಲ್ಲಿ ತೀರ್ಪಿನ ಅನುಷ್ಠಾನ ಮತ್ತು ಮಹಿಳೆಯರ ಸುರಕ್ಷತೆ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ ಎಂದು ‘ಟೈಮ್ಸ್ ನೌ’ ವರದಿ ಮಾಡಿದೆ. ನ.17 ರಿಂದ ದೇಗುಲ ಮತ್ತೆ ತೆರೆಯಲಿರುವ ಕಾರಣ ಕೈಗೊಳ್ಳಬೇಕಾಗದ ಕಾನೂನು ಸುವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸುವ ನಿಟ್ಟಿನಲ್ಲಿ ಚರ್ಚೆ ನಡೆಸುವ ಸಾಧ್ಯತೆಗಳಿವೆ.